ಮಾಲೀಕರಿಂದ ಕಾರ್ಮಿಕರ ಶೋಷಣೆ ನಿಲ್ಲಬೇಕು: ಗಾಂಧಿನಗರ ನಾರಾಯಣಸ್ವಾಮಿ

| Published : May 02 2024, 12:23 AM IST

ಮಾಲೀಕರಿಂದ ಕಾರ್ಮಿಕರ ಶೋಷಣೆ ನಿಲ್ಲಬೇಕು: ಗಾಂಧಿನಗರ ನಾರಾಯಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಉದ್ದಿಮೆಗಳು, ಸರ್ಕಾರಿ ಕಚೇರಿಗಳು, ಕೈಗಾರಿಕೆಗಳಲ್ಲಿ ಕಾಯಂ ಸ್ವರೂಪದ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳದೇ ಕೇವಲ ಗುತ್ತಿಗೆ ಕಾರ್ಮಿಕರನ್ನು, ಟ್ರೈನಿಗಳನ್ನು ನೇಮಕ ಮಾಡಿಕೊಂಡು ಅತ್ಯಂತ ಕಡಿಮೆ ವೇತನವನ್ನು ನೀಡಿ, ಹೆಚ್ಚಿನ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಬೆಲೆ ಏರಿಕೆಗೆ ತಕ್ಕಂತೆ ವೇತನವನ್ನು ನೀಡುತ್ತಿಲ್ಲ. ಈ ಬಗ್ಗೆ ಎಲ್ಲಾ ಕಾರ್ಮಿಕರು ಒಗ್ಗಟ್ಟಿನಿಂದ ಹೋರಾಟಗಳನ್ನು ನಡೆಸುವ ಅಗತ್ಯ ಇದೆ.

ಕನ್ನಡಪ್ರಭ ವಾರ್ತೆ ಕೋಲಾರ

ಕಾರ್ಮಿಕರ ನೂರಾರು ಹೋರಾಟಗಳ ಫಲವಾಗಿ ದೇಶದಲ್ಲಿ ಜಾರಿಯಾಗಿರುವ ಹಲವು ಕಾರ್ಮಿಕ ಕಾನೂನುಗಳನ್ನು ಇಂದು ಸರಕಾರವು ಮಾಲೀಕರ ಪರವಾಗಿ ತಿದ್ದುಪಡಿ ಮಾಡಿ, ಕಾರ್ಮಿಕರನ್ನು ಶೋಷಣೆ ಮಾಡಲು ಮುಕ್ತ ಅವಕಾಶ ನೀಡಿದೆ. ಈ ಕುರಿತು ಕಾರ್ಮಿಕರು ಒಗ್ಗಟ್ಟಿನಿಂದ ಸಮರಶೀಲ ಹೋರಾಟವನ್ನು ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ತಾಲೂಕಿನ ನರಸಾಪುರ ಕೈಗಾರಿಕಾ ಪ್ರಾಂಗಣದಲ್ಲಿ ಹಲವು ಕೈಗಾರಿಕಾ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ವಿಶ್ವ ಕಾರ್ಮಿಕ ದಿನ ಆಚರಿಸಿದವು. ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಕಾರ್ಮಿಕರನ್ನು ತೀವ್ರ ರೀತಿಯಲ್ಲಿ ಶೋಷಣೆ ಮಾಡುತ್ತಿದ್ದ ಅಮೇರಿಕಾದ ಚಿಕ್ಯಾಗೋ ನಗರದಲ್ಲಿ ೧೮೮೬ರಲ್ಲಿ ಕೆಲಸದ ಅವಧಿಯನ್ನು ೮ ಗಂಟೆಗಳಾಗಿ ನಿಗದಿ ಮಾಡಬೇಕೆಂದು ನಡೆದ ಹೋರಾಟದ ಸಂದರ್ಭದಲ್ಲಿ ೬ ಮಂದಿ ಕಾರ್ಮಿಕರು ಹುತಾತ್ಮರಾದರು. ಇವರ ನೆನಪಿಗಾಗಿ ಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಸ್ಮರಿಸಿದರು.

ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಜಾರಿಯಾಗಿದ್ದ ಹಲವಾರು ಕಾನೂನುಗಳನ್ನು ಸುಧಾರಣೆಯ ಹೆಸರಿನಲ್ಲಿ ಮಾಲೀಕರಿಗೆ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗುತ್ತಿದೆ. ಕಾರ್ಮಿಕರು ಸಂಘ ರಚಿಸುವುದು ಸಂವಿಧಾನಾತ್ಮಕ ಹಕ್ಕಾಗಿದ್ದರೂ, ಸಂಘ ರಚಿಸುವುದು, ದುಡಿಮೆಗೆ ತಕ್ಕ ಪ್ರತಿಫಲ ಕೇಳುವುದು, ಪ್ರತಿಭಟನೆ ನಡೆಸುವುದು ಅಪರಾಧ ಎಂಬ ರೀತಿಯಲ್ಲಿ ಕಾನೂನುಗಳನ್ನು ತಿದ್ದುಪಡಿ ಮಾಡಿ, ಅವುಗಳನ್ನು ಜಾರಿ ಮಾಡಲು ಈಗಿನ ಕೇಂದ್ರ ಸರ್ಕಾರ ಹವಣಿಸುತ್ತಿದೆ ಎಂದು ಗಾಂಧಿನಗರ ನಾರಾಯಣಸ್ವಾಮಿ ದೂರಿದರು.

ಇತ್ತೀಚಿನ ದಿನಗಳಲ್ಲಿ ಉದ್ದಿಮೆಗಳು, ಸರ್ಕಾರಿ ಕಚೇರಿಗಳು, ಕೈಗಾರಿಕೆಗಳಲ್ಲಿ ಕಾಯಂ ಸ್ವರೂಪದ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳದೇ ಕೇವಲ ಗುತ್ತಿಗೆ ಕಾರ್ಮಿಕರನ್ನು, ಟ್ರೈನಿಗಳನ್ನು ನೇಮಕ ಮಾಡಿಕೊಂಡು ಅತ್ಯಂತ ಕಡಿಮೆ ವೇತನವನ್ನು ನೀಡಿ, ಹೆಚ್ಚಿನ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಬೆಲೆ ಏರಿಕೆಗೆ ತಕ್ಕಂತೆ ವೇತನವನ್ನು ನೀಡುತ್ತಿಲ್ಲ. ಈ ಬಗ್ಗೆ ಎಲ್ಲಾ ಕಾರ್ಮಿಕರು ಒಗ್ಗಟ್ಟಿನಿಂದ ಹೋರಾಟಗಳನ್ನು ನಡೆಸುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು.

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ಮೇ ದಿನಾಚರಣೆಯ ಪ್ರಾಮುಖ್ಯತೆ ವಿವರಿಸಿದರಲ್ಲದೇ ಕಾರ್ಮಿಕರು ಸ್ವಹಿತಾಸಕ್ತಿಗಳಿಗೆ ಬಲಿಯಾಗದೇ ಕಾರ್ಮಿಕರ ಹಿತವನ್ನು ಕಾಯುವಂತಾಗಬೇಕು. ಕಾರ್ಮಿಕರ ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಗೆಲುವು ಸಾಧ್ಯ ಎಂದು ತಿಳಿಸಿದರು.

ಸಿಐಟಿಯು ಜಿಲ್ಲಾ ಖಜಾಂಚಿ ಎಚ್.ಬಿ.ಕೃಷ್ಣಪ್ಪ ಮಾತನಾಡಿದರು

ವಿವಿಧ ಕೈಗಾರಿಕಾ ಕಾರ್ಮಿಕ ಸಂಘಟನೆಗಳ ಮುಖಂಡ ರಾಜು, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಮುಖಂಡ ಕುರ್ಕಿ ದೇವರಾಜ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಭೀಮರಾಜ್, ಸಿಐಟಿಯು ಮುಖಂಡ ಮೋಹನ್‌ಬಾಬು, ಡಿವೈಎಫ್‌ಐ ಮುಖಂಡ ಮುಸ್ತಾಪ, ಎಕ್ಸಿಡಿ ಕಾರ್ಮಿಕರ ಸಂಘದ ಮುಖಂಡರಾದ ವಿ.ಹರೀಶ್, ಪ್ರಮೋದ್, ರಮೇಶ್ ಇದ್ದರು.