ಅಂಕೋಲಾ ತಾಲೂಕಿನ ಹಟ್ಟಿಕೇರಿಯ ಟೋಲ್‌ನಾಕಾದ ಎದುರುಗಡೆಯಲ್ಲಿ ನೌಕಾನೆಲೆಯ ಯೋಜನೆಯ ಒಂದು ಭಾಗವಾಗಿ ನೆಲೆಗೊಂಡ ವಜ್ರಕೋಶ ಎಂಬ ಶಸ್ತ್ರಾಸ್ತ್ರ ಸಂಗ್ರಹಣಾಗಾರದ ಸಮೀಪ ಭಾರಿ ಸ್ಫೋಟದಿಂದ ಹತ್ತಿರದ ಅಲಗೇರಿ ಸುತ್ತಮುತ್ತ ಮನೆಗಳು ಬಿರುಕು ಬಿಟ್ಟಿದೆ.

ಅಂಕೋಲಾ: ತಾಲೂಕಿನ ಹಟ್ಟಿಕೇರಿಯ ಟೋಲ್‌ನಾಕಾದ ಎದುರುಗಡೆಯಲ್ಲಿ ನೌಕಾನೆಲೆಯ ಯೋಜನೆಯ ಒಂದು ಭಾಗವಾಗಿ ನೆಲೆಗೊಂಡ ವಜ್ರಕೋಶ ಎಂಬ ಶಸ್ತ್ರಾಸ್ತ್ರ ಸಂಗ್ರಹಣಾಗಾರದ ಸಮೀಪ ಭಾರಿ ಸ್ಫೋಟದಿಂದ ಹತ್ತಿರದ ಅಲಗೇರಿ ಸುತ್ತಮುತ್ತ ಮನೆಗಳು ಬಿರುಕು ಬಿಟ್ಟಿದೆ.

ಇಲ್ಲಿ ಕಾಮಗಾರಿ ಜರುಗುತ್ತಿದೆಯೋ ಅಥವಾ ಬೇರೆ ಏನಾದರೂ ಆಗಿದೆಯೋ ಎಂಬ ಆತಂಕ ಜನರಲ್ಲಿ ಕಾಡುತ್ತಿದೆ. ಏಕೆಂದರೆ ಇದೊಂದು ರಕ್ಷಣಾ ಇಲಾಖೆಯ ಗೌಪ್ಯಸ್ಥಳವಾಗಿದೆ.ಈ ಹಿಂದೆಯೂ ಬ್ಲಾಸ್ಟಿಂಗ್ ಹೆಸರಲ್ಲಿ ಇಂಥ ಭಾರೀ ಶಬ್ದಗಳ ಸ್ಫೋಟ ನಡೆದಿತ್ತು. ಅಂದು ಕುಮಟಾ ಉಪವಿಭಾಗಾಧಿಕಾರಿಯವರಲ್ಲಿ ದೂರು ಸಲ್ಲಿಸಲಾಗಿತ್ತು. ಈ ಬಾರಿಯ ಸ್ಫೋಟದಲ್ಲಿ ಹಲವಾರು ಮೈಲಿ ದೂರವಿರುವ ಅಲಗೇರಿಯಲ್ಲಿನ ಮನೆಗಳು ಬಿರುಕು ಬಿಟ್ಟಿವೆ. ಬ್ಲಾಸ್ಟಿಂಗ್ ಆನಂತರ ಸ್ಥಳದಿಂದ ಉಂಗುರದಾಕೃತಿಯ ಧೂಮ್ರ ವಲಯ ಭಾರೀ ಗಾತ್ರದಲ್ಲಿ ಹರಡಿಕೊಂಡು ಮೇಲೇರುತ್ತಿತ್ತು. ಈ ಹಿಂದೆ ತೋಡೂರು ಮತ್ತು ಈಡೂರು ಭಾಗದಲ್ಲಿ ನಡೆದ ಸ್ಫೋಟದಲ್ಲಿ ಸಹ ಮನೆಯ ಮೇಲೆ ಕಲ್ಲುಗಳು ಬಂದು ಬೀಳುತ್ತಿದ್ದವು. ಅಂದಿನ ಘಟನೆಯನ್ನು ತಾಲೂಕು ಆಡಳಿತ ನಿರಾಕರಿಸಿತ್ತು.

ಈ ಕುರಿತು ಅಂಕೋಲಾ ತಹಸೀಲ್ದಾರ್‌ ಚಿಕ್ಕಪ್ಪ ನಾಯಕ ವಿವರಣೆ ನೀಡಿದ್ದು, ಕುಮಟಾ ಉಪವಿಭಾಗಾಧಿಕಾರಿ ಜತೆ, ವಜ್ರಕೋಶದ ಅಧಿಕಾರಿಯವರೊಂದಿಗೆ ಈ ಸ್ಫೋಟದಿಂದ ಆಗಿರುವ ಅನಾಹುತಗಳ ಕುರಿತು ಮಾತನಾಡಿದ್ದೇವೆ. ಸಾರ್ವಜನಿಕ ಕಟ್ಟಡಕ್ಕೆ ಹಾನಿಯಾಗಿರುವ ಕುರಿತು ತಿಳಿಸಿರುವೆ. ಶನಿವಾರ ಪೊಲೀಸ್‌, ಕಂದಾಯ ಮತ್ತು ಪಿಡಿಒ ಸೇರಿ ಮೂವರು ಜಂಟಿಯಾಗಿ ಸ್ಥಳವನ್ನು ಪರಿಶೀಲಿಸುತ್ತಾರೆ. ಅವರ ವರದಿಯ ಮೇಲೆ ನಾನೊಂದು ಪ್ರತ್ಯೇಕ ವರದಿ ಮಾಡಿ ಕಳಿಹಿಸುತ್ತೇನೆ ಎಂದು ಹೇಳಿದರು.