ಸಾರಾಂಶ
ತುಮಕೂರು: ಎಕ್ಸ್‌ಪ್ರೆಸ್ ಪೈಪ್‌ಲೈನ್ ಲಿಂಕ್ ಕೆನಾಲ್ ಯೋಜನೆ ಅನಾವಶ್ಯಕ ಎಂಬುದು ಸಾಮಾನ್ಯ ಜನರಿಗೂ ಅರ್ಥವಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿ ಕೆಲವರು ಹಣ ಮಾಡಿಕೊಳ್ಳುವ ಈ ಯೋಜನೆ ವಿರುದ್ಧ ನಾವು ಹೋರಾಟ ಮಾಡುವುದರಲ್ಲಿ ತಪ್ಪಿಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಕುಣಿಗಲ್ ತಾಲೂಕಿನಿಂದ ಮಾಗಡಿಗೆ ಮೂರು ಟಿಎಂಸಿ ನೀರು ಹರಿಸಲು ಯಾವುದೇ ತಂಟೆ ತಕರಾರು ಇಲ್ಲ. ಆದರೆ ಆಧುನೀಕರಣಗೊಂಡ ನಾಲೆಯಲ್ಲಿ ವಿನ್ಯಾಸಿತ 527 ಕ್ಯುಸೆಕ್ಸ್ ಅಂದರೆ ದಿನಕ್ಕೆ 45 ರಿಂದ 50 ಎಂಸಿಎಫ್‌ಟಿ ನೀರನ್ನು 60 ರಿಂದ 65 ದಿನಗಳ ಕಾಲ ನಿರಂತರವಾಗಿ ಹರಿಸಿದರೆ ನಿಗದಿತ ಮೂರು ಟಿಎಂಸಿ ನೀರು ಹರಿಯುತ್ತದೆ. ಹೀಗಿದ್ದರೂ ಸಹ ಟಿಬಿಸಿ 70 ಕಿ.ಮೀ.ನಿಂದ 167ನೇ ಕಿ.ಮೀ.ಗೆ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಅಂದಾಜು 986 ಕೋಟಿ ರು. ವೆಚ್ಚದಲ್ಲಿ ಹರಿಸಲು ಹೊರಟಿರುವುದು ಏಕೆ ಎಂದು ಪ್ರಶ್ನಿಸಿದರು.ಟಿ.ಬಿ.ಸಿ. ನಾಲೆಯ 1 ಮತ್ತು 2ನೇ ಹಂತ ಅಂದರೆ 0 ಕಿ.ಮೀ.ನಿಂದ 70 ಕಿ.ಮೀ., 70 ರಿಂದ 165 ಕಿ.ಮೀ. ಆಧುನೀಕರಣಗೊಳಿಸುವಾಗ ಅನುಮೋದನೆ ಪಡೆದ ವರದಿಯಲ್ಲಿ ಹೇಳಿರುವುದು ಸುಳ್ಳೆ ಎಂದ ಅವರು, ಸರ್ಕಾರ ಮತ್ತು ನೀರಾವರಿ ಇಲಾಖೆ ಎಚ್ಚೆತ್ತುಕೊಂಡು ಯೋಜನೆ ಕೈಬಿಡದಿದ್ದರೆ ಜಿಲ್ಲೆಯ ಜನತೆ ಎಲ್ಲಾ ರೀತಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ಕುಣಿಗಲ್‌ನಿಂದ ಮಾಗಡಿ ತಾಲೂಕಿಗೆ ಕುಡಿಯುವ ನೀರು ಯೋಜನೆಗೆ ನೀರನ್ನು ಹರಿಸುವ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಗುಬ್ಬಿ ಮತ್ತು ತುರುವೇಕೆರೆ ವಿಧಾನ ಪರಿಷತ್ ಕ್ಷೇತ್ರ ವ್ಯಾಪ್ತಿಯ ಸುಮಾರು ಹಳ್ಳಿಗಳ ರೈತರ ಜಮೀನು, ಜಿಲ್ಲಾ ಪಂಚಾಯತ್ ಮತ್ತು ಲೋಕೋಪಯೋಗಿ ಇಲಾಖೆಗೆ ಒಳಪಡುವ ರಸ್ತೆಗಳು ಮತ್ತು ಕೆರೆಗಳಲ್ಲಿ ಹಾದು ಹೋಗುತ್ತಿದ್ದು, ಭೂಸ್ವಾಧೀನ ಕಾಯ್ದೆ 2013ರ ಯಾವುದೇ ರೀತಿಯ ನಡವಳಿಕೆ ಪ್ರಕ್ರಿಯೆ ಮಾಡಿರುವುದಿಲ್ಲ ಎಂದು ಆರೋಪಿಸಿದರು.ಈ ಯೋಜನೆಯನ್ನು ಜಾರಿಗೊಳಿಸಲು ದರ್ಪ ಮತ್ತು ದಬ್ಬಾಳಿಕೆಯಿಂದ ಕಾಮಗಾರಿ ಕೈಗೊಂಡಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಸ್ವಯಂ ಪ್ರೇರಿತವಾಗಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಪ್ರಕರಣಗಳನ್ನು ದಾಖಲಿಸಿ ಬಂಧಿಸುವಂತೆ ಒತ್ತಾಯಿಸಿದರು.
ಈ ಯೋಜನೆ ತಾಂತ್ರಿಕವಾಗಿ ಕಾರ್ಯಸಾಧುವಲ್ಲ. ರಾಜಕೀಯ ಪ್ರೇರಿತ ಹಾಗೂ ಭ್ರಷ್ಟ ಹಿತಾಸಕ್ತಿಯಿಂದ ಕೂಡಿರುವ ಇದನ್ನು ರದ್ದುಪಡಿಸಿ ಟಿಬಿಸಿ ನಾಲೆಯ 167ನೇ ಕಿ.ಮೀ.ಯಿಂದ 228ನೇ ಕಿ.ಮೀ. ವರೆಗೆ ಬಾಕಿಯಿರುವ ಕಾಮಗಾರಿ ಪೂರ್ಣಗೊಳಿಸಲು ಈ ಯೋಜನೆಯ ಹಣ ವಿನಿಯೋಗಿಸುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.ಜಿಲ್ಲೆಯ ಜನರ ಕೋರಿಕೆಯ ಮೇರೆಗೆ ಈ ಯೋಜನೆಯನ್ನು ಕೂಡಲೆ ಕೈಬಿಡ ಬೇಕು ಇಲ್ಲವಾದರೆ ಯೋಜನೆಯ ವಿರುದ್ಧ ಹೋರಾಟವನ್ನು ಕಾನೂನಾತ್ಮಕವಾಗಿ ನ್ಯಾಯಾಲಯದಲ್ಲಿ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ, ಮುಖಂಡ ಕೆ.ಪಿ.ಮಹೇಶ್ ಇದ್ದರು.