ಪೌರಾಣಿಕ ವಸ್ತು ಚಾರಿತ್ರಿಕ ಕಾಲಘಟ್ಟದ ಸಂವೇದನೆಗಳಿಗೆ ಅನುಸಂಧಾನಗೊಳಿಸಿದ ಕವಿಯಾಗಿ ಅವರು ಕಾಣಿಸಿಕೊಳ್ಳುತ್ತಾರೆ.

ಹೊಸಪೇಟೆ: ಕನಕದಾಸರು ದಾರ್ಶನಿಕ, ದಾಸ, ಅನುಭಾವಿಗಳಾಗಿ ಹಾಗೂ ಸಮಾಜ ಸುಧಾರಕರಾಗಿ ಗುರುತಿಸಿಕೊಳ್ಳುವುದರ ಜತೆಗೆ ಸ್ತ್ರೀಪರ ಪ್ರಜ್ಞೆ ಅಭಿವ್ಯಕ್ತಿಸಿದ ಚಿಂತಕರಾಗಿಯೂ ಸಮಕಾಲೀನ ಮಹತ್ವ ಪಡೆದುಕೊಳ್ಳುತ್ತಾರೆ ಎಂದು ಭಾಷಾಂತರ ಅಧ್ಯಯನ ವಿಭಾಗದ ಸಂಶೋಧನಾರ್ಥಿ ಶ್ವೇತಾ ಬಾಳಿ ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಹಾಲುಮತ ಅಧ್ಯಯನ ಪೀಠದಿಂದ ಪಂಪ ಸಭಾಂಗಣದಲ್ಲಿ ನಡೆದ ಕನಕದಾಸ ಜಯಂತಿ ಅಂಗವಾಗಿ ಕನಕದಾಸರ ಸಾಹಿತ್ಯದಲ್ಲಿ ಮಹಿಳಾ ಪ್ರಜ್ಞೆ ಎಂಬ ಕುರಿತು ಮಾತನಾಡಿದರು.

ಪೌರಾಣಿಕ ವಸ್ತು ಚಾರಿತ್ರಿಕ ಕಾಲಘಟ್ಟದ ಸಂವೇದನೆಗಳಿಗೆ ಅನುಸಂಧಾನಗೊಳಿಸಿದ ಕವಿಯಾಗಿ ಅವರು ಕಾಣಿಸಿಕೊಳ್ಳುತ್ತಾರೆ. ಪಂಪನಂತೆ ಕವಿ ಹಾಗೂ ಕಲಿಯೂ ಆಗಿದ್ದ ಕನಕದಾಸರು ಧರ್ಮ ಮತ್ತು ಪ್ರಭುತ್ವದ ಭಾಗವಾಗಿ ಮಾತ್ರವಲ್ಲದೆ, ಕೀರ್ತನೆ ಹಾಗೂ ಕಾವ್ಯ ರಚಿಸುತ್ತಾ ವಿಜಯನಗರ ಸಾಮ್ರಾಜ್ಯದ ಸಮಕಾಲೀನ ಸಮಾಜದ ಚಿತ್ರಣ ತಮ್ಮ ಕಾವ್ಯಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ವರ್ಣ ಮತ್ತು ಜಾತಿ ವ್ಯವಸ್ಥೆಯಿಂದ ಉಂಟಾದ ಸಾಮಾಜಿಕ ಅಸಮಾನತೆಗಳ ಜತೆಗೆ ಲಿಂಗ ರಾಜಕಾರಣದಿಂದ ಎದುರಾಗುವ ವೃತ್ತಿ ಅಸಮಾನತೆ ತಮ್ಮ ಕಾವ್ಯಗಳಲ್ಲಿ ಅಭಿವ್ಯಕ್ತಿಸಿದ್ದಾರೆ ಎಂದು ತಿಳಿಸಿದರು.

ಸಮಾಜವು ಮಹಿಳೆಯನ್ನು ಕೇವಲ ಭೋಗದ ವಸ್ತು, ಹೀನಳಾಗಿ ಹಾಗೂ ದಾಸಿಯಾಗಿ ಕಾಣುವ ಧೋರಣೆ ಪ್ರಶ್ನಿಸುವ ನಿಟ್ಟಿನಲ್ಲಿ ಕನಕದಾಸರು ದಾಸದಾಸನ ಮನೆಯ ದಾಸಿಯರ ಮಗನಾನು ಎಂದು ಹೇಳಿಕೊಳ್ಳುತ್ತಾರೆ. ಸಮಾಜವು ಕೀಳಾಗಿ ಕಾಣುತ್ತಿದ್ದ ವರ್ಗದ ಪರಂಪರೆಯಿಂದ ಬಂದವನು ಎಂದು ಗುರುತಿಸಿಕೊಳ್ಳುವ ಮೂಲಕ ಸಾಮಾಜಿಕ ಅಸಮಾನತೆಯ ವಿರುದ್ಧ ಧ್ವನಿ ಎತ್ತುವ ಎದೆಗಾರಿಕೆ ಕನಕದಾಸರು ತಮ್ಮ ಸಾಹಿತ್ಯದ ಮೂಲಕ ತೋರಿಸಿದ್ದಾರೆ ಎಂದು ಹೇಳಿದರು.

ಸಂಶೋದನಾರ್ಥಿ ರಮೇಶ ಎಂ., ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಪ್ರಜ್ಞೆ ಎಂಬ ವಿಷಯದ ಕುರಿತು ಮಾತನಾಡಿ, ಕನಕದಾಸರ ಕೀರ್ತನೆ ಪ್ರಸ್ತುತ ಕಾಲಮಾನದ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಸಮಾಜದ ಎಲ್ಲ ಮಗ್ಗಲುಗಳ ದರ್ಶನವಾಗುತ್ತದೆ. ಕನಕದಾಸರ ಬಹುರೂಪಿ ವ್ಯಕ್ತಿತ್ವದ ಅನಾವರಣ ಕೀರ್ತನೆಗಳಲ್ಲಿ ಕಂಡುಬರುತ್ತದೆ. ಕವಿ,ದಾರ್ಶನಿಕರಾಗಿ ಸಮಾಜದ ಅಂತರಂಗ ಅರಿತು, ಅದರಲ್ಲಿನ ಅಂಕುಡೊಂಕು ತಿದ್ದುವ ಪ್ರಯತ್ನ ಮಾಡಿದ್ದಾರೆ ಎಂದರು.

ತಮ್ಮ ಕೀರ್ತನೆ ಹಾಗೂ ಅನುಭವ ಸಾಹಿತ್ಯದ ಮೂಲಕ ನೇರವಾಗಿ ಮತ್ತು ವ್ಯಂಗ್ಯದ ಮೂಲಕ ಸಮಾಜದ ಲೋಪದೋಷ ಟೀಕಿಸಿದ್ದಾರೆ. ಅಲ್ಲದೆ ಕೀರ್ತನೆಗಳ ಮೂಲಕ ಸಾಮಾಜಿಕ ಪಿಡುಗು ವಿರುದ್ಧ ಧ್ವನಿ ಎತ್ತಿ, ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಸಭೆಯಲ್ಲಿ ಮಾತನಾಡಿದರು.

ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಹಾಲುಮತ ಅಧ್ಯಯನ ಪೀಠದ ಸಂಚಾಲಕ ಡಾ. ಈ. ಯರ‍್ರಿಸ್ವಾಮಿ, ಕೊಪ್ಪಳದ ಸಂಸ್ಕೃತಿ ಚಿಂತಕ ಎಚ್.ಎಸ್. ಪಾಟೀಲ ಸೇರಿದಂತೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಡೀನರು, ಬೋಧಕರು ಹಾಗೂ ಅಧಿಕಾರಿ, ಆಡಳಿತ ಸಿಬ್ಬಂದಿ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.