ಸಾರಾಂಶ
ಬೆಂಗಳೂರು : ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಮಾಯಕರ ಆಸ್ತಿ ಕಬಳಿಸುತ್ತಿದ್ದ ಕುಖ್ಯಾತ ವಂಚಕ ಜಾನ್ ಮೋಸಸ್ ಹಾಗೂ ಆತನ ಸಹಚರರ ವಿರುದ್ಧ ಸಿಐಡಿ ಪೊಲೀಸರು ‘ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ’(ಕೋಕಾ) ಪ್ರಯೋಗಿಸಿದ್ದಾರೆ.
ಸ್ವತ್ತೊಂದರ ಸಂಬಂಧ ನಕಲಿ ದಾಖಲೆ ಸೃಷ್ಟಿಸಿ, ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಡಿಕ್ರಿ ಪಡೆದುಕೊಂಡಿದ್ದ ಆರೋಪದ ಮೇರೆಗೆ ಲಘು ವ್ಯವಹಾರಗಳ ನ್ಯಾಯಾಲಯದ ರಿಜಿಸ್ಟ್ರಾರ್ 2020ರಲ್ಲಿ ಈ ಜಾನ್ ಮೋಸಸ್ ಹಾಗೂ ಸಹಚರರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬಳಿಕ ಈ ಪ್ರಕರಣ ಸಿಐಡಿ ವರ್ಗಾವಣೆಯಾಗಿದ್ದು, ತನಿಖೆ ವೇಳೆ ಈ ವಂಚಕರ ಗ್ಯಾಂಗ್ ವಿರುದ್ಧ 100ಕ್ಕೂ ಅಧಿಕ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳೂ ಸಹ ಸಿಐಡಿಗೆ ವರ್ಗಾವಣೆಯಾಗಿದ್ದವು. ಈ ಪೈಕಿ 51 ಪ್ರಕರಣಗಳ ತನಿಖೆ ಪೂರ್ಣಗೊಳಿಸಿದ್ದ ಸಿಐಡಿ ಅಧಿಕಾರಿಗಳು, ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಉಳಿದ ಪ್ರಕರಣಗಳು ತನಿಖಾ ಹಂತದಲ್ಲಿವೆ.
ಈ ವಂಚಕರ ಗ್ಯಾಂಗ್ ಸಂಘಟಿತ ತಂಡ ಕಟ್ಟಿಕೊಂಡು ಬಡಜನರ ಜಮೀನು, ನಿವೇಶನ ಹಾಗೂ ಮನೆಗಳನ್ನು ಕಬಳಿಸಿರುವುದು ಮತ್ತು ಸ್ವತ್ತಿನ ಅಸಲಿ ಮಾಲೀಕರನ್ನು ಬೆದರಿಸಿ ಕೋಟ್ಯಂತರ ರುಪಾಯಿ ಸುಲಿಗೆ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಹೀಗಾಗಿ ಈ ಗ್ಯಾಂಗ್ ವಿರುದ್ಧ ಸಿಐಡಿ ಅಧಿಕಾರಿಗಳು ಕೋಕಾ ಕಾಯ್ದೆ ಪ್ರಯೋಗಿಸಿದ್ದಾರೆ. ಈ ವಂಚಕರ ಗ್ಯಾಂಗ್‌ನ ಮುಖ್ಯಸ್ಥ ಜಾನ್ ಮೋಸಸ್ ಸಿಐಡಿ ವಶದಲ್ಲಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.