ಸಮಾಜ ಸೇವೆಯ ರಾಜಕೀಯ ರಂಗಕ್ಕೆ ವಿಸ್ತರಿಸುವೆ: ಡಾ.ಧನಂಜಯ ಸರ್ಜಿ

| Published : May 23 2024, 01:03 AM IST

ಸಮಾಜ ಸೇವೆಯ ರಾಜಕೀಯ ರಂಗಕ್ಕೆ ವಿಸ್ತರಿಸುವೆ: ಡಾ.ಧನಂಜಯ ಸರ್ಜಿ
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಜೊತೆಗೆ ಅನೇಕ ಸಂಘ-ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಕೃಷಿ ಕುಟುಂಬದಿಂದ ಬಂದ ನಾನು ಪದವಿ ಹಂತದಲ್ಲಿಯೇ ಪದವೀಧರರ ಸಮಸ್ಯೆಯ ಹತ್ತಿರದಿಂದ ಬಲ್ಲವನಾಗಿದ್ದೇನೆ. ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಪದವೀಧರ ಧ್ವನಿಯಾಗಿ ಕಾರ್ಯನಿರ್ವಹಿಸುವ ಹಂಬಲವಿದೆ.

ಕನ್ನಡಪ್ರಭ ವಾರ್ತೆ ಸೊರಬ

ಉಸಿರು ಮತ್ತು ಹೆಸರಿನ ನಡುವಿನ ಬದುಕಿನಲ್ಲಿ ನಾವು ಸಮಾಜಕ್ಕೆ ನೀಡುವ ಕೊಡುಗೆ ಅನನ್ಯವಾದ್ದು. ಆದ್ದರಿಂದ ಉಸಿರು ಇರುವವರೆಗೆ ಆತ್ಮಕ್ಕೆ ತೃಪ್ತಿ ಕೊಡುವ ಹೆಸರು ಗಳಿಸಬೇಕು. ಅದಕ್ಕಾಗಿ ರಾಜಕೀಯ ರಂಗದಲ್ಲೂ ಸಮಾಜ ಸೇವೆಯ ಇಚ್ಛೆ ಹೊಂದಿದ್ದೇನೆ ಎಂದು ನೈಋತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಹೇಳಿದರು.

ಬುಧವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಸಮಾಜ ಸೇವೆಯಲ್ಲಿ ತೊಡಗಿದ್ದ ತಮ್ಮನ್ನು ನೈಋತ್ಯ ಪದವೀಧರರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಪಕ್ಷದ ಹಿರಿಯರು ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ದೇಶದ ಪ್ರಗತಿಗಾಗಿ ಮತದಾರರು ತಮ್ಮ ಗೆಲುವಿಗೆ ಸಾಕ್ಷಿಯಾಗಲಿದ್ದಾರೆ ಎಂದರು.

ವೈದ್ಯಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಜೊತೆಗೆ ಅನೇಕ ಸಂಘ-ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಕೃಷಿ ಕುಟುಂಬದಿಂದ ಬಂದ ನಾನು ಪದವಿ ಹಂತದಲ್ಲಿಯೇ ಪದವೀಧರರ ಸಮಸ್ಯೆಯ ಹತ್ತಿರದಿಂದ ಬಲ್ಲವನಾಗಿದ್ದೇನೆ. ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಪದವೀಧರ ಧ್ವನಿಯಾಗಿ ಕಾರ್ಯನಿರ್ವಹಿಸುವ ಹಂಬಲವಿದೆ ಎಂದರು.

ಕಾರ್ಯಕರ್ತರನ್ನೇ ಶಕ್ತಿಯಾಗಿಸಿಕೊಂಡಿರುವ ಬಿಜೆಪಿಯಲ್ಲಿ ಸಂಘಟನಾತ್ಮಕವಾಗಿ ಕಾರ್ಯಕರ್ತರು ತಾವೇ ಅಭ್ಯರ್ಥಿ ಎನ್ನುವಂತೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಸುಮಾರು ೮೫ ಸಾವಿರ ಮತದಾರರಿದ್ದು, ಹೆಚ್ಚಿನ ಬಹುಮತದೊಂದಿಗೆ ಗೆಲುವು ಸಾಧಿಸುವ ವಿಶ್ವಾಸವಿದೆ. ದೇಶದ ಉತ್ತಮ ಭವಿಷ್ಯ ಮತ್ತು ಭದ್ರತೆಗಾಗಿ ಬಿಜೆಪಿಗೆ ಮತ ನೀಡಲು ಮನವಿ ಮಾಡಿದರು. ಆಯನೂರು ಸೋಲು ಖಚಿತ:

ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮಾತನಾಡಿ, ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಆಯನೂರು ಮಂಜುನಾಥ ತಮ್ಮ ಅವಧಿ ೧೫ ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್‌ಗೆ ಪಕ್ಷಾಂತರವಾಗಿ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ವಿಶ್ವಾಸವಿಟ್ಟು ಆರಿಸಿ ತಂದ ಮತದಾರರಿಗೆ ಅಗೌರವ ತೋರಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಅವರ ಸೋಲು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೋವಿಡ್ ಸಂದರ್ಭದಲ್ಲಿಯೂ ಡಾ.ಧನಂಜಯ ಸರ್ಜಿ ಅವರ ಸೇವೆ ಅಪಾರ. ಕ್ಷೇತ್ರದಲ್ಲಿ ಬಿಜೆಪಿ ಬಗ್ಗೆ ಮತದಾರರಲ್ಲಿ ಉತ್ತಮ ಅಭಿಪ್ರಾಯವಿದ್ದು, ಗೆಲುವಿನ ಕ್ಷೇತ್ರವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಸಂಘ ಪರಿವಾರದ ಹಿರಿಯ ಎಚ್.ಎಸ್. ಮಂಜಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ತಲಕಾಲುಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಪುರಸಭೆ ಸದಸ್ಯ ಎಂ.ಡಿ. ಉಮೇಶ್, ಪ್ರಮುಖರಾದ ದೇವೇಂದ್ರಪ್ಪ, ಮಾಲತೇಶ್, ಜಾನಕಪ್ಪ ಒಡೆಯರ್ ಯಲಸಿ ಉಪಸ್ಥಿತರಿದ್ದರು. ಬಾಲ್ಯದಿಂದಲೇ ಬಸವೇಶ್ವರ ಶಾಖೆಯಿಂದ ಆರ್‌ಎಸ್‌ಎಸ್ ಕಾರ್ಯಕರ್ತ, ಜೊತೆಯಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸುವ ವೇಳೆ ಸಂಘದ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸಿದ್ದೇನೆ. ಹರ್ಷ ಹತ್ಯೆಯ ನಂತರ ಶಿವಮೊಗ್ಗದಲ್ಲಿ ವ್ಯಾಪಾರ-ವಹಿವಾಟು ಹಿನ್ನೆಡೆಯಾಗಿತ್ತು. ಈ ಕಾರಣದಿಂದ ಎಡಪಂಥೀಯರು ಮತ್ತು ಕಮ್ಯುನಿಸ್ಟರು ನಡೆಸಿದ ಹರ್ಷ ಶಾಂತಿಯಾತ್ರೆಯಲ್ಲಿ ಪಾಲ್ಗೊಂಡಿದ್ದೆ. ಇದನ್ನೇ ಕೆಲವರು ತಮ್ಮ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. – ಡಾ.ಧನಂಜಯ ಸರ್ಜಿ, ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್‌ ಸ್ಪರ್ಧೆ ವ್ಯತಿರಿಕ್ತ ಪರಿಣಾಮ ಬೀರಲ್ಲ

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಘುಪತಿ ಭಟ್ ಮಾಜಿ ಶಾಸಕರು ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಅವರ ಬಗ್ಗೆ ತಮಗೆ ವಿಶೇಷ ಗೌರವವಿದೆ. ಆದರೆ ಪಕ್ಷದಿಂದ ನೈಋತ್ಯ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸಲು ಒಬ್ಬರಿಗೆ ಮಾತ್ರ ಅವಕಾಶವಿದೆ. ಹೈಕಮಾಂಡ್ ಮತ್ತು ಹಿರಿಯರು ತಮಗೆ ಅವಕಾಶ ನೀಡಿದ್ದಾರೆ. ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು ಎನ್ನುವ ಸಿದ್ಧಾಂತದಲ್ಲಿ ಮತದಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಅವರ ಸ್ಪರ್ಧೆಯಿಂದ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ಡಾ.ಧನಂಜಯ ಸರ್ಜಿ ಹೇಳಿದರು.