ಭಟ್ಕಳದ ರೈಲ್ವೆ ನಿಲ್ದಾಣದಲ್ಲಿ ಈ ಮೊದಲು ಕಡಿಮೆ ಸಂಖ್ಯೆಯ ರೈಲು ನಿಲುಗಡೆ ಇರುವುದರಿಂದ ಜನರಲ್ ಟಿಕೆಟ್ ಕೌಂಟರ್ ಹೊರತುಪಡಿಸಿ ರಿಜರ್ವೇಶನ್ ಟಿಕೆಟ್ ಕೌಂಟರ್‌ಅನ್ನು ಬೆಳಗ್ಗ 8ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆಯಲಾಗುತ್ತಿತ್ತು.

ಭಟ್ಕಳ: ಇಲ್ಲಿನ ರೈಲ್ವೆ ನಿಲ್ದಾಣದ ಟಿಕೆಟ್ ರಿಸರ್ವೇಶನ್ ಕೌಂಟರ್‌ನಲ್ಲಿ ರಿಜರ್ವೇಶನ್ ಸಮಯ ಬೆಳಗ್ಗೆ 8ರಿಂದ ಮಧ್ಯಾಹ್ನ 2 ಗಂಟೆಯ ಬದಲು ರಾತ್ರಿ 8 ಗಂಟೆಯವರೆಗೆ ವಿಸ್ತರಿಸಲು ಪ್ರಯಾಣಿಕರು ಮತ್ತು ಸ್ಥಳೀಯ ಮುಖಂಡರು ಮನವಿ ಮಾಡಿದ ಹಿನ್ನೆಲೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ರಾತ್ರಿ 8 ಗಂಟೆಯವರೆಗೂ ಟಿಕೆಟ್ ರಿಜರ್ವೇಶನ್ ಸಮಯವನ್ನು ವಿಸ್ತರಿಸಿದ್ದಾರೆ.

ಭಟ್ಕಳದ ರೈಲ್ವೆ ನಿಲ್ದಾಣದಲ್ಲಿ ಈ ಮೊದಲು ಕಡಿಮೆ ಸಂಖ್ಯೆಯ ರೈಲು ನಿಲುಗಡೆ ಇರುವುದರಿಂದ ಜನರಲ್ ಟಿಕೆಟ್ ಕೌಂಟರ್ ಹೊರತುಪಡಿಸಿ ರಿಜರ್ವೇಶನ್ ಟಿಕೆಟ್ ಕೌಂಟರ್‌ಅನ್ನು ಬೆಳಗ್ಗ 8ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆಯಲಾಗುತ್ತಿತ್ತು. ಮಧ್ಯಾಹ್ನ ನಂತರ ಕೌಂಟರ್‌ನಲ್ಲಿ ಯಾವುದೇ ರಿಸರ್ವೇಶನ್ ಟಿಕೆಟ್ ಮಾಡುತ್ತಿರಲಿಲ್ಲ. ಇದರಿಂದ ಪ್ರಯಾಣಿಕರಿಗೆ ಮಧ್ಯಾಹ್ನ ನಂತರ ಸಮಯವಿದ್ದರೂ ರೈಲ್ವೆ ಕೌಂಟರ್‌ನಲ್ಲಿ ಟಿಕೆಟ್ ರಿಜರ್ವೇಶನ್ ಮಾಡಲು 2 ಗಂಟೆಯ ನಂತರ ಸಾಧ್ಯವಾಗದಿರುವ ಕಾರಣ ಮಾರನೇ ದಿನದವರೆಗೂ ಕಾಯಬೇಕಿತ್ತು. ಇಲ್ಲವೇ ಆನ್‌ಲೈನ್‌ನಲ್ಲಿ ಖಾಸಗಿಯಾಗಿ ಹಣಕೊಟ್ಟು ಟಿಕೆಟ್ ರಿಜರ್ವೇಶನ್ ಮಾಡಬೇಕಾದ ಪರಿಸ್ಥಿತಿ ಇತ್ತು.

ಈ ಬಗ್ಗೆ ಪದೇ ಪದೇ ಕೊಂಕಣ ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದರೂ ಸಿಬ್ಬಂದಿ ಕೊರತೆ ಹಾಗೂ ಬುಕ್ಕಿಂಗ್ ಸಂಖ್ಯೆಯ ಇನ್ನಿತರ ಕಾರಣ ನೀಡಿ ತಿರಸ್ಕರಿಸುತ್ತಿದ್ದರಿಂದ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದರು.

ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ರಿಸರ್ವೇಶನ್ ಕೌಂಟರ್‌ನ ಸಮಯವನ್ನು ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ವಿಸ್ತರಿಸಿರುವುದರಿಂದ ರೈಲು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಮಾಜಿ ಸೈನಿಕ ಮತ್ತು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಆಸರಕೇರಿ ಮತ್ತಿತರರು ತಿಳಿಸಿದ್ದು, ಭಟ್ಕಳದ ರೈಲು ಪ್ರಯಾಣಿಕರು ಮತ್ತು ಸಾರ್ವಜನಿಕರು ರಿಸರ್ವೇಶನ್ ಕೌಂಟರ್‌ನ ವಿಸ್ತರಣೆಯ ಬೆಳಗ್ಗೆ 8ರಿಂದ ರಾತ್ರಿ 8ರ ಸಮಯದ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ಕೋರಿದ್ದಾರೆ.