ಕಾರ್ತಿಕ ಹುಣ್ಣಿಮೆಯ ಕೃತ್ತಿಕಾ ನಕ್ಷತ್ರವು ಶಿವಯೋಗದೊಂದಿಗೆ ಕೂಡಿದಾಗ ಮಾತ್ರ ಇಲ್ಲಿನ ಶ್ರೀಕುಮಾರಸ್ವಾಮಿ ಜಾತ್ರೆ ಜರುಗುತ್ತದೆ.

ವಿ.ಎಂ. ನಾಗಭೂಷಣ ಸಂಡೂರು

ತಾಲೂಕಿನ ನಾಲ್ಕು ಅರಣ್ಯ ವಲಯಗಳಲ್ಲಿ ಒಂದಾದ ಸ್ವಾಮಿಮಲೈ ಅರಣ್ಯ ವಲಯದ ಲೋಹಾಚಲದಲ್ಲಿ ನೆಲೆ ನಿಂತು ಭಕ್ತರನ್ನು ಪೊರೆಯುತ್ತಿರುವ ಸುಬ್ರಹ್ಮಣ್ಯ, ಷಣ್ಮುಖ, ಶರವಣ, ಸ್ಕಂದರಾಜ, ಲೋಹಾದ್ರಿವಾಸ ಮುಂತಾದ ಹಲವಾರು ನಾಮಗಳುಳ್ಳ ಶ್ರೀಕುಮಾರಸ್ವಾಮಿಯ ಜಾತ್ರೆಯು ನ. ೨೪ ಹಾಗೂ ೨೫ರಂದು ನಡೆಯುತ್ತಿರುವ ಹಿನ್ನೆಲೆ ಜಾತ್ರೆಗೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸಲು ಭರದ ಸಿದ್ಧತೆ ನಡೆದಿದೆ.

ಐದು ವರ್ಷದಲ್ಲಿ ಎರಡು ಬಾರಿ ಮಾತ್ರ ಜಾತ್ರೆ: ಕಾರ್ತಿಕ ಹುಣ್ಣಿಮೆಯ ಕೃತ್ತಿಕಾ ನಕ್ಷತ್ರವು ಶಿವಯೋಗದೊಂದಿಗೆ ಕೂಡಿದಾಗ ಮಾತ್ರ ಇಲ್ಲಿನ ಶ್ರೀಕುಮಾರಸ್ವಾಮಿ ಜಾತ್ರೆ ಜರುಗುತ್ತದೆ. ಇಂತಹ ಪುಣ್ಯತಮವಾದ ಯೋಗವು ಐದು ವರ್ಷದಲ್ಲಿ ಎರಡು ಬಾರಿ ಮಾತ್ರ ಘಟಿಸುತ್ತದೆ. ಈ ವರ್ಷವು ಶ್ರೀ ಕುಮಾರಸ್ವಾಮಿಯ ಮಹಾಜಾತ್ರೆಯು ಕಾರ್ತಿಕ ಮಾಸ ಶುಕ್ಲ ಪಕ್ಷದ ನ.೨೪ ಹಾಗೂ ೨೫ ರಂದು ಜರುಗಲಿದೆ.

ಜಾತ್ರೆಯ ವಿವರ: ನ.೨೪ ಮಂಗಳವಾರ ಬೆಳಗ್ಗೆ ೫ಗಂಟೆಗೆ ಮಹಾಭಿಷೇಕ, ೯ಗಂಟೆಯಿಂದ ಪೂರ್ಣಾಲಂಕಾರ ಮತ್ತು ಯೋಗದರ್ಶನ, ಸಂಜೆ೬ ಗಂಟೆಗೆ ಧ್ವಜಾರೋಹಣ ಪೂಜೆ, ರಾತ್ರಿ ೮.೩೦ ನಿಮಿಷಕ್ಕೆ ಪಾಲಿಕಿ ಸೇವೆ ಮತ್ತು ಪಿಕಲೋತ್ಸವ ಹಾಗೂ ರಾತ್ರಿ ೯.೧೫ಕ್ಕೆ ತೊಟ್ಟಿಲು ಸೇವೆ. ನ.೨೫ರ ಬುಧವಾರ ಬೆಳಗ್ಗೆ ೯ಗಂಟೆಯ ನಂತರ ಪ್ರತಿ ಪದಾದರ್ಶನ.

ಶ್ರೀಕುಮಾರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಸಂಸದ ಈ. ತುಕಾರಾಮ್ ಹಾಗೂ ಶಾಸಕಿ ಈ ಅನ್ನಪೂರ್ಣ ತುಕಾರಾಮ್‌ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥರ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಾತ್ರಾ ಮಹೋತ್ಸವ ಅಚ್ಚುಕಟ್ಟಾಗಿ ನಿರ್ವಹಿಸಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಈ ಬಾರಿ ಪಟ್ಟಣದಿಂದ ಶ್ರೀಕುಮಾರಸ್ವಾಮಿ ಬೆಟ್ಟಕ್ಕೆ ಹೋಗಿ ಬರಲು ಭಕ್ತರಿಗೆ ಸಾರಿಗೆ ಸಂಸ್ಥೆಯ ಬಸ್ ಘಟಕದಿಂದ ಬಳಿಯ ಬಸ್ ಸ್ಟಾಂಡ್‌ದಿಂದ ವ್ಯವಸ್ಥೆ ಕಲ್ಪಿಸಲಾಗಿದೆ. ಶ್ರೀಕುಮಾರಸ್ವಾಮಿ ದೇವಸ್ಥಾನಕ್ಕೆ ಹೋಗ ಬಯಸುವವರು ಕೂಡ್ಲಿಗಿ ರಸ್ತೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಹೋಗಬೇಕಾಗಿದೆ.

ಪ್ರಸಾದ ವ್ಯವಸ್ಥೆ: ಜಾತ್ರೆಗೆ ಬರುವ ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿ, ವೆಸ್ಕೊ, ಬಂಡಿಗಣಿ ಮಠದವರು ಸೇರಿದಂತೆ ವಿವಿಧ ಸಂಸ್ಥೆಗಳವರು ಹಾಗೂ ಕೆಲ ಭಕ್ತರು ಪ್ರಸಾದದ ವ್ಯವಸ್ಥೆ ಕಲ್ಪಿಸುತ್ತಿರುವುದು ವಿಶೇಷವಾಗಿದೆ.

ವಿಭೂತಿ ಸಂಗ್ರಹಣೆ: ತಾಲೂಕಿನ ಕಮ್ಮತ್ತೂರಿನ ಭಕ್ತರು ದೀಪಾವಳಿ ಪಾಡ್ಯದಿಂದ ಜಾತ್ರೆಯ ಮುನ್ನಾ ದಿನದವರೆಗೆ ದೇವಸ್ಥಾನದ ಸನಿಹದಲ್ಲಿರುವ ಬೆಟ್ಟದಲ್ಲಿ ನೈಸರ್ಗಿಕವಾಗಿ ದೊರೆಯುವ ವಿಭೂತಿ ಕಣಿ ಹೊರ ತೆಗೆದು ದೇವಸ್ಥಾನದಲ್ಲಿ ಸಂಗ್ರಹಿಸುತ್ತಾರೆ. ಇದರಲ್ಲಿ ಔಷಧೀಯ ಗುಣಗಳಿರುವ ಕಾರಣ ದೇವಸ್ಥಾನಕ್ಕೆ ಬರುವ ಭಕ್ತರು ಈ ವಿಭೂತಿ ಪಡೆದುಕೊಂಡು ಧರಿಸುತ್ತಾರೆ.

ಶ್ರೀಕುಮಾರಸ್ವಾಮಿಯ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮುಂತಾದ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದ ಮಾರ್ಗದಲ್ಲಿ ನ.೨೩ರಿಂದ೨೬ರವರೆಗೆ ಮೈನಿಂಗ್‌ ಚಟುವಟಿಕೆ, ಅದಿರು ಲಾರಿಗಳ ಸಂಚಾರ ನಿಷೇಧಿಸಲಾಗಿದೆ.

ಶ್ರೀಕುಮಾರಸ್ವಾಮಿ ಮಾಲಾಧಾರಣೆ: ೨೩ ವರ್ಷದಿಂದ ಸ್ಥಳೀಯ ಶ್ರೀಕುಮಾರಸ್ವಾಮಿ ಮಾಲಾಧಾರಣೆ ಸಮಿತಿ ವತಿಯಿಂದ ಶ್ರೀಕುಮಾರಸ್ವಾಮಿ ಮಾಲಾಧಾರಣೆ, ಮಾತೃಪೂಜೆ, ಮಾತೃ ಭೋಜನ ಹಾಗೂ ಜೋಳಿಗೆ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷ ೩೫ ಜನರು ಶ್ರೀಕುಮಾರಸ್ವಾಮಿ ಮಾಲೆ ಧಾರಣೆ ಮಾಡಿರುವುದಾಗಿ ಸಮಿತಿಯ ಅಧ್ಯಕ್ಷ ಔದುಂಬರ ಭಟ್‌ ಕನ್ನಡಪ್ರಭಕ್ಕೆ ತಿಳಿಸಿದರು.

ಐದು ವರ್ಷದಲ್ಲಿ ಎರಡು ಬಾರಿ ನಡೆಯುವ ಶ್ರೀಕುಮಾರಸ್ವಾಮಿ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಲು ಭರದ ಸಿದ್ಧತೆ ನಡೆದಿದೆ.