ಸಾರಾಂಶ
ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿಆಧಾರ್ ಕಾರ್ಡ್ ನೋಂದಣಿ, ಆಧಾರ್ ಕಾರ್ಡ್ ತಿದ್ದುಪಡಿಗಳು ಹೀಗೆ ಯಾವುದೇ ಸಣ್ಣ ತಿದ್ದುಪಡಿಗಳಿದ್ದರೂ ಜನ ಸಾಮಾನ್ಯರು ಸರಿ ಮಾಡಿಸಲೇಬೇಕು. ಅದಕ್ಕಾಗಿ ಆಧಾರ್ ಕೇಂದ್ರಕ್ಕೆ ಹೋಗಲೇಬೇಕು. ಅಷ್ಟೆ ಅಲ್ಲದೇ, ಇಲ್ಲಿ ಆಪರೇಟರ್ ಸಿಬ್ಬಂದಿಗೆ ಹೆಚ್ಚಿನ ಹಣ ನೀಡಿದರೆ ಮಾತ್ರ ಕೆಲಸವಾಗುತ್ತದೆ. ಇಲ್ಲದಿದ್ದರೆ ಅಲ್ಲಿ ಕಾದು ಕಾದು ಸುಸ್ತಾಗಬೇಕಷ್ಟೆ.
ಆಧಾರ್ ಕೇಂದ್ರಗಳಲ್ಲಿ ಹಣಕಾಸಿನ ವ್ಯವಹಾರ ಜೋರಾಗಿ ನಡೆಯುತ್ತಿದೆ. ಕಾರ್ಡ್ ತಿದ್ದುಪಡಿಗೆ ಹೋದವರಿಗೆ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ. ಆಧಾರ್ ತಿದ್ದುಪಡಿಗೆ ಹೆಚ್ಚಿನ ಶುಲ್ಕ ಪಡೆದರೆ ಆಪರೇಟರ್‌ಗಳ ಸೇವೆಯನ್ನು ಅಮಾನತಿನಲ್ಲಿಡುವ ಜತೆಗೆ, ₹50 ಸಾವಿರ ದಂಡ ವಿಧಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆದರೂ ನಿಯಮಗಳಿಗೆ ಕ್ಯಾರೇ ಎನ್ನದ ಆಧಾರ್ ಕೇಂದ್ರದ ಆಪರೇಟರ್‌ಗಳು ಮನಸಿಗೆ ಬಂದಂತೆ ಸಾರ್ವಜನಿಕರಿಂದ ಹಣವಸೂಲಿಗೆ ಇಳಿದಿದ್ದಾರೆ. ಬಯೊಮೆಟ್ರಿಕ್ ವಿಧಾನದ ಮೂಲಕ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಈ ಪ್ರಕ್ರಿಯೆಗೆ ಹೆಚ್ಚಿನ ಶುಲ್ಕ ವಿಧಿಸುವಂತಿಲ್ಲ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಆಧಾರ್ ದಾಖಲಾತಿ ಏಜೆನ್ಸಿಗಳಿಗೆ ತಿಳಿಸಿದೆ.ಇಂಡಿ ಪಟ್ಟಣದ ಬಸ್ ನಿಲ್ದಾಣದ ಬಳಿಯ ಬಿಎಸ್‌ಎನ್‌ಎಲ್ ಕಚೇರಿಯಲ್ಲಿನ ಆಧಾರ್ ಸೇವಾ ಕೇಂದ್ರದ ಸಿಬ್ಬಂದಿ ಹೆಚ್ಚಿನ ಹಣ ಪಡೆಯುತ್ತಿರುವ ಆರೋಪ ಕೇಳಿಬಂದಿದೆ. ಆಧಾರ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡುವುದು, ಕೆವೈಸಿ, ಜನ್ಮದಿನಾಂಕ ತಿದ್ದುಪಡಿ ಸೇರಿ ತಿದ್ದುಪಡಿಗಳಿಗೆ ಕೇವಲ ₹50 ಶುಲ್ಕ ನಿಗದಿಪಡಿಸಲಾಗಿದೆ. ಆದರೆ, ಇವರು ಸಾರ್ವಜನಿಕರಿಂದ ₹150 ರಿಂದ ₹200 ವಸೂಲಿ ಮಾಡುತ್ತಿದ್ದಾರೆ.
ಇನ್ನು, ಸರತಿ ಸಾಲಿನಲ್ಲಿ ನಿಲ್ಲುವುದು ಬೇಡ ಅಂದರೆ ಏಜೆಂಟ್‌ಗಳನ್ನು ಹಿಡಿದರೆ ₹500 ರಿಂದ ₹ 700 ಹಣ ಪಡೆದು ಹೇಳಿದ ಟೈಮ್‌ಗೆ ಕೆಲಸ ಮಾಡಿಕೊಡಲಾಗುತ್ತಿದೆ. ಬೆಳಗ್ಗೆಯಿಂದ ಸಂಜೆವರೆಗೆ ಬಿಸಿಲು, ಗಾಳಿಯಲ್ಲಿ ಎಲ್ಲ ಕೆಲಸ ಬಿಟ್ಟು ನಿಂತರೂ ಆಧಾರ್ ಕೆಲಸ ಮಾಡಿಸಲು ₹150 ನೀಡಬೇಕು. ಅಲ್ಲದೇ, ಫಾರಂ ತುಂಬಲು ₹20 ನೀಡಬೇಕು. ಹೀಗೆ ಪ್ರತಿಯೊಂದಕ್ಕು ಹಣ ವಸೂಲಿ ಮಾಡುತ್ತಿರುವುದು ಜನರ ರೋಶಕ್ಕೆ ಕಾರಣವಾಗಿದೆ.ನ್ನು, ಕೆಲವೊಂದು ಕೇಂದ್ರದಲ್ಲಿ ಆಧಾರ್ ಸೇವಾ ಕೇಂದ್ರ ನಡೆಸುವವರು ಬೇರೆಯಾಗಿದ್ದರೆ ಅದರ ಪರವಾನಗಿಯೇ ಬೇರೆಯವರ ಹೆಸರಿನಲ್ಲಿರುತ್ತದೆ. ಐದು ವರ್ಷದ ಮೇಲ್ಪಟ್ಟ ಮಕ್ಕಳಿಗೆ ಥಂಬ್, ಹೊಸ ಆಧಾರ್ ಕಾರ್ಡ್ ಹೀಗೆ ಅನೇಕ ಕಾರ್ಯಗಳಿಗೆ ಸರ್ಕಾರ ಶುಲ್ಕ ವಿನಾಯಿತಿ ನೀಡಿದೆ. ಇನ್ನುಳಿದಂತೆ ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬದಲು, ಹೆಸರು ತಿದ್ದುಪಡಿ ಕೆಸಲಕ್ಕೆ ₹ 50 ನಿಗದಿತ ಶುಲ್ಕ ಇರಿಸಿದೆ. ಆದರೆ, ಈ ಕೇಂದ್ರದ ಸಿಬ್ಬಂದಿ ಒಂದು ಆಧಾರ್ ಕಾರ್ಡ್‌ಗೆ ₹150 ರಿಂದ ₹ 200 ವರೆಗೆ ತೆಗೆದುಕೊಳ್ಳುತ್ತಿರುವ ಬಗ್ಗೆ ಜನರು ದೂರಿದ್ದಾರೆ.-----------
ಕೋಟ್....ಇಂಡಿಯಲ್ಲಿನ ಬಹುತೇಕ ಆಧಾರ್ ಕೇಂದ್ರಗಳಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತಲೂ ಹೆಚ್ಚಿಗೆ ಹಣ ವಸೂಲಿ ಮಾಡಲಾಗುತ್ತಿದೆ. ಅವರಿಗೆ ಯಾರ ಭಯವೂ ಇಲ್ಲ. ಇರುವಷ್ಟು ದಿನ ಹಣ ಮಾಡಿಕೊಂಡು ಹೋಗುವುದೇ ಇರವ ಮೂಲ ಉದ್ದೇಶ. ಬಿಎಸ್‌ಎನ್‌ಎಲ್ ಕಚೇರಿಯಲ್ಲಿನ ಆಧಾರ್ ಕೇಂದ್ರದ ಅನುಮತಿ ರದ್ದುಪಡಿಸಿ, ಬೇರೆಯವರಿಗೆ ನೀಡಬೇಕು. ಬಿ.ಎಸ್.ಎನ್.ಎಲ್ ಕಚೇರಿಯಲ್ಲಿ ತಹಸೀಲ್ದಾರ್ ಕಚೇರಿ, ಬ್ಯಾಂಕ್‌ಗಳಲ್ಲಿರುವ ಆಧಾರ್ ಆಪರೇಟರ್ ಗಳು ಜನರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆಯುತ್ತಿದ್ದಾರೆ. ಅಧಿಕಾರಿಗಳು ಇವರ ಮೇಲೆ ಕಟ್ಟುನಿಟ್ಟಿನ ಕ್ರಮಜರುಗಿಸಬೇಕು.
- ರಮೇಶ ನಿಂಬಾಳಕರ, ಡಿಎಸ್‌ಎಸ್ ಸಂಚಾಲಕ,ಇಂಡಿ.ಕೋಟ್.....ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಇರುವ ಆಧಾರ್ ಕೇಂದ್ರವು ಬಿಎಸ್‌ಎನ್‌ಎಲ್ ಇಲಾಖೆಯ ವ್ಯಾಪ್ತಿಯಲ್ಲಿ ಇದ್ದು, ಸಾರ್ವಜನಿಕರಿಂದ ಹೆಚ್ಚಿನ ಹಣ ಪಡೆದುಕೊಳ್ಳುತ್ತಿದ್ದರೆ ಬಿಎಸ್‌ಎನ್‌ಎಲ್ ಇಲಾಖೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ.
- ಬಿ.ಎಸ್.ಕಡಕಭಾವಿ, ತಹಸೀಲ್ದಾರ,ಇಂಡಿ.---------
ಇಂಡಿ ಬಿಎಸ್‌ಎನ್‌ಎಲ್ ಕಚೇರಿಯಲ್ಲಿನ ಆಧಾರ್ ಕೇಂದ್ರದಲ್ಲಿ ಸರ್ಕಾರ ನಿಗದಿ ಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಹಣ ಸಾರ್ವಜನಿಕರಿಂದ ಪಡೆದುಕೊಳ್ಳುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಕೂಡಲೇ ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.- ಅಬೀದ್ ಗದ್ಯಾಳ,ಎಸಿ,ಇಂಡಿ.