ಕನ್ನಡಪ್ರಭ ವಾರ್ತೆ ಬೆಳಗಾವಿ

ಪತ್ರಕರ್ತರು ಹಾಗೂ ಪೊಲೀಸರ ಸೋಗಿನಲ್ಲಿ ವ್ಯಕ್ತಿಯೊಬ್ಬರನ್ನು ಗಾಂಜಾ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ನಾಲ್ವರು ಯೂಟ್ಯೂಬರ್‌ಗಳನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಕಾರು, ದ್ವಿಚಕ್ರ ವಾಹನ, ಎರಡು ಮೊಬೈಲ್‌ಗಳು ಹಾಗೂ ₹34 ಸಾವಿರ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಹುಕ್ಕೇರಿಯ ಆಂಜನೇಯ ನಗರದ ಸಂಪೂರ್ಣ ಯೂಟ್ಯೂಬರ್‌ ಕಲ್ಲಪ್ಪ ಬಸವಣ್ಣಿ ಮಾಳಾಜ, ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳ್ಳಿಯ ಎಂ2 ಯೂಟ್ಯೂಬರ್‌ ಮಲ್ಲಿಕಾರ್ಜುನ ಸಿದ್ದಪ್ಪ ಜುಲಫಿ, ಮೂಲತಃ ಮಹಾರಾಷ್ಟ್ರ ಚಂದಗಡ ತಾಲೂಕಿನ ಮಾನಗಾವದ ಸದ್ಯ ಹೊಸವಂಟಮೂರಿ ನಿವಾಸಿ, ಜಿಡಿ ಯೂಟ್ಯೂಬರ್‌ ಪೃಥ್ವಿರಾಜ್ ನಾರಾಯಣ ಚೌಹಾಣ್‌ ಮತ್ತು ಬೆಳಗಾವಿ ತಾಲೂಕಿನ ಗಣೇಶಪುರ ನಿವಾಸಿ, ಜಿಡಿ ಯೂಟ್ಯೂಬರ್‌ ಡೇವಿಡ್‌ ಜಾಕೋಬ್ ತಂಗೇರಾಳ ಬಂಧಿತ ಆರೋಪಿಗಳು.ಜು.18ರಂದು ಸಂಜೆ 5 ಗಂಟೆ ಸುಮಾರಿಗೆ ಕೋಟಬಾಗಿ ಗ್ರಾಮದ ಮಹಿಬೂಬ್ ಬಾಬುಸಾಬ ಜಮಾದಾರ ಎಂಬುವವರಿಗೆ ಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಸ್ಥಳಕ್ಕೆ ಬರುವಂತೆ ತಿಳಿಸಿದ್ದ. ಬಳಿಕ ಗಾಂಜಾ ಚೀಟಿಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿ, ಎರಡು ಚೀಟಿ ಗಾಂಜಾ ನೀಡಿ ₹1 ಸಾವಿರ ಪಡೆದಿದ್ದ. ಇದಾದ ಕೆಲವೇ ಕ್ಷಣಗಳಲ್ಲಿ ಕಾರಿನಲ್ಲಿ ಬಂದ ನಾಲ್ವರು ಆರೋಪಿಗಳು ಜಮಾದಾರ ಅವರನ್ನು ತಡೆದಿದ್ದಾರೆ. ತಮ್ಮನ್ನು ಪೊಲೀಸರು ಎಂದು ಪರಿಚಯಿಸಿಕೊಂಡು, ನೀನು ಗಾಂಜಾ ಮಾರಾಟ ಮಾಡುತ್ತಿದ್ದೀಯಾ ಎಂದು ಬೆದರಿಸಿದ್ದಾರೆ. ಅವರ ಬಳಿಯಿದ್ದ ಗಾಂಜಾ ಪೊಟ್ಟಣಗಳನ್ನು ಬಲವಂತವಾಗಿ ಜೇಬಿಗೆ ಹಾಕಿ, ಅದರ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ನಂತರ ಜಮಾದಾರ ಅವರನ್ನು ಕಾರಿನಲ್ಲಿ ಕರೆದೊಯ್ದ ಆರೋಪಿಗಳು, ಹುಕ್ಕೇರಿ ಪೊಲೀಸ್ ಠಾಣೆಯ ಹತ್ತಿರ ಕಾರು ನಿಲ್ಲಿಸಿ, ಗಾಂಜಾ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕೋ ಅಥವಾ ಹಣ ನೀಡಿ ವಿಷಯ ಮುಗಿಸಿಕೊಳ್ಳುತ್ತಿಯೋ ಎಂದು ಬೆದರಿಸಿ ₹2 ಲಕ್ಷದಿಂದ ₹3 ಲಕ್ಷದವರೆಗೆ ಹಣ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಆರೋಪಿಗಳ ಬೆದರಿಕೆಗೆ ಹೆದರಿದ ಜಮಾದಾರ ಅವರು ಕೊನೆಗೆ ₹60 ಸಾವಿರ ನಗದು ನೀಡಿದ್ದರು. ಹಣ ಪಡೆದ ಆರೋಪಿಗಳು ಘಟನೆಯ ವಿಡಿಯೋವನ್ನು ಜಿ.ಟಿ. ಟಿವಿ ಎಂಬ ಸಾಮಾಜಿಕ ಜಾಲತಾಣದ ವಾಹಿನಿಯಲ್ಲಿ ಹರಿಬಿಟ್ಟಿದ್ದರು. ಈ ಸಂಬಂಧ ಜಮಾದಾರ ಅವರು ಹುಕ್ಕೇರಿ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಜಿಲ್ಲಾ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದ್ದರು. ತಾಂತ್ರಿಕ ಮಾಹಿತಿ, ಮೊಬೈಲ್ ಕರೆಗಳ ವಿವರ ಹಾಗೂ ಇತರೆ ಸಾಕ್ಷ್ಯಗಳನ್ನು ಸಂಗ್ರಹಿಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿಗಳಿಂದ ಮಹಾರಾಷ್ಟ್ರ ನೋಂದಣಿ ಮಾರುತಿ ಎರಟಿಗಾ ಕಾರು, ಕರ್ನಾಟಕ ನೋಂದಣಿಯ ಹೀರೋ ಎಚ್‌ಎಫ್ ಡಿಲಕ್ಸ್ ಬೈಕ್, ಎರಡು ಮೊಬೈಲ್‌ ಫೋನ್‌ಗಳು ಹಾಗೂ ಸುಲಿಗೆ ಮಾಡಿದ್ದ ಹಣದಲ್ಲಿ ₹34 ಸಾವಿರ ನಗದನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ಹುಕ್ಕೇರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಗೋಕಾಕ ಉಪವಿಭಾಗದ ಡಿವೈಎಸ್‌ಪಿ, ಹುಕ್ಕೇರಿ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ ಪೊಲೀಸ್ ತಂಡದ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.