ಏರ್‌ಪೋರ್ಟ್‌ನಲ್ಲಿ ಕ್ಯಾಬ್‌ಗಳಿಂದ ಸುಲಿಗೆ

| Published : Feb 15 2024, 01:31 AM IST

ಸಾರಾಂಶ

ಬೆಂಗಳೂರಿನ ಏರ್‌ಪೋರ್ಟ್‌ನಿಂದ ಸಂಚರಿಸುವ ಪ್ರಯಾಣಿಕರು ಎಚ್ಚರಿಕೆಯಿಂದ ಇರಿ. ಕ್ಯಾಬ್‌ ಚಾಲಕರಿಂದ ಸುಲಿಗೆ ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆ್ಯಪ್‌ ಆಧಾರಿತ ಕ್ಯಾಬ್ ಸೇವೆ ಹೆಸರಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ವಂಚಿಸಿ ಅಧಿಕ ಪ್ರಯಾಣ ದರ ವಸೂಲಿ ಮಾಡುವ ಸುಲಿಗೆ ಗ್ಯಾಂಗ್‌ವೊಂದು ಸಕ್ರಿಯವಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ಕೆಲ ದಿನಗಳ ಹಿಂದೆ ಕೆಐಎನಿಂದ ತಾವರೆಕೆರೆಗೆ ಪ್ರಯಾಣಿಕರೊಬ್ಬರನ್ನು ಉಬರ್ ಕ್ಯಾಬ್ ಚಾಲಕ ಎಂದು ಹೇಳಿ ಹತ್ತಿಸಿಕೊಂಡು ನಿಗದಿತ ದರಕ್ಕಿಂತ ದುಪ್ಟಟ್ಟು ಹಣವನ್ನು ಕಿಡಿಗೇಡಿ ಸುಲಿಗೆ ಮಾಡಿದ್ದಾನೆ. ಈ ಸಂಬಂಧ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಆರೋಪಿ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.

ಹೇಗೆ ವಂಚನೆ?:

ಕೆಐಎಗೆ ದೇಶ-ವಿದೇಶದಿಂದ ಆಗಮಿಸುವ ಪ್ರಯಾಣಿಕರು, ವಿಮಾನ ನಿಲ್ದಾಣದಿಂದ ತಮ್ಮ ಗಮ್ಯಕ್ಕೆ ತಲುಪಲು ಆ್ಯಪ್ ಆಧಾರಿತ ಕ್ಯಾಬ್ ಅಥವಾ ಟ್ರಾವೆಲ್ಸ್‌ಗಳಲ್ಲಿ ಸಾರಿಗೆ ಸೌಲಭ್ಯ ಪಡೆಯುತ್ತಾರೆ. ಆದರೆ ಕೆಲ ಕ್ಯಾಬ್ ಚಾಲಕರು, ವಿಮಾನ ನಿಲ್ದಾಣ ಆವರಣದ ಪ್ರಯಾಣಿಕರ ಪಿಕ್ ಆಪ್ ಸ್ಥಳದಲ್ಲಿ ನಿಲ್ಲುತ್ತಾರೆ. ಅಲ್ಲಿ ತಾವೇ ಆ್ಯಪ್ ಆಧಾರಿತ ಕ್ಯಾಬ್ ಚಾಲಕರು ಎಂದು ಹೇಳಿ ಪ್ರಯಾಣಿಕರನ್ನು ಬಲವಂತವಾಗಿ ತಮ್ಮ ಕ್ಯಾಬ್‌ ಹತ್ತಿಸಿಕೊಂಡು ಬಳಿಕ ಅಧಿಕ ದರ ವಸೂಲಿ ಮಾಡುತ್ತಾರೆ.

ಇದೇ ರೀತಿ ಜ.5ರಂದು ಮಡಿವಾಳದ ತಾವರೆಕೆರೆ ಸಮೀಪದ ನಿವಾಸಿಯೊಬ್ಬರು, ವಿಮಾನ ನಿಲ್ದಾಣಕ್ಕೆ ತಮ್ಮ ಸ್ನೇಹಿತರನ್ನು ಡ್ರಾಪ್ ಮಾಡಿ ಮನೆಗೆ ಮರಳಲು ಉಬರ್ ಕ್ಯಾಬ್ ಬುಕ್ ಮಾಡಿದ್ದರು. ಆಗ ಅಲ್ಲಿಗೆ ಬಂದ ಕ್ಯಾಬ್ ಚಾಲಕ, ನೀವು ಬುಕ್ ಮಾಡಿದ್ದ ಕ್ಯಾಬ್ ಇದೇ ಎಂದು ಹೇಳಿ ಆ ಪ್ರಯಾಣಿಕನನ್ನು ಹತ್ತಿಸಿಕೊಂಡಿದ್ದಾನೆ. ನಂತರ ತಾವರೆಕೆರೆಗೆ ಅಪಾರ್ಟ್‌ಮೆಂಟ್ ತೆರಳಿದ ಬಳಿಕ ಉಬರ್ ಆ್ಯಪ್‌ನಲ್ಲಿ ಪ್ರಯಾಣ ದರವು ₹904 ಎಂದು ತೋರಿಸಿದೆ. ಆದರೆ ಆರೋಪಿ, ತನ್ನ ಮೊಬೈಲ್‌ನಲ್ಲಿ ₹5194 ಬಂದಿದೆ. ಹೀಗಾಗಿ ನೀವು ಅಷ್ಟೇ ಹಣವನ್ನು ಕೊಡಬೇಕು ಎಂದಿದ್ದಾನೆ. ಕೊನೆಗೆ ಜಗಳವಾಡಿ ಆತ ಹಣವನ್ನು ವಸೂಲಿ ಮಾಡಿ ತೆರಳಿದ್ದಾನೆ. ಈ ಚಾಲಕನ ವರ್ತನೆಯಿಂದ ಅನುಮಾನಗೊಂಡ ಸಂತ್ರಸ್ತರು, ಉಬರ್ ಕಂಪನಿ ಸಹಾಯವಾಣಿಗೆ ಕರೆ ಮಾಡಿ ವಿಚಾರಿಸಿದಾಗ ವಂಚನೆ ನಡೆದಿರುವುದು ಗೊತ್ತಾಗಿದೆ. ಬಳಿಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಗೆ ತೆರಳಿ ಅವರು ದೂರು ನೀಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.