ವ್ಯಕ್ತಿತ್ವ ವಿಕಸನಕ್ಕೆ ಪಠ್ಯೇತರ ಚಟುವಟಿಕೆ ಅಗತ್ಯ: ಬಸವರಾಜ ಸಂಗಪ್ಪನವರ

| Published : Mar 04 2024, 01:17 AM IST

ಸಾರಾಂಶ

ಶಿಕ್ಷಕರ ಪಾಠಕ್ಕೆ, ಪೋಷಕರ ಸಹಕಾರ ಅಗತ್ಯ. ಈ ಮೂಲಕ ವಿದ್ಯಾರ್ಥಿಗಳು ದೇಶ, ರಾಜ್ಯಕ್ಕೆ ಕೀರ್ತಿ ತರುವಂತವರಾಗಬೇಕು.

ಹರಪನಹಳ್ಳಿ: ಮಕ್ಕಳು ಕೇವಲ ಪಠ್ಯ ಚಟುವಟಿಕೆಯಿಂದ ಇದ್ದರೆ ಸಾಕಾಗುವುದಿಲ್ಲ. ಪಠೇತರ ಚಟುವಟಿಕೆಯಲ್ಲಿ ತೊಡಗಿಕೊಂಡಾಗ ಮಾತ್ರ ವ್ಯಕ್ತಿತ್ವ ವಿಕಸನವಾಗಲಿದೆ ಎಂದು ವಿಜಯನಗರ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ರಾಜರಾಜೇಶ್ವರ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಎನ್ನುವುದು ಶಿಸ್ತನ್ನು ಕಲಿಸುವ, ಉತ್ತಮ ವ್ಯಕ್ತಿಯನ್ನಾಗಿಸುವ ಮಾಧ್ಯಮ. ಕೇವಲ ಪುಸ್ತಕದ ವಿದ್ಯೆ ಮಸ್ತಕಕ್ಕೆ ಹೋಗುವುದು ಮಾತ್ರವಲ್ಲ, ಸರ್ವಾಂಗೀಣ ಚಟುವಟಿಕೆಗಳನ್ನು ಮಾಡುವಂತಾಗಬೇಕು ಎಂದ ಅವರು, ಶಿಕ್ಷಕರ ಪಾಠಕ್ಕೆ, ಪೋಷಕರ ಸಹಕಾರ ಅಗತ್ಯ. ಈ ಮೂಲಕ ವಿದ್ಯಾರ್ಥಿಗಳು ದೇಶ, ರಾಜ್ಯಕ್ಕೆ ಕೀರ್ತಿ ತರುವಂತವರಾಗಬೇಕು ಎಂದರು.

ಪ್ರಗತಿಪರ ಚಿಂತಕ, ನಿವೃತ್ತ ಶಿಕ್ಷಕ ಇಸ್ಮಾಯಿಲ್ ಎಲಿಗಾರ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕೊಡುವ ಮೂಲಕ ಉತ್ತಮ ಮೌಲ್ಯಗಳನ್ನು ಸಹ ಕಲಿಸುವುದು ಅಗತ್ಯವಿದೆ ಎಂದರು.

ಜನ್ಮ ಕೊಟ್ಟವರು ಪೋಷಕರು ಆದರೆ, ಶಿಕ್ಷಕರು ಉತ್ತಮ ಪ್ರಜೆಯನ್ನಾಗಿ ಮಾಡುವ ಹೊಣೆಗಾರಿಕೆ ಇರುತ್ತದೆ. ಪೋಷಕರು ಮತ್ತು ಶಿಕ್ಷಕರ ನಡುವೆ ವಿದ್ಯಾರ್ಥಿಗಳು ಉತ್ತಮ ಮೌಲ್ಯಗಳನ್ನು ಕಲಿಯುವುದು ಅಗತ್ಯವಿದ್ದು, ಯಾವುದೇ ಒತ್ತಡದ ಶಿಕ್ಷಣ ಮಕ್ಕಳಿಗೆ ಬೇಡ. ಇತರ ಮಕ್ಕಳೊಂದಿಗೆ ತಮ್ಮ ಮಕ್ಕಳನ್ನು ಹೋಲಿಕೆ ಮಾಡಬೇಡಿ. ಅವರು ಯಾವುದಾದರೂ ಆಸಕ್ತಿ ಕ್ಷೇತ್ರದಲ್ಲಿ ಉನ್ನತ ಸಾಧನೆಗೆ ಪ್ರೋತ್ಸಾಹ ನೀಡಿ ಎಂದರು.

ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಆರ್.ವಿ. ಗೋವಿಂದರಾಜು, ಪತ್ರಕರ್ತ ಪಿ. ಕರಿಬಸಪ್ಪ, ಶಾಲಾ ಮುಖ್ಯೋಪಾಧ್ಯಾಯ ತಿಮ್ಮಪ್ಪ ಮಾತನಾಡಿದರು.

ಶಾಲಾ ವಾರ್ಷಿಕೋತ್ಸವ ವರದಿ ವಾಚನ ನಂತರ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಮತ್ತು ವಿವಿಧ ಚಟುವಟಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಂತರ ಒಂದರಿಂದ ಏಳನೇ ತರಗತಿಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರನ್ನು ರಂಜಿಸಿದರು.

ಈ ಸಂದರ್ಭದಲ್ಲಿ ಕೀಲು ಮೂಳೆ ನಾಟಿ ವೈದ್ಯ ಬಿ.ಬಿ. ಹೊಸೂರಪ್ಪ, ಆರೋಗ್ಯ ಇಲಾಖೆಯ ಅರ್ಪಿತ, ಪಾರ್ವತಮ್ಮ, ಶಿಕ್ಷಕರಾದ ಜಾಥಪ್ಪ, ದುರುಗೇಶ, ಸತೀಶ, ರಶ್ಮಿ, ಶಮಾ, ರೂಪಾ, ಹಮೀದಾ, ಮಂಜುಳಾ, ನೇತ್ರಾವತಿ, ಸೇರಿದಂತೆ ಶಾಲಾ ಸಿಬ್ಬಂದಿ, ಪೋಷಕರು, ಮಕ್ಕಳು ಇದ್ದರು.