ಸಾರಾಂಶ
ನರಗುಂದ ಪಟ್ಟಣದ ಶ್ರೀ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಸ್ತುತ ಸಾಲಿನ ಒಕ್ಕೂಟ, ಕ್ರೀಡಾ ಹಾಗೂ ಪಠ್ಯೇತರ ಚಟುವಟಿಕೆಗೆ ಚಾಲನೆ ಹಾಗೂ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ನಡೆಯಿತು.
ನರಗುಂದ: ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಾಗಬೇಕಾದರೆ ಪಠ್ಯದ ಜತೆ ಪಠ್ಯೇತರ ಚಟುವಟಿಕೆಯೂ ಮುಖ್ಯ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಶ್ರೀ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಸ್ತುತ ಸಾಲಿನ ಒಕ್ಕೂಟ, ಕ್ರೀಡಾ ಹಾಗೂ ಪಠ್ಯೇತರ ಚಟುವಟಿಕೆಗೆ ಚಾಲನೆ ಹಾಗೂ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಪದವಿ ಹಂತ ಮುಖ್ಯವಾಗಿದೆ. ಆದ್ದರಿಂದ ಪ್ರಥಮ ವರ್ಷ ಪ್ರವೇಶ ಪಡೆದ ವಿದ್ಯಾರ್ಥಿಗಳು ಧನಾತ್ಮಕ ವಿಚಾರಗಳೊಂದಿಗೆ ಅಭ್ಯಾಸದಲ್ಲಿ ತೊಡಗಿ ಗುರಿ ಮುಟ್ಟುಬೇಕು ಎಂದು ಹೇಳಿದರು.ಪದವಿ ವಿದ್ಯಾರ್ಥಿ ಜೀವನದ ಪ್ರಮುಖ ಅಂಗವಾಗಿದೆ. ಅದನ್ನು ಕಷ್ಟಪಟ್ಟು ಓದಿ ಸಾರ್ಥಕಪಡಿಸಿಕೊಳ್ಳಬೇಕು. ಮಕ್ಕಳ ಮನಸ್ಸನ್ನು ಅರಿತು ಪ್ರಾಧ್ಯಾಪಕರು ಬೋಧಿಸಬೇಕು ಎಂದರು.
ಜಮಖಂಡಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ವೈ.ವೈ. ಕೊಕ್ಕನವರ ಮಾತನಾಡಿ, ಎಲ್ಲ ಪ್ರಾಧ್ಯಾಪಕರು ನೈತಿಕ ಮೌಲ್ಯಗಳನ್ನು ಬೆಳೆಸಬೇಕು. ಜನಪದ ಹಾಡುಗಳ ಮೂಲಕ ಒಳ್ಳೆಯ ಜ್ಞಾನ ಸಂಪಾದಿಸಿಕೊಳ್ಳಬಹುದು ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯ ಆನಂದಕುಮಾರ ಲಾಲಸಂಗಿ ಕಾಲೇಜಿನ ಸಾಧನೆ, ಕಾರ್ಯಕ್ರಮದ ಉದ್ದೇಶ ವಿವರಿಸಿದರು.
ನಿವೃತ್ತ ಪ್ರಾಚಾರ್ಯ ಸಿ.ಎಸ್. ಸಾಲೂಟಗಿಮಠ, ಬಿ.ಎಂ. ಜಾಬಣ್ಣವರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಸ್.ಜಿ. ಬ್ಯಾಹಟ್ಟಿ, ಬಿ.ಕೆ. ಗುಜಮಾಗಡಿ, ಭಾವನಾ ಪಾಟೀಲ, ಎಂ.ಎಸ್. ಯಾವಗಲ್, ಒಕ್ಕೂಟದ ಕಾರ್ಯಾಧ್ಯಕ್ಷ ಚಿತ್ತಯ್ಯ ಸಿ., ದುಂಡಪ್ಪ ದೊಡಮನಿ, ಯಶೋದಾ ಅಂಗಡಿ, ಜಗದೀಶ ತಳವಾರ, ಆರ್.ಎಚ್. ತಿಗಡಿ ಇದ್ದರು. ಎಸ್.ವಿ. ಮನಗುಂಡಿ ಸ್ವಾಗತಿಸಿದರು. ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ಗಂಗಾಧರಯ್ಯ ವಂದಿಸಿದರು.