ಮಕ್ಕಳಲ್ಲಿ ಅಡಗಿರುವ ಸೃಜನಶೀಲತೆ ಹೊರಹಾಕಲು ಕಲಿಕಾ ಹಬ್ಬ ಒಂದು ಉತ್ತಮ ವೇದಿಕೆಯಾಗಿದೆ.

ಕಲಿಕಾ ಹಬ್ಬ ಉದ್ಘಾಟನೆ । ಅತ್ಯಾಧುನಿಕ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಲೋಕಾರ್ಪಣೆಕನ್ನಡಪ್ರಭ ವಾರ್ತೆ ಶಿರಸಿ

ನವೀನ ಮಾದರಿಯ ಕಲಿಕಾ ಪದ್ಧತಿಗಳು ಮತ್ತು ತಂತ್ರಜ್ಞಾನದ ಅಳವಡಿಕೆಯಿಂದ ಮಾತ್ರ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಸಾಧ್ಯ ಎಂದು ಶಾಸಕ ಭೀಮಣ್ಣ ನಾಯ್ಕ ಅಭಿಪ್ರಾಯಪಟ್ಟರು.

ಶನಿವಾರ ಇಲ್ಲಿನ ಗಾಂಧಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಅತ್ಯಾಧುನಿಕ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಮಕ್ಕಳಲ್ಲಿ ಅಡಗಿರುವ ಸೃಜನಶೀಲತೆ ಹೊರಹಾಕಲು ಕಲಿಕಾ ಹಬ್ಬ ಒಂದು ಉತ್ತಮ ವೇದಿಕೆಯಾಗಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳುವುದು ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕ. ಇಂದಿನ ಡಿಜಿಟಲ್ ಯುಗದಲ್ಲಿ ಸರ್ಕಾರಿ ಶಾಲೆಯ ಮಕ್ಕಳು ತಂತ್ರಜ್ಞಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಗಾಂಧಿನಗರದ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಲಾಯಿತು. ಇದು ದೃಶ್ಯ-ಶ್ರವಣ ಮಾಧ್ಯಮದ ಮೂಲಕ ಪಾಠಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗಲಿದೆ. ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಅಭಿವೃದ್ಧಿಪಡಿಸುವುದು ನಮ್ಮ ಗುರಿ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವಂತ ವಾತಾವರಣ ನಿರ್ಮಾಣ ಮಾಡುತ್ತೇವೆ. ಶಿಕ್ಷಕರು ಮತ್ತು ಪೋಷಕರು ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮುಖ್ಯಾಧ್ಯಾಪಕ, ಶಿಕ್ಷಕ ವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು. ಬಳಿಕ ಶಾಸಕರು ಮಕ್ಕಳೊಂದಿಗೆ ಸಂವಾದ ನಡೆಸಿ, ಕಲಿಕಾ ಹಬ್ಬದ ಅಂಗವಾಗಿ ಸಿದ್ಧಪಡಿಸಲಾದ ವಿವಿಧ ಮಾದರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.