ಸರ್ವಾಂಗೀಣ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಮುಖ್ಯ

| Published : Sep 04 2025, 01:00 AM IST

ಸರ್ವಾಂಗೀಣ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಮುಖ್ಯ
Share this Article
  • FB
  • TW
  • Linkdin
  • Email

ಸಾರಾಂಶ

ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯವಾಗುತ್ತವೆ ಎಂದು ಜೆಎಸ್‌ಎಸ್‌ ಮಹಾ ವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯವಾಗುತ್ತವೆ ಎಂದು ಜೆಎಸ್‌ಎಸ್‌ ಮಹಾ ವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ ಹೇಳಿದರು.

ಪಟ್ಟಣದ ಜೆಎಸ್‌ಎಸ್‌ ಅನುಭವ ಮಂಟಪದಲ್ಲಿ ಜೆಎಸ್‌ಎಸ್‌ ಕಲಾ ಮತ್ತು ವಾಣಿಜ್ಯ ಕಾಲೇಜಿನ 2025-26ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರತರಲು ಈ ವೇದಿಕೆ ಸಹಾಯವಾಗುತ್ತದೆ ಎಂದರು.

ಕಲೆ, ಸಂಸ್ಕೃತಿ, ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳು ಪ್ರೋತ್ಸಾಹ ನೀಡುತ್ತಲೇ ಬಂದಿದೆ. ಇತ್ತೀಚಿನ ದಿನಗಳಲ್ಲಿ ಅಂಕಪಟ್ಟಿಯ ಜೊತೆಗೆ ನೈಪುಣ್ಯತೆ ಬೆಳಸಿಕೊಳ್ಳಬೇಕು. ನಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ನಾವು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.

ಪರಿಶ್ರಮ ಮತ್ತು ನಿರಂತರ ಅಭ್ಯಾಸದಿಂದ ದೇಹ ಮತ್ತು ಮನಸ್ಸು ಸಧೃಢವಾಗುತ್ತದೆ. ವಿದ್ಯೆಯನ್ನು ಇಷ್ಟಪಟ್ಟು ಅಧ್ಯಯನ ಮಾಡಿದರೆ ಒಳ್ಳೆಯ ಫಲ ನೀಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರಾಂಶುಪಾಲೆ ಡಾ.ಮಹದೇವಮ್ಮ ಪಿ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಸೋಲು- ಗೆಲುವು ಜೀವನದ ಒಂದು ಭಾಗ ಆದರೆ ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕು ಎಂದರು.

ಕ್ರೀಡೆಯು ನಮಗೆ ಸಮಯ ಪ್ರಜ್ಞೆ, ಮನಸ್ಸಿನ ಒತ್ತಡವನ್ನು ನಿವಾರಿಸುವ ಬಗ್ಗೆ ಆತ್ಮವಿಶ್ವಾಸ, ನಾಯಕತ್ವ ಗುಣ, ಬೆಳಯಲು ಪೂರಕವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳಿಂದ ಉದ್ಯೋಗವಕಾಶಗಳು ದೊರಕುತ್ತದೆ ಎಂದರು.

ನಮ್ಮ ಸಂಘದ ವ್ಯವಸ್ಥಾಪಕ ಶಮಂತ್‌ ವೇಣುಗೋಪಾಲ್‌ ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಮೂಲಕ ತಮ್ಮ ಕೌಶಲ್ಯ ವೃದ್ಧಿಸಿಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಡಾ. ಪಂಕಜ ಹೆಚ್.ಪಿ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಮಲ್ಲುಸ್ವಾಮಿ ಎನ್, ವಾಣಿಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿ ಕಾರ್ಯದರ್ಶಿ ಹೆಚ್.ಕೆ. ಮಲ್ಲಿಕಾರ್ಜುನ,ಕಲಾ ವಿಭಾಗದ ವಿದ್ಯಾರ್ಥಿ ಕಾರ್ಯದರ್ಶಿ ಹೆಚ್.ಎನ್.ಚೇತನ್, ಕ್ರೀಡಾ ಕಾರ್ಯದರ್ಶಿ ನಾಗೇಂದ್ರ, ಭೂಗೋಳ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎನ್.ಗುರುಪ್ರಸಾದ್, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಿ.ಎಸ್ ಅನಿತಾ, ಡಾ.ಪಂಕಜ ಹೆಚ್.ಪಿ ಸೇರಿದಂತೆ ವಿದ್ಯಾರ್ಥಿಗಳಿದ್ದರು.