ಒಳ ಮೀಸಲು ವರ್ಗೀಕರಣ ಸೂತ್ರದಲ್ಲಿ ದೋಷ

| Published : Sep 04 2025, 01:00 AM IST

ಒಳ ಮೀಸಲು ವರ್ಗೀಕರಣ ಸೂತ್ರದಲ್ಲಿ ದೋಷ
Share this Article
  • FB
  • TW
  • Linkdin
  • Email

ಸಾರಾಂಶ

ಒಳ ಮೀಸಲಾತಿ ವರ್ಗೀಕರಣ ಸೂತ್ರದಲ್ಲಿ ದೋಷವಾಗಿದ್ದು, ಅದನ್ನು ಸರಿಪಡಿಸಬೇಕು ಎಂದು ಕರ್ನಾಟಕ ಮಾದಿಗ ಮತ್ತು ಉಪ ಜಾತಿಗಳ ಒಳ ಮೀಸಲಾತಿ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕ ಪಿ.ಶಿವಪ್ಪ ಒತ್ತಾಯಿಸಿದರು.

ಶಿವಮೊಗ್ಗ: ಒಳ ಮೀಸಲಾತಿ ವರ್ಗೀಕರಣ ಸೂತ್ರದಲ್ಲಿ ದೋಷವಾಗಿದ್ದು, ಅದನ್ನು ಸರಿಪಡಿಸಬೇಕು ಎಂದು ಕರ್ನಾಟಕ ಮಾದಿಗ ಮತ್ತು ಉಪ ಜಾತಿಗಳ ಒಳ ಮೀಸಲಾತಿ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕ ಪಿ.ಶಿವಪ್ಪ ಒತ್ತಾಯಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಜಾರಿ ಮಾಡಲು ಹೊರಟಿದೆ. ಸೆ.೪ರಂದು ಇದಕ್ಕಾಗಿ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ದೋಷಪೂರಿತವಾಗಿರುವ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಿ ಎಲ್ಲ 101 ಪರಿಶಿಷ್ಟ ಜಾತಿಗಳಿಗೆ ನ್ಯಾಯ ಸಿಗಬೇಕು. 6, 6, 5ರ ವರ್ಗೀಕರಣ ಸೂತ್ರ ಸರಿ ಇಲ್ಲ. ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಿಖರ ದತ್ತಾಂಶಗಳ ಆಧಾರದಲ್ಲಿ ಅಂತರ್ ಹಿಂದುಳಿದಿರುವಿಕೆ ಆಧಾರದಲ್ಲಿ ವರ್ಗೀಕರಣ ಮಾಡಬೇಕಾಗುತ್ತದೆ. ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದಲ್ಲಿ ನ್ಯಾ.ನಾಗಮೋಹನ್ ದಾಸ್ ಅವರು ವರ್ಗೀಕರಣ ಸೂತ್ರದ ಮೂಲಕ ವರದಿ ಸಲ್ಲಿಸಿದ್ದರು. ಆದರೆ, ರಾಜ್ಯ ಸರ್ಕಾರ ಅದನ್ನು ಪರಿಗಣಿಸದೆ ಸುಪ್ರೀಂ ಕೋರ್ಟ್‌ನ ಆದೇಶದ ಮೂಲ ಆಶಯವನ್ನೇ ಮಣ್ಣುಪಾಲು ಮಾಡಿದೆ. ಆಯೋಗದ ವರದಿಯನ್ನು ಜಾರಿ ಮಾಡಲು ಆಗದಿದ್ದರೆ ಆಯೋಗವನ್ನೇಕೆ ರಚಿಸಬೇಕು ಎಂದು ಪ್ರಶ್ನಿಸಿದ ಅವರು, ಸಚಿವ ಸಂಪುಟದ ರಾಜಕೀಯ ಪ್ರೇರಿತ ನಿರ್ಧಾರದಿಂದ ಸಾಮಾಜಿಕ ನ್ಯಾಯದ ಆಶಯ ಮೂಲೆಗುಂಪಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಪ್ರಬಲ ಜಾತಿಗಳ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಈ ರಾಜಕೀಯ ನಿರ್ಧಾರ ಕೈಗೊಂಡಿದೆ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಈ ಮೂರು ಜಾತಿಗಳ ಗೊಂದಲವನ್ನು ಪರಿಹರಿಸುವಲ್ಲಿಯೂ ವಿಫಲವಾಗಿದೆ. ಈ ಗೊಂದಲವನ್ನು ಜೀವಂತವಾಗಿ ಉಳಿಸುವ ಹುನ್ನಾರ ಇದರಲ್ಲಿ ಅಡಗಿದೆ. ಅಲ್ಲದೇ ಅಲೆಮಾರಿಗಳಿಗೂ ಅನ್ಯಾಯ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೊಂದಲಗಳು ಪರಿಹಾರವಾಗುವ ಮೊದಲೇ ಸರ್ಕಾರ ಯಾವುದೇ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಬಾರದು. ಇದರಿಂದ ದುರ್ಬಲ ಜಾತಿಗಳ ಅವಕಾಶ ಕಿತ್ತುಕೊಂಡಂತಾಗುತ್ತದೆ. ಪರಿಶಿಷ್ಟ ಜಾತಿಗಳ ವರ್ಗೀಕರಣ ಶಿಕ್ಷಣ ಉದ್ಯೋಗದ ಜೊತೆಗೆ ಪರಿಶಿಷ್ಟ ಜಾತಿಗಲ ಮೀಸಲು ನಿಧಿಗೂ ಅನ್ವಯ ಆಗಬೇಕು. ಆ ಮೂಲಕ ಅವಕಾಶ ವಂಚಿತ ಮಾದಿಗ ಮತ್ತು ಅದರ ಉಪ ಜಾತಿಗಳಿಗೆ ನ್ಯಾಯ ಸಿಗಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ವಿವಿಧ ಘಟಕಗಳ ಪದಾಧಿಕಾರಿಗಳಾದ ಸಿ.ಮೂರ್ತಿ, ಎಚ್‌.ಎನ್‌.ಚಂದ್ರಪ್ಪ, ಶಿವಾಜಿ, ವಿಜಯೇಂದ್ರ, ಅಶೋಕ್ ಕುಮಾರ್, ಚಂದ್ರಪ್ಪ ಮುಂತಾದವರಿದ್ದರು.