ಕುಷ್ಟಗಿ ತಾಲೂಕಿನ ಮೇಣೆದಾಳ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2025–26ನೇ ಸಾಲಿನ ದೈಹಿಕ ಶಿಕ್ಷಣ ಶಿಕ್ಷಕರ ಡ್ರಮ್ ಸೆಟ್ ತರಬೇತಿ ಕಾರ್ಯಾಗಾರ ನಡೆಯಿತು.
ಕುಷ್ಟಗಿ: ತಾಲೂಕಿನ ಮೇಣೆದಾಳ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಾಗೂ ಕರ್ನಾಟಕ ರಾಜ್ಯ ಕ್ರೈಸ್ ವಸತಿ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಆಶ್ರಯದಲ್ಲಿ 2025–26ನೇ ಸಾಲಿನ ದೈಹಿಕ ಶಿಕ್ಷಣ ಶಿಕ್ಷಕರ ಡ್ರಮ್ ಸೆಟ್ ತರಬೇತಿ ಕಾರ್ಯಾಗಾರ ನಡೆಯಿತು.
ಸೋಮಶೇಖರ್ ಹರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯೇತರ ಚಟುವಟಿಕೆ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಅಗತ್ಯವಾಗಿವೆ. ದೈಹಿಕ ಶಿಕ್ಷಣ ಶಿಸ್ತು, ಸಮಯಪಾಲನೆ, ಸಹಕಾರ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ಡ್ರಮ್ ಸೆಟ್ ತರಬೇತಿಯಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಏಕಾಗ್ರತೆ ಹಾಗೂ ಸಾಂಸ್ಕೃತಿಕ ಸಂವೇದನೆಯನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.ವಸತಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಇಂತಹ ತರಬೇತಿಗಳು ಬಹುಮುಖ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆಯಾಗಿದ್ದು, ಶಿಕ್ಷಕರು ಪಡೆದ ತರಬೇತಿಯನ್ನು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಹಂಚಿಕೊಳ್ಳಬೇಕು ಎಂದು ಸಲಹೆ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಕೇವಲ ಆಟ-ಪಾಠಕ್ಕೆ ಸೀಮಿತವಾಗದೇ, ವಿದ್ಯಾರ್ಥಿಗಳನ್ನು ಜೀವನ ಮೌಲ್ಯಗಳತ್ತ ಮುನ್ನಡೆಸುವಲ್ಲಿ ಪ್ರಮುಖವಾಗಿದೆ ಎಂದು ಅವರು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಕೆ.ಎಚ್. ತಳವಾರ ಮಾತನಾಡಿ, ದೈಹಿಕ ಶಿಕ್ಷಣ ಮತ್ತು ಸಂಗೀತ ತರಬೇತಿ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಸಹಕಾರಿಯಾಗಿದ್ದು, ಇಂತಹ ತರಬೇತಿ ಕಾರ್ಯಗಾರಗಳು ಶಿಕ್ಷಕರ ವೃತ್ತಿಪರ ಸಾಮರ್ಥ್ಯ ವೃದ್ಧಿಗೆ ನೆರವಾಗುತ್ತವೆ ಎಂದು ಹೇಳಿದರು.
ಕುಮಾರಸ್ವಾಮಿ, ಪ್ರಕಾಶ್ ಕಾಟಾಪುರ, ರಾಜು ಮಡ್ಡಿ, ಎಚ್.ಎಂ. ಧರ್ಮಣ್ಣವರು, ಗುರುಪಾದಗೌಡ ಸೂಡಿ, ಸಂಗಪ್ಪ ಎಚ್.ಬಿ. ಸಂಗನಗೌಡ ಪೊಲೀಸ್ ಪಾಟೀಲ್, ಪುಂಡಲೀಕ ಪೂಜಾರಿ, ಅರ್ಜುನ್ ಭಾವಿಕಟ್ಟಿ, ರಮೇಶ್ ಬೂದಿಹಾಳ, ಚಂದ್ರಕಲಾ, ಹನುಮಂತಗೌಡ ಬಾದಾ, ದೇವೇಂದ್ರಪ್ಪ, ಶಂಕರ ಉಪಸ್ಥಿತರಿದ್ದರು.ಕಾರ್ಯಗಾರದಲ್ಲಿ ಜಿಲ್ಲೆಯ ವಿವಿಧ ವಸತಿ ಶಾಲೆಗಳಿಂದ ಆಗಮಿಸಿದ 27 ದೈಹಿಕ ಶಿಕ್ಷಣ ಶಿಕ್ಷಕರು ಭಾಗವಹಿಸಿ ಡ್ರಮ್ ಸೆಟ್ ಕುರಿತು ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ತರಬೇತಿ ಪಡೆದುಕೊಂಡರು. ಮುತ್ತಣ್ಣ ಕಾರ್ಯಕ್ರಮ ನಿರೂಪಿಸಿದರು. ಶಿವಕುಮಾರ ವಂದಿಸಿದರು.