ಕನ್ನಡಪ್ರಭ ವಾರ್ತೆ ಮಧುಗಿರಿ

ವಿದ್ಯಾರ್ಥಿಗಳು ಓದುವ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿ ಬೆಳೆಸಿಕೊಂಡಾಗ ಮಾತ್ರ ಪರಿಪೂರ್ಣ ವ್ಯಕ್ತಿಯಾಗಿ ಹೊರ ಹೊಮ್ಮಲು ಸಾಧ್ಯ ಎಂದು ಮಿಡಿಗೇಶಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಸಿ.ಬಸವರಾಜು ಹೇಳಿದರು.

ತಾಲೂಕಿನ ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ 2025 - 26 ನೇ ಸಾಲಿನ ಸಾಂಸ್ಕೃತಿಕ ಸಮಿತಿ ವತಿಯಿಂದ ಯುವ ಸೌರಭ 2026 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ಸೌಹಾರ್ದ ಮನೋಭಾವ ವೃದ್ಧಿಸುತ್ತದೆ. ಸ್ನೇಹ ,ವ್ಯಕ್ತಿ ಗೌರವ ಉಳಿಸಿ ಬೆಳೆಸುವಲ್ಲಿ ಕ್ರೀಡೆಗಳು ಮಹತ್ವ ಪಡೆಯುತ್ತವೆ. ವಿದ್ಯಾರ್ಥಿ ಜೀವನದಲ್ಲಿ ಕೇವಲ ಪುಸ್ತಕ ಓದುವುದಲ್ಲದೆ ಪ್ರಪಂಚದ ಆಗು ಹೋಗುಗಳ ಬಗ್ಗೆಯೂ ಸಾಮಾನ್ಯ ಜ್ಞಾನ ಸಂಪಾದಿಸುವ ಮೂಲಕ ಕೂತುಹಲದಿಂದ ಗಮನಿಸುವ ಪರಿಜ್ಞಾನ ಬೆಳಸಿಕೊಳ್ಳಬೇಕು ಎಂದರು.

ಕಲಾವಿದ ನೀರಕಲ್ಲು ನರಸಿಂಹಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ದಿನವೆಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಮುಳುಗಿ ಹೋಗುತ್ತಿದ್ದು ಕಲೆಯ ನಿಜವಾದ ಬೇರು ಒಣಗಿ ಹೋಗುತ್ತಿದೆ. ಇಂದಿನ ಯುವ ಪೀಳಿಗೆ ಹಿರಿಯರಾದ ಅಜ್ಜ -ಅಜ್ಜಿಯರಲ್ಲಿ ಕಥೆ, ಲಾವಣಿ, ಸೋಬಾನೆ ಪದಗಳು ಕೇಳಿ ಕಲಿಯುತ್ತಿದ್ದ ನೀತಿ ಕಥೆಗಳು ಇಂದಿನ ಕಂಪ್ಯೂಟರ್ ಯುಗದಲ್ಲಿ ಕಣ್ಮರೆಯಾಗುತ್ತಿವೆ. ಆದರೆ ಯಾಂತ್ರಿಕ ಯುಗದಲ್ಲಿ ಅಂತಹ ನೀತಿ ಕತೆಗಳು ಕಿವಿ ಕೇಳುವುದಾಗಲಿ ,ಕಣ್ಣು ನೋಡುವುದಾಗಲಿ ಸಾಧ್ಯವಾಗದಂತೆ ಮಾಧ್ಯಮಗಳು ತಮ್ಮ ಪ್ರಭಾವ ಹೆಚ್ಚಿಸಿವೆ. ಇದರಿಂದ ಮುಂದಿನ ಮಕ್ಕಳು ಸಂಸ್ಕೃತಿಯ ಗಂಧ ಗಾಳಿ ಗೊತ್ತಿಲ್ಲದೆ ಬೆಳೆಯುವುದಕ್ಕೆ ನಾವೇ ಕಾರಣಿ ಭೂತರಾಗುತ್ತೀದ್ದೇವೆ ಎಂದು ವಿಷಾದಿಸಿದರು.


ಸಾಂಸ್ಕೃತಿಕ ಸಂಚಾಲಕಿ ಪ್ರೊ.ರಜಿನಿ.ಜಿ.ಸಿ ಮಾತನಾಡಿ, ಕಲೆಗಳು ಸೋಮಾರಿ ಸ್ವತ್ತಲ್ಲ. ಬದಲಾಗಿ ಶ್ರಮಿಕನ ಸ್ವತ್ತು. ಕಠಿಣ ಪರಿಶ್ರಮವಿಲ್ಲದೆ ಕಲೆ ಒಲಿಯುವುದಿಲ್ಲ. ಅದನ್ನು ಮೈಗೂಡಿಸಿಕೊಂಡವರಿಗೆ ಮಾತ್ರ ಒಲಿಯುತ್ತದೆ. ಸ್ಥಳೀಯ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವುದು ಶಿಕ್ಷಣ ಸಂಸ್ಥೆಗಳ ನಿಜವಾದ ಕಾರ್ಯವಾಗಬೇಕು ಈ ನಿಟ್ಟಿನಲ್ಲಿ ಮಿಡಿಗೇಶಿ ಕಾಲೇಜು ಸಾಗಿದ್ದು ಕಲೆಗಳನ್ನು ಉಳಿಸೋಣ ಎಂದರು.

ಐಕ್ಯೂಎಸಿ ಸಂಚಾಲಕ ಡಾ.ಎಲ್ ಮಂಜು ಭಾರ್ಗವಿ ಮಾತನಾಡುತ್ತ ಪ್ರತಿ ರಾಜ್ಯ ಪ್ರತಿ ಜಿಲ್ಲೆಯಲ್ಲಿ ಪ್ರತ್ಯೇಕ ಸಂಸ್ಕೃತಿ, ಸಂಸ್ಕಾರವಿದ್ದು ಅದನ್ನು ತಿಳಿಯುವ ಕುತೂಹಲ ವಿದ್ಯಾರ್ಥಿಗಳಲ್ಲಿ ಇರಬೇಕು ಕಲೆ ಸಂಸ್ಕೃತಿ ಉಳಿಸುವುದು ನಮ್ಮ ಜವಾಬ್ದಾರಿ ಎಂದರು.

ಎರಡು ದಿನದ ಯುವ ಸೌರಭದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು ನಡೆದವು. ಈ ಸಂದರ್ಭದಲ್ಲಿ ತೀರ್ಪುಗಾರರಾಗಿ ಡಾ.ಅನುಪಮಾ, ಗ್ರಂಥಪಾಲಕರಾದ ಷಣ್ಮುಖಾಚಾರಿ, ಪ್ರೊ.ಪುಟ್ಟರಾಜು, ಪ್ರೊ ಚಂದನಾ ಟಿ.ಪ್ರಥಮ ದರ್ಜೆ ಸಹಾಯಕಿ ಶ್ರೀದೇವಿ, ಆಶಾ ಎಚ್ ಸಿ.ರಾಮಚಂದ್ರಪ್ಪ, ತಿಪ್ಪೇಸ್ವಾಮಿ ಎಂ.ಕೆ ಹಿಂದುಜಾ , ಜಾಂಭವಿ, ವಿಜಯ್ ಕುಮಾರ್ ಹಾಜರಿದ್ದರು.