ಸಾರಾಂಶ
ಸಾಂಸ್ಕೃತಿಕ ಕಾರ್ಯಕ್ರಮ । ವಿದ್ಯಾರ್ಥಿಗಳ ಮೊಬೈಲ್ ಬಳಕೆ ಆರೋಗ್ಯಕರ ಇರಬೇಕು ಎಂದು ಸಲಹೆ
ಕನ್ನಡಪ್ರಭ ವಾರ್ತೆ ಚಾಮರಾಜನಗರವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎನ್. ಮುನಿರಾಜು ಹೇಳಿದರು.
ನಗರದ ಭೋಗಪುರದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಿವಿಧ ಸಮಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರತಿ ವಿದ್ಯಾರ್ಥಿಯು ಓದಿನ ಜತೆ ಕ್ರೀಡೆ, ಸಾಂಸ್ಕೃತಿಕ, ಕಾಲೇಜಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಕೌಶಲ್ಯ ಪೂರ್ಣ ಜೀವನ ವೃದ್ಧಿಸಿಕೊಳ್ಳಬೇಕು. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ, ನಿಮಗೆ ನೀವೆ ಬೆಳಕು, ನಿಮ್ಮ ಏಳಿಗೆಗೆ ನೀವೆ ಶಕ್ತಿ ಎಂಬ ಮಹನೀಯರ ತತ್ವವಾಣಿಗಳನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಜೀವನದಲ್ಲಿ ಉತ್ತುಂಗಕ್ಕೇರಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಶಿಷ್ಯವೇತನ ಯೋಜನೆಯಡಿ ವಿದೇಶದಲ್ಲಿ ವ್ಯಾಸಂಗ ಮಾಡುವ ಅವಕಾಶವನ್ನು ಸಮಾಜ ಕಲ್ಯಾಣ ಇಲಾಖೆ ಮಾಡಿಕೊಟ್ಟಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.
ಬಿರ್ಸಾ ಮುಂಡಾ ಬುಡಕಟ್ಟು ಸಮುದಾಯವನ್ನು ಜಾಗೃತಿಗೊಳಿಸಿ ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಜೀವನವನ್ನು ದೇಶಕ್ಕಾಗಿ ಅರ್ಪಿಸಿದರು. ಅಲ್ಲದೆ ಯುವ ಪೀಳಿಗೆಗೆ ಪ್ರೇರಣೆಯಾಗಿದ್ದಾರೆ. ಬಿರ್ಸಾ ಮುಂಡಾ ಹೆಸರಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.ಸುಸಜ್ಜಿತ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ನಿರ್ಮಿಸಿರುವುದು ಇದೇ ಮೊದಲು. ಹಾಸ್ಟೆಲ್ ನಿರ್ವಹಿಸುವ ಜವಾಬ್ದಾರಿಯನ್ನು ಸಮಾಜ ಕಲ್ಯಾಣ ಇಲಾಖೆಯು ಆದಷ್ಟು ಬೇಗ ಕೈಗೊಳ್ಳಲಿದೆ. ಹಾಸ್ಟೆಲ್ ಪ್ರಾರಂಭವಾಗುವವರೆಗೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಟ್ಟಣದ ವಿದ್ಯಾರ್ಥಿನಿಲಯದಲ್ಲಿ ಅವಕಾಶ ನೀಡಲಾಗುವುದು ಎಂದರು.
ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಿ ಜೀವನದಲ್ಲಿ ಯಶಸ್ವಿಯಾಗಬೇಕು. ಪ್ರಸ್ತುತ್ತ ದಿನಗಳಲ್ಲಿ ಯುವ ಸಮೂಹ ಅತಿ ಹೆಚ್ಚು ಮೊಬೈಲ್ ಬಳಸುತ್ತಿದ್ದು ಇದರಿಂದ ಕೇಳಿಸಿಕೊಳ್ಳುವ ಶಕ್ತಿ ಮತ್ತು ಕೌಶಲ್ಯಗಳು ಕಡಿಮೆಯಾಗುತ್ತದೆ. ಮೊಬೈಲ್ ಬಳಕೆಯು ಆರೋಗ್ಯಕರವಾಗಿರಬೇಕು ಎಂದು ಕಿವಿಮಾತು ಹೇಳಿದರು.ವಸತಿಯುಕ್ತ ಕಾಲೇಜಿನ ಪ್ರಾಂಶುಪಾಲ ಡಾ. ಪಿ. ದೇವರಾಜು ಮಾತನಾಡಿ, 2023-24ನೇ ಸಾಲಿನಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನೆರವಿನೊಂದಿಗೆ ಅಚ್ಚುಕಟ್ಟಾದ ವಸತಿಯುಕ್ತ ಪದವಿ ದರ್ಜೆ ಕಾಲೇಜು ಸ್ಥಾಪನೆಯಾಗಿದ್ದು ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಲ್ಲಿ ಮುಂದುವರಿಸುವಂತಹ ಉದ್ದೇಶದಿಂದ ಮಾದರಿ ವಸತಿ ಕಾಲೇಜನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಪ್ರಬುದ್ಧರಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುವಂತಹ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.
ಹನೂರಿನ ಜಿ.ವಿ. ಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಚಂದ್ರಮ್ಮ, ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತೆ ಡಾ.ರತ್ನಮ್ಮ, ಸಾಂಸ್ಕೃತಿಕ ಚಿಂತಕ, ಗಾಯಕ ಸಿ.ಎಂ.ನರಸಿಂಹಮೂರ್ತಿ, ಭೋಗಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾನಸ ಹಾಜರಿದ್ದರು.;Resize=(128,128))
;Resize=(128,128))