ಮರದಿಂದ ಉದುರಿದ ಹೂವು, ಹೀಚು, ಬಾಕ್ಸ್ ನಲ್ಲೇ ಉಳಿದುಹೋದ ಮಾವಿನ ಹಣ್ಣು

ಅನಂತ ನಾಡಿಗ್

ಕನ್ನಡಪ್ರಭ ವಾರ್ತೆ ತರೀಕೆರೆ

ರಾಜ್ಯ ಮತ್ತು ಹೊರ ರಾಜ್ಯದ ಮಾರುಕಟ್ಟೆಯಲ್ಲಿ ತರೀಕೆರೆ ತಾಲೂಕಿನಲ್ಲಿ ಬೆಳೆಯುವ ಬಗೆ ಬಗೆಯ ಮಾವಿನ ಹಣ್ಣುಗಳಿಗೆ ಪ್ರಮುಖ ಸ್ಥಾನವಿದೆ. ಅತ್ಯಂತ ನೈಸರ್ಗಿಕವಾಗಿ ಬೆಳೆದ ಆರೋಗ್ಯಕರವಾದ ಈ ಹಣ್ಣಿನಲ್ಲಿ ಹೆಚ್ಚು ತಿರುಳು, ತೆಳುವಾದ ಸಿಪ್ಪೆ, ಚಿಕ್ಕ ವಾಟೆ ಅಕರ್ಷಣೀಯ ಬಣ್ಣ ಮತ್ತು ಗಾತ್ರ ಈ ರೀತಿಯ ಹಲವು ಕಾರಣಗಳಿಂದ ತರೀಕೆರೆ ಮಾವಿನ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಹಿಂದಿನಿಂದಲೂ ಅಪಾರ ಬೇಡಿಕೆ ಇದೆ.

ಮೈಸೂರು- ಬೆಂಗಳೂರು-ಗದಗ-ಸಾಂಗ್ಲಿ-ಬಾಂಬೆ ಇತ್ಯಾದಿ ಮಾರುಕಟ್ಟೆಯಲ್ಲಿ ತರೀಕೆರೆ ಮಾವಿನ ಹಣ್ಣುಗಳು ಬಹುಬೇಗ ಹಾಗೂ ಹೆಚ್ಚು ಮಾರಾಟವಾಗುತ್ತವೆ.


ಈ ಹಿನ್ನಲೆಯಲ್ಲಿ ತಾಲೂಕಿನಾದ್ಯಂತ ನೂರಾರು ಎಕರೆ ಭೂಮಿಯಲ್ಲಿ ಅಲ್ಫಾನ್ಸೋ, ಬಾದಾಮಿ, ರಸಪೂರಿ, ರತ್ನ ಗಿರಿ, ಅಡಪುಟ್ಟು ಮಾವು, ತೋತಾಪುರಿ ಅಮಿನಿ ಮಾವು, ಗದ್ದೆ ಮಾವು, ಗೊಜ್ಜು ಮಾವು , ಸೀಕರಣೆ ಮಾವು ಇತ್ಯಾದಿ ನಾನಾ ಬಗೆಯ ಮಾವನ್ನು ಬೆಳೆಯುತ್ತಾರೆ. ಅಂತೆಯೇ ಅಡಕೆ, ಬಾಳೆ ಹಾಗೂ ತೆಂಗಿನ ತೋಟಗಳಂತೆ ಮಾವಿನ ತೋಪು ಕೂಡ ತೋಟಗಾರಿಕೆ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಗಳಿಸಿಕೊಂಡಿದೆ.

ಮಾವಿನ ಉತ್ತಮ ಇಳುವರಿಗೆ ಹವಾಮಾನವೇ ಬಹು ಮುಖ್ಯ. ಹಾಗಾಗಿ ಪೂರಕ ಹವಾಮಾನ ಸಹಕರಿಸಿದರೆ ಎಲೆ ಟೊಂಗೆಗಳೇ ಕಾಣದಂತೆ ಮಾವು ಹೂವು, ಹೀಚು, ಕಾಯಿ ಮರಗಳಲ್ಲಿ ತುಂಬಿಕೊಂಡಿರುತ್ತದೆ. ಕಟಾವು ಮಾಡಿದಷ್ಟು ಮರ ದಲ್ಲಿ ಮಾವಿನ ಕಾಯಿಗಳು ಅಕ್ಷಯವಾಗುತ್ತದೆ.

ಆದರೆ ಕಳೆದ 3-4 ವರ್ಷಗಳಿಂದ ತಾಲೂಕಿನಲ್ಲಿ ಬದಲಾದ ಹವಾಮಾನ, ರೋಗ ಮತ್ತು ಕೀಟಗಳ ಭಾದೆಯಿಂದ ಮಾವು ಬೆಳೆಗಾರರನ್ನು ಇನ್ನಿಲ್ಲದಂತೆ ಕಂಗೆಡಿಸಿ ಅತಂಕಕಕ್ಕೆ ದೂಡಿದೆ. ದಟ್ಟ ಮೋಡ ಕವಿದ ವಾತಾವರಣ, ಅಕಾಲಿಕ ಮಳೆ, ಭಾರಿ ಪ್ರಮಾಣದ ಉಷ್ಣಾಂಶ, ಬಿಸಿಲು, ಅಕಾಲಿಕವಾಗಿ ಆಲಿಕಲ್ಲು ಮಳೆ, ಮಂಜು ಸುರಿಯುವುದರಿಂದ ಮಾವಿನ ಮರಗಳಲ್ಲಿ ಚಿಗುರು, ಮಾವಿನ ಹೂವು, ಮಾವಿನ ಹೀಚು ಬದಲಾದ ಹವಾಮಾನಕ್ಕೆ ಹೊಂದಿಕೊಳ್ಳಲಾಗದೆ ಮಾವಿನ ಮರಗಳು ಮತ್ತು ಮಾವಿನ ಕಾಯಿಗಳಿಗೆ ವಿವಿಧ ರೋಗ ತಗುಲಿ ಬಳಲುತ್ತಿವೆ.

ಔಷಧ ಸಿಂಪಡಣೆಯಿಂದ ತಾತ್ಕಾಲಿಕ ಪರಿಹಾರ ಸಿಕ್ಕರೂ ಪ್ರಕೃತಿದತ್ತವಾಗಿ ಬೆಳೆದ ಮಾವಿಳಿಗೂ ಔಷಧಬಳಸಿ ಬೆಳೆದ ಮಾವಿಗೂ ಅಜಗಜಾಂತರ ವ್ಯತ್ಯಾಸ. ಕಳೆದ 2-3 ವರ್ಷಗಳಿಂದ ತರೀಕೆರೆ ತಾಲೂಕಿನ ಮಾವು ಬೆಳೆಗಾರರು ಈ ರೀತಿ ಸಂಕಷ್ಟ ಎದುರಿಸುತ್ತಿದ್ದಾರೆ. ಬದಲಾದ ಹವಾಮಾನದಿಂದ ಬೆಳೆಗಾರರು ಮಾವಿನ ಬೆಳೆ ಬಗ್ಗೆ ನಂಬಿಕೆ ಕಳೆದು ಕೊಳ್ಳುತ್ತಿದ್ದಾರೆ. ಮಾವು ಬೆಳೆದವರಿಗೂ ನಷ್ಟ, ಚೇಣಿದಾರರಿಗೂ ನಷ್ಟ, ಮಾವು ವರ್ತಕರಿಗೂ ನಷ್ಟ,

ನವೆಂಬರ್ ನಲ್ಲಿ ಹೂವು, ಡಿಸೆಂಬರ್ ನಲ್ಲಿ ಹೀಚು ಬರುವ ಮಾವಿಗೆ ಚಳಿಗಾಲದಲ್ಲಿ ಭೂಮಿ ತೇವಾಂಶ ಅಗತ್ಯಈ ತೇವಾಂಶದಿಂದ ಹೀಚಿಗೆ ಶಕ್ತಿ ದೊರೆತು ಬೆಳವಣಿಗೆಗೆ ಅನುಕೂಲವಾಗಿ ಮಾವಿನ ಗಾತ್ರ ಪ್ರಮಾಣ ಹೆಚ್ಚಾಗಲು ಅನುಕೂಲವಾಗುತ್ತದೆ. ಆದರೆ ಈ ಬಾರಿ 35-37 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲಿನ ತಾಪ ಹೆಚ್ಚಾಗಿ ಮರದಿಂದ ಹೀಚು ಉದುರಿವೆ. ಅಳಿದುಳಿದ ಸ್ವಲ್ಪ ಹೀಚೂ ಉತ್ತಮ ಫಸಲಾಗಲಿಲ್ಲ.

-ಬಾಕ್ಸ್--

ಬಾಕ್ಸ್ ನಲ್ಲೆ ಉಳಿದ ಹಣ್ಣು:

ಮಾವಿನ ಹೀಚಿಗೆ ಪೂರಕ ಶಕ್ತಿ ಸಿಗದೆ ಮರಗಳಿಂದ ಮಾವಿನ ಕಾಯಿಗಳು ಉದುರಿದ್ದರಿಂದ ಮರದಲ್ಲಿದ್ದ ಕಾಯಿಗಳಿಗಿಂತ ನೆಲಕ್ಕೆ ಬಿದ್ದು ಕೊಳೆತ ಕಾಯಿಗಳ ಸಂಖ್ಯೆಯೇ ಅಧಿಕವಾಗಿತ್ತು. ಜೊತೆಗೆ ಈ ಬಾರಿ ಯುದ್ದದ ಪರಿಣಾಮ ಯಾವ ಹಣ್ಣುಗಳು ಹೊರದೇಶಕ್ಕೆ ರವಾನೆಯಾಗದೆ ಉಳಿದವು ಇದರಿಂದ ಮಾವು ಹೊರತಾಗಲಿಲ್ಲ. ಮಾವಿನ ಹಣ್ಣು ಜ್ಯೂಸ್ ತಯಾರಿಕೆಗೆ ಮಾರುಕಟ್ಟೆಯಲ್ಲಿ ಖರೀದಿ ಆಗದೆ, ಮಾವಿನ ಹಣ್ಣಿಗೂ ಧಾರಣೆಯೇ ಇಲ್ಲದಂತಾಯಿತು ಎಂದು ದೋರನಾಳು ಗ್ರಾಮದ ಮಾವು ಬೆಳೆಗಾರ ಅಸ್ಲಾಂಖಾನ್ ತಿಳಿಸಿದ್ದಾರೆ.

ಹೆಚ್ಚಾದ ಉಷ್ಣಾಂಶ, ಸೈಕ್ಲೋನ್ ಎಫೆಕ್ಟ್, ಆಲಿಕಲ್ಲು ಮಳೆಯಂತ ಹೊಡೆತಗಳ ಮೇಲೆ ಹೊಡೆತ ತಿಂದ ಮಾವು ಒಳ್ಳೆಯ ಬಣ್ಣ , ರುಚಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದ ಬದಲಿಗೆ ಅಸಲು ಖರ್ಚು ಕೂಡ ಗಿಟ್ಟದೆ ಹೆಚ್ಚಿನ ಸಂಖ್ಯೆ ಮಾವಿನ ಹಣ್ಣುಗಳು ಬಾಕ್ಸ್ ನಲ್ಲೇ ಉಳಿದು ಹೋಗಿ ಬೆಳೆಗಾರರಿಗೆ ಭಾರಿ ನಷ್ಟಉಂಟಾಗಿದೆ. ಸರ್ಕಾರ ಮಾವಿನ ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಬೆಳೆಗಾರರು ಮಾವು ಬೆಳೆಯುವುದನ್ನು ನಿಲ್ಲಿಸಬಾರದು, ತರೀಕೆರೆ ತಾಲೂಕಿನ ಮಾವಿನ ಹಣ್ಣಿಗೆ ಬೇಡಿಕೆ ಖಂಡಿತ ಇದ್ದೇ ಇರುತ್ತದೆ. ನಿರಾಶರಾಗದೆ ಬೆಳೆಗಾರರು ಹೆಚ್ಚು ಹೆಚ್ಚು ಮಾವು ಬೆಳೆ ಉಳಿಸಿ ರಕ್ಷಿಸಬೇಕೆಂದು ಮನವಿ ಮಾಡಿದ್ದಾರೆ.

-

22ಕೆಟಿಆರ್.ಕೆ.1ಃ

ತರೀಕೆರೆ ತಾಲೂಕಿನಲ್ಲಿ ಬದಲಾದ ಹವಾಮಾನದಿಂದ ಮರಗಳಿಂದ ಉದುರಿಹೋದ ಮಾವು ಬೆಳೆ

22ಕೆಟಿಆರ್.ಕೆ.02ಃ

ಮರಗಳಿಂದ ಉದುರಿಹೋದ ಮಾವು ಬೆಳೆ

22ಕೆಟಿಆರ್.ಕೆ.03ಃ

ದೋರನಾಳು ಅಸ್ಲಾಂಖಾನ್ ಮಾವು ಬೆಳೆಗಾರರು.