ಮಲೆಯೂರಿನಲ್ಲಿ ವಿಜೃಂಭಣೆಯ ಸೋಮೇಶ್ವರ ‌ರಥೋತ್ಸವ

| Published : Feb 12 2025, 12:31 AM IST

ಸಾರಾಂಶ

ಚಾಮರಾಜನಗರ ಹರವೆಹೋಬಳಿ ಮಲೆಯೂರು ಗ್ರಾಮದಲ್ಲಿ ಮಂಗಳವಾರ ಸೋಮೇಶ್ವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಚಾಮರಾಜನಗರ: ಹರವೆಹೋಬಳಿ ಮಲೆಯೂರು ಗ್ರಾಮದಲ್ಲಿ ಮಂಗಳವಾರ ಸೋಮೇಶ್ವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವಕ್ಕೂ ಮುನ್ನ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಉತ್ಸವ ಮೂರ್ತಿಯನ್ನು ರಥದ ಸುತ್ತ ಪ್ರದಕ್ಷಿಣೆ ಹಾಕಿಸಿ, ರಥದೊಳಗೆ ಕೂರಿಸಿ, ವಿವಿಧ ಹೂಗಳನ್ನು ಸಿಂಗರಿಸುವ ಮೂಲಕ ಮಹಾಮಂಗಳಾರತಿ ನೆರವೇರಿಸಿ, ಸಂಜೆ 4.30ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥ ಸ್ವಸ್ಥಾನ ಬಿಟ್ಟು, ಆದೀಶ್ವರ ಚೈತ್ಯಾಲಯ ಮಂದಿರದತ್ತ ಬಂದವೇಳೆ ರಥದ ಎಡಚಕ್ರ ಆಯತಪ್ಪಿ ಚರಂಡಿಗೆ ಉರುಳಿತು. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಜನರು ರಥದತ್ತ ಧಾವಿಸಿ, ದಪ್ಪ ಹಗ್ಗಗಳನ್ನು ರಥದ ಮೇಲ್ಭಾಗಕ್ಕೆ ಕಟ್ಟಿ ಒಂದು ಕಡೆ ಎಳೆದರು. ಕೂಡಲೇ ರಥದ ಚಕ್ರ ಚರಂಡಿಯಿಂದ ಹೊರಬಂದಿತು.

ಉದ್ಘೋಷಗಳೊಂದಿಗೆ ರಥ ಎಳೆಯುವ ಕಾರ್ಯ ಆರಂಭವಾಯಿತು, ಗ್ರಾಮದ ಪ್ರತಿ ಮನೆಯವರು ರಥಕ್ಕೆ ಪೂಜೆ ಸಲ್ಲಿಸಿದರು. ರಥೋತ್ಸವದಲ್ಲಿ ನಂದಿಕಂಬ, ಸತ್ತಿಗೆ ಸೂರಪಾಣಿ, ಕಂಸಾಳೆ ಕಲಾವಿದರು ಭಾಗವಹಿಸಿದ್ದರು. ಗ್ರಾಮದೇವತೆ ಮಾರಮ್ಮ ತಾಯಿಗೆ ಚಿನ್ನದ ಆಭರಣ ತೊಡಿಸಲಾಗಿತ್ತು. ಮದುವೆಯಾದ ನವದಂಪತಿಗಳು ರಥಕ್ಕೆ ಹಣ್ಣು ಜವನ ಎಸೆದು, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಬಿಸಿಲಿನ ಝಳದ ಹಿನ್ನೆಲೆ ಎಳೆನೀರು, ಕಲ್ಲಂಗಡಿಹಣ್ಣು, ತಂಪುಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಜಿಲ್ಲೆಯ ವಿವಿಧ ತಾಲೂಕಿನ ಭಕ್ತಾದಿಗಳು ಮಾರಮ್ಮನ ಜಾತ್ರಾ ಅಂಗವಾಗಿ ನಡೆದ ಸೋಮೇಶ್ವರ ರಥೋತ್ಸವದಲ್ಲಿ ಭಾಗಿಯಾಗಿದ್ದರು.