ಹಾವೇರಿ ನಗರದ ಹುಕ್ಕೇರಿಮಠದ ಜಾತ್ರಾಮಹೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ಶ್ರೀಮಠದ ಶಿವಲಿಂಗ ದಾಸೋಹ ಮಂದಿರದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ನೋಡುಗರ ಕಣ್ಮನ ಸೆಳೆಯುತ್ತಿದೆ.

ಹಾವೇರಿ: ನಗರದ ಹುಕ್ಕೇರಿಮಠದ ಜಾತ್ರಾಮಹೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ಶ್ರೀಮಠದ ಶಿವಲಿಂಗ ದಾಸೋಹ ಮಂದಿರದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ನೋಡುಗರ ಕಣ್ಮನ ಸೆಳೆಯುತ್ತಿದೆ. ಮೂರು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಜಾತ್ರೋತ್ಸವಕ್ಕೆ ಆಗಮಿಸಿರುವ ಸಾವಿರಾರು ಸಂಖ್ಯೆಯ ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಶ್ರೀಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತಂಡೋಪತಂಡವಾಗಿ ಆಗಮಿಸಿ ತರಾವರಿ ಹೂಗಳು, ಹಣ್ಣು, ತರಕಾರಿಗಳಿಂದ ತಯಾರಿಸಿರುವ ನಾನಾ ಬಗೆಯ ಕಲಾಕೃತಿಗಳು ಹಾಗೂ ಮಾದರಿಗಳ ಪ್ರದರ್ಶನಗಳನ್ನು ವೀಕ್ಷಿಸುತ್ತಿದ್ದಾರೆ. ಜೊತೆಗೆ ತಮಗಿಷ್ಟದ ಪ್ರದರ್ಶನ ಮಾದರಿ ಬಳಿ ನಿಂತು ಪೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಹುಕ್ಕೇರಿಮಠ ದಾಸೋಹಮಂದಿರ ಆವರಣದ ಬಲಗಡೆ ಪ್ರವೇಶದ್ವಾರದಲ್ಲಿ ಲಿಂ.ಶಿವಬಸವ ಸ್ವಾಮಿಗಳು, ಲಿಂ.ಶಿವಲಿಂಗ ಸ್ವಾಮಿಗಳು, ಸದಾಶಿವ ಮಹಾಸ್ವಾಮಿಗಳು ಒಂದೆಡೆ ಕುಳಿತು ಸಾರ್ವಜನಿಕ ವೀಕ್ಷಕರನ್ನು ಆಹ್ವಾನಿಸುತ್ತಿದ್ದಾರೆ. ಎಡ ಭಾಗದಲ್ಲಿ ಚಕ್ಕಡಿ ಹೊಡೆಯುತ್ತಿರುವ ರೈತನೂ ಕೂಡ ಆದರದ ಸ್ವಾಗತ ಕೋರುತ್ತಿದ್ದಾನೆ. ಹಾಗೆಯೇ ಒಳಗಡೆ ಪ್ರವೇಶ ಮಾಡಿದರೆ ಬೃಹದಾಕಾರದ ನಂದಿ ವಿಗ್ರಹ ಹಾಗೂ ಶಿವಬಸವ ಸ್ವಾಮಿಗಳ ಕತೃ ಗದ್ದುಗೆ ಕಣ್ಮನ ಸೆಳೆಯುತ್ತಿದೆ. ತರಕಾರಿ ಹಾಗೂ ಹಣ್ಣಿನಿಂದ ತಯಾರಿಸಲಾದ ವಿಘ್ನನಿವಾರಕ ಗಣೇಶ ಮೂರ್ತಿಯನ್ನು ನೋಡಬಹುದು. ಪಕ್ಕದಲ್ಲಿಯೇ ಬುದ್ಧ, ಬಸವ, ಅಂಬೇಡ್ಕರ್ ಮೂರ್ತಿಗಳನ್ನು ನೋಡಿ ಕಣ್ತುಂಬಿಕೊಳ್ಳಬಹುದು.ವಿಶ್ವಕ್ಕೆ ಉತ್ತಮ ಸಂದೇಶವನ್ನು ಸಾರುವ ಕೆಟ್ಟದನ್ನು ನೋಡಬೇಡಿ, ಕೇಳಬೇಡಿ, ಮಾತನಾಡಬೇಡಿ ಎಂಬ ಸಂದೇಶ, ಮೊಬೈಲ್ ಉಪಯೋಗ ದುಷ್ಪರಿಣಾಮಗಳನ್ನು ಸಾರುವ ಕೋತಿಗಳ ಚಿತ್ರಣ ಲಭ್ಯವಿದೆ. ಮಕ್ಕಳಿಗೆ ಮನರಂಜನೆ ನೀಡಲು ಛೋಟಾಬೀಮ್ ಥೀಮ್, ಸೆಲ್ಫಿ ಪೋಟೊ ಪ್ರೇಮ್ ವ್ಯವಸ್ಥೆ ಮಾಡಿದೆ. ವಿವಿಧ ಜಾತಿಯ 30 ರಿಂದ 40 ಸಂಖ್ಯೆ ಬೋನ್ಸಾಯಿ (ಕುಬ್ಬ) ಗಿಡಗಳ ಪ್ರದರ್ಶನವಿದೆ. ಫಲಪುಷ್ಪ ಪ್ರದರ್ಶನದಲ್ಲಿ ಕಲ್ಲಂಗಡಿ, ಕುಂಬಳಕಾಯಿ ಹೀಗೆ ವಿವಿಧ ತರಕಾರಿ ಹಣ್ಣುಗಳಲ್ಲಿ ಕ್ರಿಕೆಟಿಗ ಸಚಿನ ತೆಂಡುಲ್ಕರ, ವಿರಾಟ್ ಕೊಹ್ಲಿ, ಚಿತ್ರನಟರಾದ ರಾಜಕುಮಾರ, ಪುನಿತ್‌ರಾಜಕುಮಾರ, ಸುದೀಪ, ಸಾಲುಮರದ ತಿಮ್ಮಕ್ಕ, ಸ್ವಾಮಿ ವಿವೇಕಾನಂದ, ಬುದ್ಧ, ಏಸು ಕ್ರಿಸ್ತ, ಡಾ.ಬಿ.ಆರ್. ಅಂಬೇಡ್ಕರ್, ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹೀಗೆ ಗಣ್ಯ ಸಾಧಕರ ಚಿತ್ರಗಳನ್ನು ಕೆತ್ತನೆ ಮಾಡಲಾಗಿದೆ. ಅಲ್ಲದೇ ವಿಧ ವಿಧದ ಎಲೆಗಳಲ್ಲಿ ಹನುಮಂತ ದೇವರು, ವೀಣೆ, ಮನೆ ತೋಟ, ಹುಲಿ, ಚಿರತೆ, ತಬಲಾ, ಗಂಟೆ, ಬಾತುಕೋಳಿ ಹೀಗೆ ಪ್ರಾಣಿ ಪಕ್ಷಿಗಳ ಕೆತ್ತನೆಯನ್ನು ಮಾಡಲಾಗಿದೆ.ತೋಟಗಾರಿಕೆ ಬೆಳೆ ಪ್ರದರ್ಶನ: ಫಲಪುಷ್ಪ ಪ್ರದರ್ಶನದಲ್ಲಿ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ರೈತರೇ ಬೆಳೆದಿರುವ ತೋಟಗಾರಿಕಾ ಬೆಳೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಪ್ರಮುಖವಾಗಿ ಬಾಳೆಹಣ್ಣು, ಪೇರಲ, ಪಪ್ಪಾಯ, ಮೆಣಸಿನಕಾಯಿ, ಕುಂಬಳಕಾಯಿ, ಡೊಣ್ಣೆಗಾಯಿ, ಬದನೆಕಾಯಿ, ಸೌತೆಕಾಯಿ, ಹಾಗಲಕಾಯಿ, ಹಿರೇಕಾಯಿ, ಸೇವಂತಿಗೆ, ಮಲ್ಲಿಗೆ, ಗುಲಾಬಿ ಹೀಗೆ ತರಾವರಿ ತರಕಾರಿ, ಹೂವುಗಳು, ಹಣ್ಣುಗಳು ಜನರನ್ನು ಆಕರ್ಷಿಸುತ್ತಿವೆ. ರಂಗೋಲಿಯಲ್ಲಿ ಅರಳಿದ ಮಹನೀಯರು: ಇನ್ನೂ ಇತ್ತಿಚೇಗೆ ನಿಧನ ಹೊಂದಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ, ತ್ರಿಪದಿ ಕವಿ ಸರ್ವಜ್ಞ, ನಿಜಶರಣ ಅಂಬಿಗರ ಚೌಡಯ್ಯ, ಶಿಶುನಾಳ ಶರೀಫರು, ಹಾನಗಲ್ಲ ಕುಮಾರೇಶ್ವರ ಶ್ರೀಗಳು, ಭಕ್ತಶ್ರೇಷ್ಠ ಕನಕದಾಸರು ಸೇರಿದಂತೆ ಹಲವರ ಭಾವಚಿತ್ರಗಳನ್ನು ರಂಗೋಲಿ ಹಾಗೂ ಪುಷ್ಪ ಪ್ರದರ್ಶನದಲ್ಲಿ ಮೂಡಿರುವುದು ನೋಡುಗರ ಆಕರ್ಷಣೆಗೆ ಒಳಗಾಗಿವೆ. ಅದೇರೀತಿ ಎಲೆಗಳ ಮೇಲೆ ಕುಳಿತ ಚಿಟ್ಟೆ, ಕಾರಂಜಿ, ಝರಿ, ಈಶ್ವರ ಶಿವಲಿಂಗುಗಳು, ಹಾಗಲಕಾಯಿ ಮೊಸಳೆ, ನವಿಲುಗಳು, ಗರುಡ ಪಕ್ಷಿಗಳು ನೋಡುಗರ ಆಕರ್ಷಣೆಗೆ ಒಳಗಾಗಿವೆ.ಹುಕ್ಕೇರಿಮಠ ಜಾತ್ರಾ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆಯಿಂದ ಸುಮಾರು 12 ಲಕ್ಷ ರು. ವೆಚ್ಚದಲ್ಲಿ ಮೂರು ದಿನಗಳ ಕಾಲ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ಬೆಳಗ್ಗೆ 10ರಿಂದ ರಾತ್ರಿ 10ರ ವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಜನತೆ, ರೈತರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಣೆ ಮಾಡಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಸಿದ್ರಾಮಯ್ಯ ಭರಗೀಮಠ ಹೇಳಿದರು.