ಕರಾವಳಿ ಉತ್ಸವದ ಅಂಗವಾಗಿ ಬುಧವಾರ ನಡೆದ ರಂಗೋಲಿ ಹಾಗೂ ಕರಾವಳಿ ಶೈಲಿಯ ಅಡುಗೆ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಮಹಿಳೆಯರು ಪಾಲ್ಗೊಂಡಿದ್ದು, ರಂಗೋಲಿಗಳು ನೋಡುಗರ ಕಣ್ಮನ ಸೆಳೆದರೆ ಕರಾವಳಿ ಶೈಲಿಯ ಅಡುಗೆ ಬಾಯಿ ಚಪ್ಪರಿಸುವಂತೆ ಮಾಡಿದವು.

ಕನ್ನಡಪ್ರಭ ವಾರ್ತೆ ಕಾರವಾರ

ಕರಾವಳಿ ಉತ್ಸವದ ಅಂಗವಾಗಿ ಬುಧವಾರ ನಡೆದ ರಂಗೋಲಿ ಹಾಗೂ ಕರಾವಳಿ ಶೈಲಿಯ ಅಡುಗೆ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಮಹಿಳೆಯರು ಪಾಲ್ಗೊಂಡಿದ್ದು, ರಂಗೋಲಿಗಳು ನೋಡುಗರ ಕಣ್ಮನ ಸೆಳೆದರೆ ಕರಾವಳಿ ಶೈಲಿಯ ಅಡುಗೆ ಬಾಯಿ ಚಪ್ಪರಿಸುವಂತೆ ಮಾಡಿದವು.

ಜಿಲ್ಲಾಧಿಕಾರಿಗಳ ನೂತನ ಕಚೇರಿಯಲ್ಲಿ ಆಯೋಜಿಸಲಾದ ರಂಗೋಲಿ ಸ್ಪರ್ಧೆಗೆ ಅಭ್ಯಥಿಗಳು ಆಗಮಿಸಿ ತಮ್ಮ ನಿಯೋಜಿತ ಸ್ಥಳದಲ್ಲಿ ಬಗೆ ಬಗೆಯ ರಂಗೋಲಿ ಹಾಕಿದ್ದರು. ಸುಮಾರಿ 60ಕ್ಕೂ ಹೆಚ್ಚು ಮಹಿಳೆಯರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಹೂವಿನ ದಳಗಳಲ್ಲಿ ಹಾಕಿದ ಬಣ್ಣ ಬಣ್ಣದ ರಂಗೋಲಿಗಳು ಹಾಗೂ ರಂಗೋಲಿ ಹಿಟ್ಟಿನಿಂದಲೇ ಕೆಲವು ರಂಗೋಲಿ ಹಾಕಿದ್ದರು. ಚುಕ್ಕಿ ರಂಗೋಲಿ, ದೇವರ ಚಿತ್ರಗಳಿರುವ ರಂಗೋಲಿ ಹಾಗೂ ಮಂಡಲ ಕಲೆಗಳಂತಹ ರಂಗೋಲಿಯು ಸ್ಪರ್ಧೆ ವೀಕ್ಷಿಸಲು ಬಂದ ಸಾರ್ವಜನಿಕರ ಗಮನ ಸೆಳೆದವು.

14-18 ವರ್ಷದ ಮಕ್ಕಳಿಗೆ ಆಯೋಜಿಸಿದ್ದ ಪ್ರೀ ಹ್ಯಾಂಡ್ ರಂಗೋಲಿ ಸ್ಪರ್ಧೆಯಲ್ಲಿ ಸದಾಶಿವಗಡದ ಕಣಸಗಿರಿಯ ಧನಶ್ರೀ ರತ್ನಾಕರ ಮಾಳ್ವೇಕರ ಪ್ರಥಮ, ಹಬ್ಬುವಾಡದ ಆರ್ಯಶ್ರೀ ಎ ದುರ್ಗೇಕರ ದ್ವಿತೀಯ, ಹಬ್ಬುವಾಡದ ಸ್ಮೃತಿ ಸಂಜೀವ ವರ್ಣೇಕರ ತೃತೀಯ ಬಹಮಾನ ಪಡೆದುಕೊಂಡರು.

18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರೀ ಹ್ಯಾಂಡ್ ರಂಗೋಲಿ ಸ್ಪರ್ಧೆಯಲ್ಲಿ ಕದ್ರಾದ ಸುಮಾ ಸುರೇಂದ್ರ ಪೆಡ್ನೇಕರ ಪ್ರಥಮ, ಬಾಡದ ಸಂಕ್ರಿವಾಡಾದ ಭಾರತಿ ಅರುಣ ನಾಯ್ಕ ದ್ವಿತೀಯ, ಗುರುಮಠದ ಕೊಮಲ್ ಮಂಜುನಾಥ ಪಾಳಂಕರ ತೃತೀಯ. 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಹೂವಿನ ರಂಗೋಲಿ ಸ್ಪರ್ಧೆಯಲ್ಲಿ ಕೋಡಿಭಾಗದ ರಾಸಿಕಾ ಕೆ. ಗೋಕರ್ಣ ಪ್ರಥಮ, ಬಿಣಗಾದ ಅರ್ಪಿತಾ ಅಶೋಕ ಗೌಡ ದ್ವಿತೀಯ, ಅಂಕೋಲಾದ ಪ್ರೇಮಾ ಆರ್.ಗಾಂವಕರ ತೃತೀಯ ಬಹಮಾನ ಪಡೆದುಕೊಂಡರು.

ಗಮನ ಸೆಳೆದ ಕರಾವಳಿ ಅಡುಗೆಗಳು:ನಗರದ ಮಾಲಾದೇವಿ ಮೈದಾನದಲ್ಲಿ ಕರಾವಳಿ ಶೈಲಿಯ ತರಹೇವಾರಿ ಅಡುಗೆಗಳು ಗಮನ ಸೆಳೆದವು. ಪುರುಷರು-ಮಹಿಳೆಯರು ಎನ್ನದೇ 50ಕ್ಕೂ ಹೆಚ್ಚು ಅಭ್ಯಥಿಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಶಾಖಾಹಾರಿ ಹಾಗೂ ಮಾಂಸಹಾರಿ ಖಾದ್ಯಗಳು ನೋಡುಳ ಬಾಯಲ್ಲಿ ನೀರೂರಿಸಿದವು. ಕರಾವಳಿ ಶೈಲಿಯ ಮೀನಿನ ಸಾರು, ಫ್ರೈ, ಮಸಾಲಾ ಬಂಗಡೆ ಹಾಗೂ ಸಸ್ಯಹಾರಿ ಅಡುಗೆಗಳನ್ನು ಸವಿಯಲು ಪ್ರೇಕ್ಷಕರು ಮುಗಿಬಿದ್ದರು. ತಟ್ಟೆಯಲ್ಲಿ ವಿಶೇಷವಾಗಿ ಪ್ರಸ್ತುತ ಪಡಿಸಿದ ಎಲ್ಲಾ ಅಡುಗೆಗಳ ರುಚಿ ನೋಡಿದ ನಿರ್ಣಾಯಕರು ತೀರ್ಪು ನೀಡಿದರು.

ಮಾಂಸಹಾರಿ ಅಡುಗೆ ಸ್ಪರ್ಧೆಯಲ್ಲಿ ಅಸ್ನೋಟಿ ಪ್ರಸಾದ ವಿ. ಸಾಳುಂಕೆ ಪ್ರಥಮ, ಕಾರವಾರದ ಹೊಸಾಳಿ ನಜರಿನ ಶೇಖ್ ದ್ವಿತೀಯ, ಶುಭಾಂಗಿ ಮಂಜುನಾಥ ಶಿರೋಡಕರ ತೃತೀಯ ಬಹಮಾನ ಪಡೆದುಕೊಂಡರು. ಶಾಖಾಹಾರಿ ಅಡುಗೆ ಸ್ಪರ್ಧೆಯಲ್ಲಿ ಕ್ರಿಮ್ಸ್ ಕ್ಯಾಂಪಸ್‌ನ ಶ್ವೇತಾ ಕೆ.ಎಸ್. ಪ್ರಥಮ, ಮಾಜಾಳಿಯ ಅಶ್ವಿನಿ ಅಶೋಕ ಕುಲಕರ್ಣಿ ದ್ವಿತೀಯ, ಯಲ್ಲಾಪುರ ಅಂಬೇಡ್ಕರ್ ನಗರದ ರೂಪಾ ಪಾಟನಕರ ತೃತೀಯ ಬಹಮಾನ ಪಡೆದುಕೊಂಡರು.

ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಮಾಲಾದೇವಿ ಕ್ರೀಡಾಂಗಣದಲ್ಲಿ ನಡೆದ ಅಡುಗೆ ಸ್ಪರ್ಧೆ ವೀಕ್ಷಿಸಿ ಕೆಲ ಆಹಾರ ಸವಿದರು.

ಮಹಿಳಾ ಮತ್ತು ಮಕ್ಕಳ ಆಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ ಮತ್ತಿತರರು ಇದ್ದರು.