ನೇತ್ರದಾನಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ

| Published : Sep 14 2025, 01:04 AM IST

ನೇತ್ರದಾನಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ನೇತ್ರದಾನ ಮಹಾದಾನವಾಗಿದ್ದು, ಕನ್ನಡ ಚಿತ್ರರಂಗದ ನಾಯಕ ನಟ ಪುನೀತ್‌ ರಾಜಕುಮಾರ್‌ ಅವರು ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಿ ಬೇರೆಯವರಿಗೆ ಮಾದರಿ ಮತ್ತು ಪ್ರೇರಣೆಯಾಗಿದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರುದಾನಗಳಲ್ಲಿ ನೇತ್ರದಾನ ಪ್ರಮುಖವಾದದ್ದು, ನೇತ್ರದಾನಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲದೆ ಮರಣ ನಂತರ ನೇತ್ರದಾನ ಮಾಡಬಹುದು ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ತಿಳಿಸಿದರು.ನಗರದ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೇತ್ರದಾನದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರ ಮುಖಾಂತರ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ಮತ್ತು ಪ್ರಚಾರ ಸಿಗುವಂತಾಗಲಿ ಎಂದರು.ಎನ್‌.ಜೆ.ಎಸ್‌ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷ ಎಂ.ಎನ್‌. ಜಯಪ್ರಕಾಶ್‌ ಮಾತನಾಡಿ, ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಉತ್ತಮ ಕಣ್ಣಿನ ಚಿಕಿತ್ಸಾ ವಿಭಾಗ ಮತ್ತು ವೈದ್ಯರ ತಂಡವಿದ್ದು, ಅವರು ರೋಗಿಗಳಿಗೆ ತಕ್ಷಣ ಸ್ಪಂದಿಸಿ ಮರಣ ನಂತರ ಕಣ್ಣಿನ ದಾನಿಗಳಿಗೆ ಕೇವಲ 2 ಗಂಟೆಗಳಲ್ಲಿ ಕಣ್ಣಿನ ದಾನದ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ ಎಂದು ಹೇಳಿದರು.ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಬೃಂದಾ ಮಾತನಾಡಿ, ನೇತ್ರದಾನ ಮಹಾದಾನವಾಗಿದ್ದು, ಕನ್ನಡ ಚಿತ್ರರಂಗದ ನಾಯಕ ನಟ ಪುನೀತ್‌ ರಾಜಕುಮಾರ್‌ ಅವರು ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಿ ಬೇರೆಯವರಿಗೆ ಮಾದರಿ ಮತ್ತು ಪ್ರೇರಣೆಯಾಗಿದ್ದಾರೆ ಎಂದರು.ನೇತ್ರದಾನವನ್ನು ಎಚ್‌ಐವಿ ಮತ್ತು ಕ್ಯಾನ್ಸರ್‌ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಬಿಟ್ಟು ಯಾರು ಬೇಕಾದರು ದಾನ ಮಾಡಬಹುದು. ಜೆಎಸ್‌ಎಸ್‌ ಆಸ್ಪತ್ರೆಯು ಸರ್ಕಾರದಿಂದ ಮಾನ್ಯತೆ ಪಡೆದ ನೇತ್ರಭಂಡಾರವನ್ನು ಹೊಂದಿದ್ದು, ಇಲ್ಲಿ ಕೂಡ ಸಾರ್ವಜನಿಕರು ನೇರವಾಗಿ ಬಂದು ನೇತ್ರದಾನಕ್ಕೆ ನೋಂದಾಯಿಸಿಕೊಳ್ಳಬಹುದು. ಮೈಸೂರಿನಲ್ಲಿ 2024 ಮತ್ತು 2025ನೇ ಸಾಲಿನಲ್ಲಿ ಸುಮಾರು 174 ನೇತ್ರಗಳನ್ನು ಪಡೆದು ಅವಶ್ಯ ಇರುವವರಿಗೆ ನೀಡಲಾಗಿದೆ ಎಂದು ತಿಳಿಸಿದರು.ಇದೇ ವೇಳೆ ಜೆಎಸ್ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ. ಮಧು ಮತ್ತು ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಡಿ. ನಾರಾಯಣಪ್ಪ ಅವರು ತಮ್ಮ ನೇತ್ರದಾನಕ್ಕೆ ನೋಂದಾಯಿಸಿಕೊಂಡರು. ಜೊತೆಗೆ ಆಸ್ಪತ್ರೆಯ ಸಿಬ್ಬಂದಿ ಮತ್ತು ಸಾರ್ವಜನಿಕರು ನೇತ್ರದಾನಕ್ಕೆ ನೋಂದಾಯಿಸಿಕೊಂಡರು.ಜೆಎಸ್‌ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್, ಉಪ ಪ್ರಾಂಶುಪಾಲ ಡಾ. ಮಾಂತಪ್ಪ, ಕಣ್ಣಿನ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯ, ಪ್ರಾಧ್ಯಾಪಕ ಡಾ. ಪ್ರಭಾಕರ್‌ ಇದ್ದರು.