ಸಾರಾಂಶ
ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ ಧಾರವಾಡಬಿಪಿಎಲ್ ಕಾರ್ಡ್ ಫಲಾನುಭವಿಗಳಾದರೆ ಪಡಿತರ ಸೇರಿದಂತೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳು ಲಭ್ಯವೆಂದು ಅನರ್ಹರು ಸಹ ಬಿಪಿಎಲ್ ಕಾರ್ಡ್‌ಗಳನ್ನು ಮಾಡಿಕೊಂಡಿದ್ದು ಹೊಸದೇನಲ್ಲ. ಆಗಾಗ ಸರ್ಕಾರ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಮಾಡಿಸಿದವರನ್ನು ಪತ್ತೆ ಹಚ್ಚುವ ಕೆಲಸ ಮಾಡಿದರೂ ಇನ್ನೂ ಅಂತಹ ಸಾಕಷ್ಟು ಬಿಪಿಎಲ್ ಕಾರ್ಡ್‌ದಾರರು ಉಳಿದುಕೊಂಡಿದ್ದಾರೆ. ಈ ಪೈಕಿ ಪಡಿತರ ಕಾರ್ಡ್ ಹೊಂದಿದ್ದರೂ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪದಾರ್ಥ ಪಡೆಯದ ಬಿಪಿಎಲ್ ಕಾರ್ಡ್‌ದಾರರ ವಿರುದ್ಧ ಸರ್ಕಾರ ಚಾಟಿ ಬೀಸಲು ಮುಂದಾಗಿದೆ.
ಸರ್ಕಾರದ ಈ ಕ್ರಮದಿಂದ ಜಿಲ್ಲೆಯಲ್ಲಿ 10709 ಬಿಪಿಎಲ್ ಕಾರ್ಡ್‌ಗಳು ರದ್ದಾಗುವ ಸಾಧ್ಯತೆ ಇದೆ. ಸತತ 6 ತಿಂಗಳ ಕಾಲ ಪಡಿತರ ಪದಾರ್ಥ ಪಡೆಯದವರ ಪಡಿತರ ಚೀಟಿ ರದ್ದತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಈ ಕಾರ್ಯಕ್ಕಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿಂದ ಪಡಿತರ ಪಡೆಯದವರ ಅಂಕಿ ಅಂಶವನ್ನು ಇಲಾಖೆ ಈಗಾಗಲೇ ಸಿದ್ಧಪಡಿಸಿದೆ.ಆಹಾರ ಇಲಾಖೆ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 3.87 ಲಕ್ಷ ಪಡಿತರ ಚೀಟಿದಾರರಿದ್ದಾರೆ. ಈ ಪೈಕಿ ಕೆಲವರು ಸರ್ಕಾರಿ ಸೌಲಭ್ಯ, ಆರೋಗ್ಯ ಸಂಬಂಧಿ ಶಸ್ತ್ರ ಚಿಕಿತ್ಸೆ ಉದ್ದೇಶಕ್ಕಾಗಿ ಬಿಪಿಎಲ್ ಚೀಟಿ ಪಡೆದಿದ್ದಾರೆ. ಇಂತಹವರು ಹಲವು ತಿಂಗಳಿಂದ ಪಡಿತರ ಪಡೆದಿಲ್ಲ. ಹೀಗಾಗಿ, ಸರ್ಕಾರ ಈ ರೀತಿಯ ಚೀಟಿಗಳ ಮಾಹಿತಿ ಕಲೆ ಹಾಕಿ ಬಂದ್ ಮಾಡಲು ಯೋಚಿಸಿದೆ. ಪಡಿತರ ಪಡೆಯದೆ ಇರುವುದನ್ನು ಮುಂದುವರಿಸಿದರೆ ಪಡಿತರ ಚೀಟಿ ರದ್ದಾಗುವುದರ ಜತೆಗೆ ಸರ್ಕಾರಿ ಸೌಲಭ್ಯಗಳೂ ಬಂದಾಗಲಿವೆ ಎನ್ನುವ ಭಯದಿಂದ ಕೆಲವರು ಆಗಾಗ ಪಡಿತರ ಪಡೆಯಲು ರೇಶನ್ ಅಂಗಡಿಗಳಿಗೂ ಹೋಗುತ್ತಿದ್ದಾರೆ. ಇಂತಹ ಕಾರ್ಡ್‌ದಾರರ ಮೇಲೂ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ.
ಜಿಲ್ಲೆಯ ಇಲಾಖೆ ಅಧಿಕಾರಿಗಳು ಕೆಲ ತಿಂಗಳಿಂದ ಪಡಿತರ ಪಡೆಯದ ಬಿಪಿಎಲ್ ಕಾರ್ಡ್‌ದಾರರ ಮಾಹಿತಿ ಕಲೆ ಹಾಕುತ್ತಿದ್ದು, ಸದ್ಯ 10709 ಕಾರ್ಡ್‌ದಾರರನ್ನು ಪತ್ತೆ ಮಾಡಿದ್ದಾರೆ. ಇವರು ಕಳೆದ 6 ತಿಂಗಳಿಂದ ಯಾವ ಕಾರಣಕ್ಕೆ ಪಡಿತರ ಪಡೆದಿಲ್ಲ ಎಂಬುದನ್ನು ತಿಳಿಯುವ ಪ್ರಕ್ರಿಯೆ ಆರಂಭಿಸಿದ್ದಾರೆ. ಆ ಕುಟುಂಬ ಬೇರೆಡೆ ತೆರಳಿದೆಯೇ? ಚೀಟಿದಾರರು ಮೃತರಾಗಿದ್ದಾರೆಯೇ? ಅಥವಾ ಸುಳ್ಳು ಮಾಹಿತಿ ನೀಡಿ ಕಾರ್ಡ್ ಪಡೆದಿದ್ದಾರೆಯೇ.. ಹೀಗೆ ಎಲ್ಲ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಮಗ್ರ ಮಾಹಿತಿ ಪಡೆದ ಬಳಿಕ ಸರ್ಕಾರಕ್ಕೆ ರವಾನಿಸಲಿದ್ದು, ಸರ್ಕಾರದ ನಿರ್ಧಾರದ ಮೇಲೆ ಅಂತಹ ಕಾರ್ಡ್‌ಗಳನ್ನು ರದ್ದುಗೊಳಿಸುವ ಯೋಜನೆ ಹೊಂದಲಾಗಿದೆ.ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ ₹12 ಸಾವಿರಗಿಂತ ಕಡಿಮೆ ಆದಾಯ ಹೊಂದಿರುವವರು, ನಗರ, ಪಟ್ಟಣದಲ್ಲಿ ವಾರ್ಷಿಕ ₹17 ಸಾವಿರಗಿಂತ ಕಡಿಮೆ ಆದಾಯ ಹೊಂದಿರುವವರು ಬಿಪಿಎಲ್ ಕಾರ್ಡ್ ಹೊಂದಲು ಅರ್ಹರು. ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು ಬಿಪಿಎಲ್ ಕಾರ್ಡ್ ಪಡೆಯುವಂತಿಲ್ಲ ಎಂದಿದ್ದರೂ ಸಹ ಸುಳ್ಳು ಮಾಹಿತಿ ನೀಡಿ ಆದಾಯ ಪ್ರಮಾಣ ಪತ್ರ ಒದಗಿಸುವ ಮೂಲಕ ಸಿರಿವಂತರೂ, ಸಾಕಷ್ಟು ಆಸ್ತಿವಂತರೂ ಸಹ ಬಿಪಿಎಲ್ ಕಾರ್ಡ್ ಮಾಡಿಸಿದ್ದು ಸೋಜಿಗದ ಸಂಗತಿ.
ಕಳೆದ ಆರು ತಿಂಗಳಿಂದ ಪಡಿತರ ಪಡೆಯದವರ ಮಾಹಿತಿ ಸಂಗ್ರಹಿಸಲಾಗಿದೆ. ಯಾವ ಕಾರಣಕ್ಕೆ ಪಡಿತರ ಪಡೆದಿಲ್ಲ ಎಂಬುದನ್ನು ಅರಿತು ಸೂಕ್ತ ಎನಿಸಿದರೆ ಮುಂದುವರಿಸಲಾಗುವುದು. ಬಿಪಿಎಲ್ ಹೊಂದಿದವರಲ್ಲಿ ಮರಣ ಹೊಂದಿದವರು, ಊರು ಬಿಟ್ಟವರೂ ಇದ್ದಾರೆ. ಇನ್ನು ಕೆಲವರು ವೈದ್ಯಕೀಯಕ್ಕಾಗಿ ಮಾತ್ರ ಪಡೆದ ಮಾಹಿತಿ ಲಭಿಸಿದೆ. ಹೀಗಾಗಿ ಅವರ ಕಾರ್ಡ್ ಅನ್ನು ಯಾವು ರೀತಿ ಮುಂದುವರಿಸಬೇಕು ಎಂಬುದನ್ನು ತೀರ್ಮಾನಿಸಲಾಗುವುದು. ಉಳಿದ ಅನರ್ಹ ಕಾರ್ಡ್‌ಗಳನ್ನು ಯಾವುದೇ ಮುಲಾಜಿಲ್ಲದೇ ಬಂದ್ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಮಾಹಿತಿ ನೀಡಿದರು.ಬಾಕ್ಸ್..
ಆರು ತಿಂಗಳಿಂದ ಪಡಿತರ ಪಡೆಯದೇ ಇರುವ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆ -ಧಾರವಾಡ - 2855
ಹುಬ್ಬಳ್ಳಿ- 4403ಕಲಘಟಗಿ - 783
ಕುಂದಗೋಳ -1135ನವಲಗುಂದ -807
ಅಳ್ನಾವರ -198ಅಣ್ಣಿಗೇರಿ -528