ಸಾರಾಂಶ
ವಿದ್ಯಾರ್ಥಿಗಳ ಸಾಧನೆ ಗುರುತಿಸಿ, ಗೌರವಿಸುವ ಕಾರ್ಯವನ್ನು ಸಂಸ್ಥೆ ಮಾಡಿದೆ. ಸಾಧನೆ ಮಾಡುವವರು ಬೇಕು. ಗುರುತಿಸುವವರು ಬೇಕು. ಇದು ಅತ್ಯಂತ ಮುಖ್ಯ ಕಾರ್ಯ.
ಧಾರವಾಡ: ಸಹನೆ, ಹೊಂದಾಣಿಕೆ, ಪರಸ್ಪರ ಪ್ರೀತಿಯ ಬದುಕು ಮನುಷ್ಯನನ್ನು ಎತ್ತರದ ಸ್ಥಾನಕ್ಕೆ ಒಯ್ಯುತ್ತದೆ. ಸಾಧನೆ ಮಾಡುವಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಿ ಮುನ್ನಡೆಯುವ ಸಾಮರ್ಥ್ಯವನ್ನು ಪಡೆದುಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಜೆಎಸ್‌ಎಸ್ ಕಾರ್ಯಾಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಇಲ್ಲಿಯ ಜನತಾ ಶಿಕ್ಷಣ ಸಮಿತಿ ಬುಧವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರದಲ್ಲಿ ಸಾನ್ನಿಧ್ಯ ವಹಿಸಿ ರ‍್ಯಾಂಕ್ ವಿಜೇತರಿಗೆ ಶೈಕ್ಷಣಿಕ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು.ವಿದ್ಯಾರ್ಥಿಗಳ ಸಾಧನೆ ಗುರುತಿಸಿ, ಗೌರವಿಸುವ ಕಾರ್ಯವನ್ನು ಸಂಸ್ಥೆ ಮಾಡಿದೆ. ಸಾಧನೆ ಮಾಡುವವರು ಬೇಕು. ಗುರುತಿಸುವವರು ಬೇಕು. ಇದು ಅತ್ಯಂತ ಮುಖ್ಯ ಕಾರ್ಯ ಎಂದರು.
ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಜೆ.ಎಸ್.ಎಸ್ ಸಂಸ್ಥೆ ನಡೆದು ಬಂದ ದಾರಿಯನ್ನು ತಿಳಿಸಿದರು. ರ‍್ಯಾಂಕ್ ವಿಜೇತರ ಹಾಗೂ ಶೈಕ್ಷಣಿಕ ಸಾಧಕರ ಸನ್ಮಾನವನ್ನು ಡಾ. ಸೂರಜ್ ಜೈನ್ ನಡೆಸಿಕೊಟ್ಟರು.ಇದೇ ಸಂದರ್ಭದಲ್ಲಿ “ನಮ್ಮ ಜೆ.ಎಸ್.ಎಸ್, ನಮ್ಮ ಹೆಮ್ಮೆ, ನಮ್ಮ ಖಾವಂದರು”ಎಂಬ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.
ಕರ್ನಾಟಕ ವಿಶ್ವವಿದ್ಯಾಲಯ ನಡೆಸಿದ ಸ್ನಾತಕ ಪರೀಕ್ಷೆಯಲ್ಲಿ ಜೆ.ಎಸ್.ಎಸ್. ಸಂಸ್ಥೆಯ ಬಿ.ಕಾಂ ವಿಭಾಗಕ್ಕೆ 5 ರ‍್ಯಾಂಕುಗಳು ಬಂದಿದ್ದು, ಇದೇ ಸಂದರ್ಭದಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಾದ ಅಕ್ಷತಾ ಪವಾರ ಶಾಲೆ 96.91 ಪ್ರಥಮ ರ‍್ಯಾಂಕ್, ನಿಖಿತಾ ಮಹಾಜನಕಟ್ಟಿ ಶೇ. 96.26 ದ್ವಿತಿಯ ರ‍್ಯಾಂಕ್, ತರುಣಾ ಪುರೋಹಿತ ಶೇ. 96.14 ತೃತೀಯ ಸ್ಥಾನ, ಭಾವಿಕಾ ಪುರೋಹಿತ ಶೇ. 94.49 6ನೇ ರ್ಯಾಂಕ್, ಪವಿತ್ರಾ ಶೇಠ ಶೇ. 94.40 7ನೇ ರ‍್ಯಾಂಕ್ ಪಡೆದಿದ್ದು, ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿಯ ಜೆ.ಎಸ್.ಎಸ್ ಸಕ್ರಿ ಕಾನೂನು ಕಾಲೇಜಿನ ವಿದ್ಯಾರ್ಥಿನಿ ನಾಗರತ್ನಾ ಬಿ.ಎಂ (ಸಂಭಾವ್ಯ) 3ನೇ ರ‍್ಯಾಂಕ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಎಸ್.ಡಿ.ಎಂ ಸಂಸ್ಥೆಯ ಕಾರ್ಯದರ್ಶಿ ಜೀವಂಧರ ಕುಮಾರ, ಭಾರತಿ ಶಾನಭಾಗ, ಡಾ. ಕೆ.ಎಚ್. ನಾಗಚಂದ್ರ, ಜಿನ್ನಪ್ಪ ಕುಂದಗೋಳ, ರೂಪಾ ಇಂಗಳಳ್ಳಿ ಇದ್ದರು. ದೀಪಾ ಕುಲಕರ್ಣಿ ಪ್ರಾರ್ಥಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಮಹಾವೀರ ಉಪಾದ್ಯೆ ವಂದಿಸಿದರು.