ಸ್ಫೂರ್ತಿಯಿಂದ ಪರೀಕ್ಷೆ ಎದುರಿಸಿ

| Published : Mar 11 2024, 01:23 AM IST

ಸಾರಾಂಶ

ವಿದ್ಯಾರ್ಥಿಗಳು ಪರೀಕ್ಷೆಯೆಂದರೆ ಗಾಬರಿಪಡುವ ಅವಶ್ಯಕತೆಯಿಲ್ಲ. ಸ್ಫೂರ್ತಿಯಿಂದ ಖುಷಿ ಖುಷಿಯಾಗಿ ಪರೀಕ್ಷೆ ಬರೆಯಲು ಸನ್ನದ್ಧರಾಗಬೇಕೆಂದು ಶಾಸಕ ವಿಶ್ವಾಸ ವೈದ್ಯ ಅವರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ವಿದ್ಯಾರ್ಥಿಗಳು ಪರೀಕ್ಷೆಯೆಂದರೆ ಗಾಬರಿಪಡುವ ಅವಶ್ಯಕತೆಯಿಲ್ಲ. ಸ್ಫೂರ್ತಿಯಿಂದ ಖುಷಿ ಖುಷಿಯಾಗಿ ಪರೀಕ್ಷೆ ಬರೆಯಲು ಸನ್ನದ್ಧರಾಗಬೇಕೆಂದು ಶಾಸಕ ವಿಶ್ವಾಸ ವೈದ್ಯ ಅವರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

ಸ್ಥಳೀಯ ಗುರುಭವನದಲ್ಲಿ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಹಾಗೂ ಫಲಿತಾಂಶ ಸುಧಾರಣೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಹಮ್ಮಿಕೊಂಡ ಪ್ರೇರಣಾ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ತಮ್ಮ ಜೀವನದ ಗುರಿಯನ್ನು ತಲುಪಲು ಪ್ರಯತ್ನಿಸಬೇಕಿದೆ. ಶೈಕ್ಷಣಿಕ ಭವಿಷ್ಯಕ್ಕೆ ಅವಶ್ಯವಾದ ಸೌಲಭ್ಯವನ್ನು ಕಲ್ಪಿಸುವಲ್ಲಿ ನಾನು ಸದಾ ವಿದ್ಯಾರ್ಥಿಗಳಿಗೆ ಬೆಂಬಲವಾಗಿರುತ್ತೇನೆ. ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಟಾಪ್-10 ಬಂದ ಹತ್ತು ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ನೀಡಲಾಗುತ್ತಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ನಿರಂತರ ಓದಿನ ಮೂಲಕ ತಮ್ಮ ಸಾಧನೆಯ ಗುರಿಯನ್ನು ತಲುಪಬೇಕು. ತಾಲೂಕಿನ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ರ್‍ಯಾಂಕ್‌ ಗಳಿಸುವ ಪ್ರಯತ್ನ ಮಾಡಿದಲ್ಲಿ ತಾವು ಕಲಿತ ಶಾಲೆಯ ಜೊತೆಗೆ ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದ ಕೀರ್ತಿಯೂ ಹೆಚ್ಚಲಿದೆ ಎಂದರು.

ಟಿಎಚ್‌ಓ ಡಾ.ಶ್ರೀಪಾದ ಸಬನಿಸ ಮಾತನಾಡಿ, ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಕಡೆಗೂ ವಿಶೇಷ ಗಮನ ಹರಿಸಬೇಕಿದೆ. ನಿರಂತರ ಓದಿನೊಂದಿಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿಯಿದ್ದರೆ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.

ಬಿಇಓ ಮೋಹನ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಸಿಯೂಟ ಸಹಾಯಕ ನಿರ್ದೇಶಕಿ ಮೈತ್ರಾದೇವಿ ವಸ್ತ್ರದ, ವಿಜಯ ಪಡಿ, ಸಂಪನ್ಮೂಲ ವ್ಯಕ್ತಿಗಳಾದ ಸುಬ್ಬಾಪುರಮಠ, ಉಪ್ಪಿನ, ಮಹೇಶ ಅಂಗಡಿ, ಜಿ.ಕೆ.ಪಾಟೀಲ, ಟಿ.ಬಿ.ಏಗನೌಡರ ಇತರರು ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕ ಎಮ್.ಡಿ.ಹುದ್ದಾರ ಸ್ವಾಗತಿಸಿದರು. ಮಹಾಂತೇಶ ಮುದ್ದನ್ನವರ ನಿರೂಪಿಸಿದರು. ಸುಧೀರ ವಾಘೇರಿ ವಂದಿಸಿದರು.