ಸಾರಾಂಶ
ಸಂಡೂರು: ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಆಯೋಜಿಸಿರುವ ಉದ್ಯೋಗ ಮೇಳದಲ್ಲಿ 50ಕ್ಕೂ ಹೆಚ್ಚು ಸಂಸ್ಥೆಗಳು ಭಾಗವಹಿಸಿವೆ. 3000ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಉದ್ಯೋಗಕ್ಕಾಗಿ ತಮ್ಮ ಹೆಸರನ್ನು ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡಿದ್ದಾರೆ. ಉದ್ಯೋಗಾಕಾಂಕ್ಷಿಗಳು ಆತ್ಮವಿಶ್ವಾಸದಿಂದ ಸಂದರ್ಶನವನ್ನು ಎದುರಿಸಿ ಉದ್ಯೋಗ ಪಡೆದುಕೊಳ್ಳಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಭಾನುವಾರ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದೇಶದಲ್ಲಿ ಪ್ರತಿಷ್ಠಿತ ಐಐಟಿಯಂತಹ ಸಂಸ್ಥೆಗಳಲ್ಲಿ ಓದಿದವರಲ್ಲಿಯೂ ಶೇ.30ರಷ್ಟು ಜನರಿಗೆ ಉದ್ಯೋಗ ಸಿಗುತ್ತಿಲ್ಲ. ದೇಶದಲ್ಲಿ ಉದ್ಯೋಗದ ಸಮಸ್ಯೆ ಇದೆ. ಉದ್ಯೋಗಕ್ಕಾಗಿ ಸಾಕಷ್ಟು ಸ್ಪರ್ಧೆ ಇದೆ. ಯುವ ಜನತೆ ಅಗತ್ಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಸ್ಥಳೀಯವಾಗಿ ಬಹುತೇಕರು ತಮಗೆ ಜಿಂದಾಲ್ ಕಂಪನಿಯಲ್ಲಿಯೇ ಉದ್ಯೋಗ ಕೊಡಿಸಿ ಎಂದು ಕೇಳುತ್ತಿದ್ದಾರೆ. ಕೃಷಿ ವಿಜ್ಞಾನ ಮತ್ತಿತರ ಕೋರ್ಸ್ಗಳನ್ನು ಮಾಡಿದವರು ಜಿಂದಾಲ್ ಕಂಪನಿಯಲ್ಲಿ ಕೆಲಸ ಕೊಡಿಸಿ ಎಂದು ಕೇಳುತ್ತಿದ್ದಾರೆ. ಪ್ರತಿ ಸಂಸ್ಥೆಯಲ್ಲಿ ಉದ್ಯೋಗದ ಮಿತಿ ಇರುತ್ತದೆ. ಬೇರೆಡೆಯಲ್ಲಿಯೂ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಉದ್ಯೋಗಕ್ಕೆ ತಕ್ಕ ಕೌಶಲ್ಯದ ಕೊರತೆಯಿಂದ ಉದ್ಯೋಗ ದೊರೆಯದಿದ್ದಲ್ಲಿ, ನಿರಾಶರಾಗುವುದು ಬೇಡ. ಅಗತ್ಯ ಕೌಶಲ್ಯ ಬೆಳೆಸಲು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಉದ್ಯೋಗ ಪಡೆದುಕೊಂಡವರು, ತಮಗೆ ಉದ್ಯೋಗದಲ್ಲಿ ತೊಂದರೆಯಾದರೆ, ಫೌಂಡೇಶನ್‌ಗೆ ತಿಳಿಸಿದರೆ, ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಲಾಗುವುದು. ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರ ಪಾಲಿದೆ. ಜನತೆ ಸಂವಿಧಾನವನ್ನು ಓದಿಕೊಳ್ಳಬೇಕು. ಅದರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಜಕೀಯವನ್ನು ಗಮನಿಸಬೇಕು. ದೇಶದ ಐಕ್ಯತೆ ಹಾಗೂ ಸಂಸ್ಕೃತಿಯನ್ನು ಉಳಿಸಲು ಎಲ್ಲರೂ ಶ್ರಮಿಸೋಣ ಎಂದರು.ಸಂಸದ ಈ.ತುಕಾರಾಂ ಪ್ರಾಸ್ತಾವಿಕವಾಗಿ ಮಾತನಾಡಿ, ಯುವ ಜನತೆ ಉದ್ಯೋಗ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಸಂತೋಷ್ ಲಾಡ್ ಫೌಂಡೇಶನ್ ಯುವ ಜನತೆಗೆ ಉದ್ಯೋಗ ಅವಕಾಶ ಕಲ್ಪಿಸುವ, ವಿದ್ಯಾರ್ಥಿಗಳ ಫೀಜನ್ನು ನೀಡುವ, ಸಾಮೂಹಿಕ ವಿವಾಹ, ಸ್ವಯಂ ಉದ್ಯೋಗ ಕಲ್ಪಿಸುವಂತಹ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ಅದರಲ್ಲೂ ಪ್ರಮುಖವಾಗಿ ಕಲಘಟಗಿ ಹಾಗೂ ಸಂಡೂರು ಕ್ಷೇತ್ರದಲ್ಲಿ ಹಮ್ಮಿಕೊಂಡಿದೆ. ಜನತೆ ಈ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪಟ್ಟಣದ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಮಾತನಾಡಿ, ದೇವಸ್ಥಾನದ ಗಂಟೆಗಿಂತ ಶಾಲೆಯ ಗಂಟೆ ಹೆಚ್ಚು ಬಾರಿಸಿದರೆ ದೇಶ ಸಮೃದ್ಧವಾಗಲಿದೆ. ದೇಶದಲ್ಲಿ ಉತ್ತಮ ಶಿಕ್ಷಣ ಪಡೆದವರು ಜನ್ಮ ಭೂಮಿಯ ಸೇವೆಗೆ ಮುಂದಾದಾಗ ದೇಶ ಬೆಳೆಯಲು ಸಾಧ್ಯ. ಜಾತಿ ಧರ್ಮಕ್ಕಿಂತ ಮನುಷ್ಯತ್ವಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ. ಸಂಡೂರಿನ ಅಭಿವೃದ್ಧಿಗೆ ದಿ.ಎಂ.ವೈ. ಘೋರ್ಪಡೆಯವರು ಬುನಾದಿ ಹಾಕಿದ್ದರೆ, ಸಂತೋಷ್ ಲಾಡ್ ಹಾಗೂ ಈ. ತುಕಾರಾಂ ಕಟ್ಟಡ ಕಟ್ಟುವ ಕೆಲಸ ಮಾಡಿದ್ದಾರೆ. ತಾಲೂಕಿನಲ್ಲಿಯ ರಸ್ತೆ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮಾದರಿಯಾಗಿದೆ. ಉತ್ತಮ ನಾಡನ್ನು ಕಟ್ಟಲು ಎಲ್ಲರೂ ಶ್ರಮಿಸೋಣ ಎಂದರು.ಕನೆಕ್ಟ್ ಸಂಸ್ಥೆಯ ಸಾದಿಕ್ ಕಾರ್ಯಕ್ರಮ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ವಾಯ್ಸ್ ಆಫ್ ನೀಡ್ ಫೌಂಡೇಶನ್ ವತಿಯಿಂದ ಹಲವು ಅಂಗವಿಕಲ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗದ ಆದೇಶ ಪತ್ರಗಳನ್ನು ನೀಡಲಾಯಿತು.
ತಾಯಪ್ಪ ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸುಜಾತ ಪೋಳ್ ಸ್ವಾಗತಿಸಿದರು. ಗೋಣಿ ಬಸಪ್ಪ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಶಾಸಕಿ ಈ.ಅನ್ನಪೂರ್ಣ ತುಕಾರಾಂ, ಮಾಜಿ ಎಂಎಲ್‌ಸಿ ಕೆ.ಎಸ್.ಎಲ್. ಸ್ವಾಮಿ, ಕೆಪಿಸಿಸಿ ಕಾರ್ಯದರ್ಶಿ ಕವಿತಾ ರೆಡ್ಡಿ, ಮಾಜಿ ವಾಡಾ ಅಧ್ಯಕ್ಷ ರೋಷನ್ ಜಮೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಿತ್ರಿಕಿ ಸತೀಶ್‌ಕುಮಾರ್, ಜಿ. ಏಕಾಂಬ್ರಪ್ಪ, ಮಹಿಳಾ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷೆ ಆಶಾಲತಾ ಸೋಮಪ್ಪ, ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್, ಉಪಾಧ್ಯಕ್ಷೆ ಲತಾ ಉಜ್ಜಪ್ಪ, ಹಲವು ಸದಸ್ಯರು, ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಕಾರ್ಯದರ್ಶಿ ಚಿದಂಬರ ಎಸ್.ನಾನಾವಟೆ, ಆಡಳಿತಾಧಿಕಾರಿ ಕುಮಾರ್.ಎಸ್. ನಾನಾವಟೆ, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ, ಮುಖಂಡರಾದ ತುಮಟಿ ಲಕ್ಷ್ಮಣ, ಎನ್.ಎಂ. ವೀರೇಶಯ್ಯ, ಜಯರಾಂ, ಕೆ.ಸತ್ಯಪ್ಪ ಹಾಗೂ ಹಲವು ಉದ್ಯೋಗಾಕಾಂಕ್ಷಿಗಳು ಉಪಸ್ಥಿತರಿದ್ದರು.