ಆತ್ಮಸ್ಥೈರ್ಯದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಿ

| Published : Jan 23 2025, 12:46 AM IST

ಸಾರಾಂಶ

ರಾಮನಗರ: ಸಾಮಾನ್ಯವಾಗಿ ಹಬ್ಬ ಮಾಡುವಾಗ ಎಲ್ಲರಲ್ಲು ಸಂಭ್ರಮ, ಲವಲವಿಕೆ ಇರುತ್ತದೆ. ಅದೇ ರೀತಿ ಪರೀಕ್ಷೆ ಎಂಬ ಹಬ್ಬದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಧೃತಿಗೆಡದೆ ಆತ್ಮಸ್ಥೈರ್ಯದ ಜೊತೆಗೆ ಸಂತೋಷದಿಂದ ಪಾಲ್ಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಆರ್.ಚಂದ್ರಯ್ಯ ಕಿವಿಮಾತು ಹೇಳಿದರು.

ರಾಮನಗರ: ಸಾಮಾನ್ಯವಾಗಿ ಹಬ್ಬ ಮಾಡುವಾಗ ಎಲ್ಲರಲ್ಲು ಸಂಭ್ರಮ, ಲವಲವಿಕೆ ಇರುತ್ತದೆ. ಅದೇ ರೀತಿ ಪರೀಕ್ಷೆ ಎಂಬ ಹಬ್ಬದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಧೃತಿಗೆಡದೆ ಆತ್ಮಸ್ಥೈರ್ಯದ ಜೊತೆಗೆ ಸಂತೋಷದಿಂದ ಪಾಲ್ಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಆರ್.ಚಂದ್ರಯ್ಯ ಕಿವಿಮಾತು ಹೇಳಿದರು.

ನಗರದ ಹೋಲಿ ಕ್ರೆಸೆಂಟ್ ಪಿಯು ಕಾಲೇಜು ಆವರಣದಲ್ಲಿ ಬುಧವಾರ ರೋಟರಿ ರಾಮನಗರ, ಶಾಲಾ ಶಿಕ್ಷಣ ಇಲಾಖೆ, ಹೋಲಿ ಕ್ರೆಸೆಂಟ್ ಪಿಯು ಕಾಲೇಜು ಹಾಗೂ ಚನ್ನಪಟ್ಟಣ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ "ಪರೀಕ್ಷೆ ಒಂದು ಹಬ್ಬ " ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ತಮ್ಮಲ್ಲಿನ ಭಯವನ್ನು ದೂರ ಮಾಡಿ ಧೈರ್ಯ ತಂದುಕೊಳ್ಳಬೇಕು. ಗುರು-ಹಿರಿಯರ ಮಾರ್ಗದರ್ಶನ, ನಿರಂತರ ಅಭ್ಯಾಸ ಮತ್ತು ಬರವಣಿಗೆ ಮುಖಾಂತರ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಹಬ್ಬದಂತೆ ಸಂತೋಷದಿಂದ ಎದುರಿಸಬೇಕು. ಪರೀಕ್ಷೆಯನ್ನು ನಿರ್ಭೀತಿಯಿಂದ ಖುಷಿಯಾಗಿ ಬರೆಯುವಂತೆ ಪ್ರೇರೇಪಣೆ ನೀಡಿ, ಸಂಭ್ರಮಿಸುವ ಮನಸ್ಸುಗಳನ್ನು ತಯಾರು ಮಾಡುತ್ತಿರುವ ಈ ವಿನೂತನ ಕಾರ್ಯಕ್ರಮ ಉತ್ತಮ ಫಲಿತಾಂಶ ತರಲು ಪೂರಕವಾಗಿದೆ ಎಂದರು.

ಎಸ್ಸೆಸ್ಸೆಲ್ಸಿಯಲ್ಲಿ ಕೇವಲ ಉತ್ತಮ ಸ್ಥಾನ ಪಡೆಯುವುದಷ್ಟೇ ನಮ್ಮ ಉದ್ದೇಶವಲ್ಲ. ಗುಣಮಟ್ಟದ ಫಲಿತಾಂಶ ಪಡೆಯುವುದು ನಮ್ಮ ಮುಖ್ಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಜ್ಜುಗೊಂಡಿದೆ. ಶಿಕ್ಷಕರು ಸಹ ಗುಣಮಟ್ಟದ ಫಲಿತಾಂಶ ತರಲು ಶ್ರಮಿಸುತ್ತಿದ್ದಾರೆ. ಹಾಗಾಗಿ ಈ ಬಾರಿ ಮೊದಲ 5 ರೊಳಗೆ ಸ್ಥಾನ ಪಡೆಯುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಕಷ್ಟದ ವಿಷಯಗಳನ್ನು ಇಷ್ಟಪಟ್ಟು ಓದಿ. ಗೊತ್ತಿಲ್ಲದ ವಿಚಾರಗಳನ್ನು ಶಿಕ್ಷಕರಿಂದ ಕೇಳಿ ತಿಳಿಯಿರಿ. ಒತ್ತಡಕ್ಕೆ ಬಿದ್ದು ಯಾರೂ ಓದಬೇಡಿ. ಉಳಿದಿರುವ ಎರಡು ತಿಂಗಳೊಳಗೆ ಪರೀಕ್ಷೆಗೆ ಸಿದ್ಧರಾಗಬೇಕು. ಓದಿದ್ದನ್ನು ಮನನ ಮಾಡಿಕೊಳ್ಳಬೇಕು. ಪರೀಕ್ಷೆ ಬಗ್ಗೆ ಇರುವ ಭಯವನ್ನು ಹೋಗಲಾಡಿಸಬೇಕು ಎಂದು ಹೇಳಿದರು.

ಈಗ ಮೊಬೈಲ್ ಮಕ್ಕಳ ನಿಜವಾದ ಶತ್ರುವಾಗಿದೆ. ಮಕ್ಕಳು ದೇಶದ ಮತ್ತು ತಂದೆ ತಾಯಿಗಳ ಆಸ್ತಿಯಾಗಿದ್ದೀರಿ. ಮಕ್ಕಳು ಸಮಾಜದ ಸತ್ಪ್ರಜೆ ಆಗಬೇಕೆಂಬುದು ಎಲ್ಲ ಪೋಷಕರ ಕನಸಾಗಿರುತ್ತದೆ. ಜೊತೆಗೆ ಇಡೀ ಸಮಾಜ ನನ್ನ ಮಗುವನ್ನು ಗುರುತಿಸಬೇಕೆಂಬ ಆಸೆ ಅವರದ್ದಾಗಿರುತ್ತದೆ. ಹಾಗಾಗಿ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಮಕ್ಕಳು ಓದಿನಲ್ಲಿ ಯಶಸ್ವಿಯಾಗುವ ಮೂಲಕ ಪ್ರಮುಖ ಪಾತ್ರ ವಹಿಸಬೇಕಿದೆ ಎಂದು ಚಂದ್ರಯ್ಯ ಸಲಹೆ ನೀಡಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜೇಗೌಡ ಮಾತನಾಡಿ, ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನು ಕೇಳುವುದಿಲ್ಲ. ಪ್ರಶ್ನೆಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ಶೇಕಡ ನೂರಕ್ಕೆ ನೂರರಷ್ಟು ಪಠ್ಯ ಕ್ರಮದನ್ವಯವೇ ಎಲ್ಲಾ ಪ್ರಶ್ನೆಗಳು ಇರುತ್ತವೆ. ಅತ್ಯಂತ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಒಳ್ಳೆಯ ಅಂಕಗಳನ್ನು ಗಳಿಸಬಹುದು ಎಂದು ಹೇಳಿದರು.

ಜಿಲ್ಲೆಯ 112 ಪ್ರೌಢಶಾಲೆಗಳಿಗೆ ಭೇಟಿ ನೀಡಿದ್ದು, ಸರ್ಕಾರಿ ಪ್ರೌಢಶಾಲಾ ಮಕ್ಕಳು ಹಿಂದೆ ಉತ್ತಮ ಫಲಿತಾಂಶ ತಂದಿರುವುದನ್ನು ನೋಡಿದ್ದೇವೆ. ಈ ವರ್ಷ ಸಹ ಮಕ್ಕಳ ಕಲಿಕೆಗೆ ಒತ್ತು ನೀಡಿ, ಶಿಕ್ಷಕರು ಶ್ರಮ ಹಾಕುತ್ತಿದ್ದಾರೆ. ಹಾಗಾಗಿ ಫಲಿತಾಂಶದಲ್ಲಿ ಸುಧಾರಣೆ ತರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೋಲಿಕ್ರೆಸೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಲ್ತಾಫ್ ಅಹಮದ್ ಮಾತನಾಡಿ, 10ನೇ ತರಗತಿ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯವನ್ನು ಹೋಗಲಾಡಿಸಿ, ಅವರಲ್ಲಿ ಆತ್ಮಸ್ಥೆರ್ಯ ತುಂಬುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ನಮ್ಮ ಶಾಲಾ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಪರೀಕ್ಷೆ ಒಂದು ಹಬ್ಬ ವಿನೂತನ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಲೆಗಳ 1500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸೋಮಲಿಂಗಯ್ಯ ಮಾತನಾಡಿ, ಶಾಲಾ ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ತಾಲೂಕಿನ ಹತ್ತನೇ ತರಗತಿಯ 3401 ವಿದ್ಯಾರ್ಥಿಗಳೆಲ್ಲರೂ ಉತ್ತೀರ್ಣರಾಗಬೇಕೆಂದು ಮೂರು ಹಂತದಲ್ಲಿ ಮಕ್ಕಳಿಗೆ ಕಾರ್ಯಾಗಾರ ಮತ್ತು ಮೂರು ಪೂರ್ವ ಸಿದ್ದತಾ ಪರೀಕ್ಷೆ ನಡೆಸಿ ಮುಖ್ಯ ಪರೀಕ್ಷೆಗೆ ಅಣಿಗೊಳಿಸುವ ಕೆಲಸ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಕಾರ್ಯಕ್ರಮಗಳ ಪ್ರಯೋಜನ ಪಡೆದು ಗುರುಗಳು ಮತ್ತು ಪೋಷಕರಿಗೆ ಕೀರ್ತಿ ತರುವ ಕೆಲಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಚನ್ನಪಟ್ಟಣ ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟಸುಬ್ಬಯ್ಯಚೆಟ್ಟಿ ಮಾತನಾಡಿ, ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ 50 ಸಾವಿರ ನಗದು, ರಾಮನಗರ ಜಿಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿ ರಾಜ್ಯ ಮಟ್ಟದಲ್ಲಿ 10 ರ್ಯಾಂಕಿನೊಳಗೆ ಸ್ಥಾನ ಪಡೆದ ವಿದ್ಯಾರ್ಥಿಗೆ 1 ಲಕ್ಷ ರು. ನಗದು ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದರು.

ಜಿಲ್ಲೆಯ ವಿವಿಧ ಶಾಲೆಗಳ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಪರೀಕ್ಷೆ ಒಂದು ಹಬ್ಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಕೋಲಾರದ ಸುರೇಶ್‌ಗೌಡ ಹಾಗೂ ರಾಮನಗರ ಡಯಟ್‌ನ ಉಪನ್ಯಾಸಕ ಕೆ.ಪಿ. ಬಾಬುರವರು, ಪರೀಕ್ಷೆಯನ್ನು ಎದುರಿಸುವಾಗ ನಿಮ್ಮಲ್ಲಿ ಸಂಭ್ರಮ ಇರಬೇಕು. ಇದಕ್ಕಾಗಿ ವಿದ್ಯಾರ್ಥಿಗಳು ಹೇಗೆ ಓದಬೇಕು. ಪರೀಕ್ಷೆಗೆ ಯಾವ ರೀತಿ ತಯಾರಿ ಮಾಡಬೇಕು. ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಬಗೆ ಹೇಗೆ ಎನ್ನುವುದನ್ನು ಮನಮುಟ್ಟುವಂತೆ ತಿಳಿಸಿಕೊಟ್ಟರು. ತಾಯಿ ತಂದೆ ಹೆಮ್ಮೆ ಪಟ್ಟುಕೊಳ್ಳುವಂತೆ, ನಮ್ಮ ಜಿಲ್ಲೆಗೆ ಕೀರ್ತಿಗೆ ತರುವಂತೆ ಹೆಚ್ಚು ಅಂಕ ಪಡೆಯುವುದರ ಮೂಲಕ ಯಶಸ್ವಿಗೊಳಿಸುವಂತೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಹೋಲಿ ಕ್ರಸೆಂಟ್ ಪಿಯು ಕಾಲೇಜಿನ ಸಂಸ್ಥಾಪಕ ಅಧ್ಯೆಕ್ಷೆ ಡಾ.ಶಾಜಿಯಾ ಅಧ್ಯಕ್ಷತೆ ವಹಿಸಿದ್ದರು. ರೋಟರಿ ರಾಮನಗರ ಅಧ್ಯಕ್ಷ ಶಿವಣ್ಣ, ಆಡಳಿತಾಧಿಕಾರಿ ಸ್ಟ್ಯಾನಿಪಾಲ್, ರೋಟರಿ ಕಾರ್ಯದರ್ಶಿ ನಂದನ್‌ರಾವ್, ಸಮುದಾಯ ಸೇವೆ ನಿರ್ದೇಶಕ ಪ್ರಕಾಶ್, ಶಾಂತಿನಿಕೇತನ ಸಂಸ್ಥೆಯ ಕುಮಾರಸ್ವಾಮಿ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಕೋಟ್ .............

ಬದುಕಿನಲ್ಲಿ ಏನು ಬೇಕಾದರು ಸಿಗುತ್ತದೆ. ಆದರೆ, ವಿದ್ಯಾರ್ಥಿ ಜೀವನ, ಅಪ್ಪ ಅಮ್ಮ ಹಾಗೂ ಕಳೆದುಹೋದ ಸಮಯ ಮತ್ತೆ ಎಂದಿಗೂ ಸಿಗುವುದಿಲ್ಲ. ಆದ್ದರಿಂದ ಸಮಯಕ್ಕೆ ಮಹತ್ವ ನೀಡುವುದನ್ನು ಕಲಿಯಬೇಕು. ಶ್ರಮ ಹಾಕಿದರೆ ಮಾತ್ರ ಪ್ರತಿಫಲ ಸಿಗುತ್ತದೆ. ಪರೀಕ್ಷೆ ಭಯ ಹೋಗಬೇಕಾದರೆ ಉತ್ತಮ ಸಿದ್ಧತೆ ಮಾಡಿಕೊಳ್ಳಬೇಕು.

- ಡಾ.ಆರ್.ಚಂದ್ರಯ್ಯ, ಅಪರ ಜಿಲ್ಲಾಧಿಕಾರಿ, ರಾಮನಗರ

ಕೋಟ್‌...........

ಪಠ್ಯಗಳಲ್ಲಿರುವ ಪಾಠಗಳನ್ನು ಸಂಪೂರ್ಣ ಓದಿ ಅರ್ಥ ಮಾಡಿಕೊಳ್ಳಬೇಕು. ಕೇವಲ ಪ್ರಶ್ನೆಗಳಿಗಷ್ಟೇ ಉತ್ತರ ಓದಿಕೊಳ್ಳಬಾರದು. ಇಡೀ ಪಾಠವನ್ನು ಓದಿ ಅರ್ಥ ಮಾಡಿಕೊಂಡು, ಓದಿದ್ದನ್ನು ಮತ್ತೆ ಮತ್ತೆ ಮನನ ಮಾಡಿಕೊಂಡಿದ್ದರೆ, ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆ ಕೊಟ್ಟರೂ ಸುಲಭವಾಗಿ ಉತ್ತರ ಬರೆಯಬಹುದು.

-ಬಸವರಾಜೇಗೌಡ, ಉಪನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ

22ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಹೋಲಿ ಕ್ರೆಸೆಂಟ್ ಪಿಯು ಕಾಲೇಜು ಆವರಣದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪರೀಕ್ಷೆ ಒಂದು ಹಬ್ಬ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಉದ್ಘಾಟಿಸಿದರು.