ಕುಷ್ಟಗಿ: ತಾಲೂಕಿನ ಮ್ಯಾದರಡೊಕ್ಕಿ ತಾಂಡಾ ಹಾಗೂ ಇತರೆ ಗ್ರಾಮಗಳ ಬಡ ರೈತರು ದಲಿತರಿಗೆ ರಕ್ಷಣೆ ಕೊಡುವುದು, ಸರ್ಕಾರಿ, ಅರಣ್ಯ ಭೂಮಿಯಲ್ಲಿ ಸಾಗುವಳಿಗೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿ ತಹಸೀಲ್ದಾರ ಅಶೋಕ ಶಿಗ್ಗಾಂವಿಗೆ ಕರ್ನಾಟಕ ರೈತ ಸಂಘ (ಎಐಯುಕೆಎಸ್) ತಾಲೂಕು ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಪ್ರಮುಖರು, ಕುಷ್ಟಗಿ ತಾಲೂಕಿನ ಮ್ಯಾದರಡೊಕ್ಕಿ ತಾಂಡಾ ವಿವಿಧ ಗ್ರಾಮಗಳ ಬಡವರು, ದಲಿತ ಕುಟುಂಬದ ರೈತರು ಸರ್ಕಾರಿ ಮತ್ತು ಅರಣ್ಯ ಭೂಮಿಯಲ್ಲಿ ಅರವತ್ತು ವರ್ಷಗಳಿಂದ ಸಾಗುವಳಿ ಮಾಡುತ್ತಾ ಬರುತ್ತಿದ್ದಾರೆ. ಇತ್ತೀಚಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಫೆ 18.2026 ರಂದು ಮ್ಯಾದರಡೊಕ್ಕಿ ತಾಂಡಾದ ಸಾಗುವಳಿದಾರರ ಮೇಲೆ ದೌರ್ಜನ್ಯ ನಡೆಸಿ ಅರಣ್ಯ ಭೂಮಿಯಲ್ಲಿ ಗುಂಡಿ ತೊಡಿದ್ದಾರೆ. ದಲಿತ ಜನಾಂಗ ಸೇರಿದಂತೆ ನಿರುಪಾದಿ ರಾಠೋಡ್, ಠಾಕಪ್ಪ ರಾಠೋಡ್ ಸೇರಿದಂತೆ ಕೆಲವರು ಅಧಿಕಾರಿಗಳಿಗೆ ವಿನಂತಿಸಿದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಗುವಳಿದಾರರ ಮೇಲೆ ದೌರ್ಜನ್ಯ ನಡೆಸಿದ್ದಾರೆ.ಸರ್ಕಾರದ ಆದೇಶದಂತೆ 3 ಎಕರೆಗಿಂತ ಕಡಿಮೆ ಅರಣ್ಯ ಭೂಮಿ ಸಾಗುವಳಿ ಮಾಡುವವರನ್ನು ಭೂಮಿಯಿಂದ ಒಕ್ಕಲೆಬಿಸಬಾರದೆಂದು ಕಾಯ್ದೆ ಇದ್ದರೂ ಅದನ್ನು ಗಾಳಿಗೆ ತೂರಿ ದೌರ್ಜನ್ಯ ದಬ್ಬಾಳಿಕೆ ನಡೆಸಿ ರೈತರನ್ನು ಒಕ್ಕಲೆಬಿಸಿದ್ದಾರೆ.
ಅರಣ್ಯ ಸಚಿವ ಈಶ್ವರ ಖಂಡ್ರೆ ಅನೇಕ ಸಂದರ್ಭದಲ್ಲಿ ವಿಷಯ ಸ್ಪಷ್ಟಪಡಿಸಿದ್ದಾರೆ. ಇದ್ದಲ್ಲದೇ 1980ಕ್ಕಿಂತ ಮುಂಚಿನಿಂದ ಸಾಗುವಳಿ ಮಾಡುವ ರೈತರನ್ನು ತೆರವುಗೊಳಿಸಬಾರದು, ಏಕೆಂದರೆ 1980ರ ನಂತರ ಅರಣ್ಯ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.ಈ ಕಾಯ್ದೆ ಜಾರಿಗೆ ಬರುವ ಮುಂಚೆ ಸಾಗುವಳಿ ಮಾಡುವ ಭೂಮಿಗೆ ಅರಣ್ಯ ಕಾಯ್ದೆ ಅನ್ವಯವಾಗುವುದಿಲ್ಲ. ಇದ್ದಲ್ಲದೇ ಮ್ಯಾದರಡೊಕ್ಕಿ ಸೇರಿದಂತೆ ಕುಷ್ಟಗಿ ತಾಲೂಕಿನ ಸಾವಿರಾರು ಎಕರೆ ಅರಣ್ಯ ಭೂಮಿ ಖಾಲಿ ಇದೆ. ಈ ಭೂಮಿಯಲ್ಲಿ ಗಿಡ ಮರ ಇಲ್ಲ, ಇಂತಹ ಭೂಮಿಯಲ್ಲಿ ಗಿಡ ನೆಡುತ್ತಿಲ್ಲ ದಲಿತರ ಮತ್ತು ಬಡ ರೈತರು ಸಾಗುವಳಿ ಮಾಡುವ ಜಮೀನಿನಲ್ಲಿ ಗಿಡ ನೆಡುವ ಕಾರ್ಯ ಮಾಡಲು ಮುಚೂಣಿಯಲ್ಲಿದ್ದಾರೆ. ಆದ್ದರಿಂದ ಅರಣ್ಯಾಧಿಕಾರಿಗಳಿಗೆ ಸೂಕ್ತ ಸಲಹೆ ನೀಡಿ, ರೈತರಿಗೆ ಸಾಗುವಳಿ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಬೇಡಿಕೆಗಳು: ಮ್ಯಾದರರೊಕ್ಕಿ ತಾಂಡಾದ ಸರ್ವೇ ನಂ.74 ಭೂಮಿಯ ಮೂಲತಃ ಸರ್ಕಾರಿ ಭೂಮಿಯಾಗಿದ್ದು, ಈ ಭೂಮಿಯಲ್ಲಿ ಸಾಗುವಳಿ ಮಾಡುವವರಿಗೆ ರಕ್ಷಣೆ ನೀಡಬೇಕು. ತಾವರಗೇರಾ ಹೋಬಳಿಯ ಮೇಣೆದಾಳ, ಕಿಲ್ಲಾರಹಟ್ಟಿ, ಕನ್ನಾಳ, ಸಂಗನಾಳ, ತೆಮ್ಮಿನಾಳ, ಗಂಗನಾಳ, ಸಿದ್ದಾಪೂರ ಗ್ರಾಮಗಳಲ್ಲಿನ ಸರ್ಕಾರಿ ಭೂಮಿ ಸಾಗುವಳಿ ಮಾಡುವವರಿಗೆ ಮಂಜೂರಾತಿ ಮಾಡಬೇಕು. ತಾವರಗೇರಾ ಪಟ್ಟಣದ ನಿವಾಸಿಗಳಿಗೆ ನಿವೇಶನ ಹಕ್ಕುಪತ್ರ ನೀಡಬೇಕು. 50-60 ವರ್ಷಗಳಿಂದ ಸಾಗುವಳಿ ಮಾಡುವ ಭೂಮಿಗೆ ಅರ್ಜಿ ಸಲ್ಲಿಸಿದ್ದು, ಸಕಾರಣವಿಲ್ಲದೇ ತಿರಸ್ಕರಿಸಿದ ಅರ್ಜಿ ಪುನರ್ ಪರಿಶೀಲನೆಗೆ ಒಳಪಡಿಸಿ ಭೂ-ಮಂಜೂರಾತಿ ಕೊಡಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಮಲ್ಲೇಶಗೌಡ, ಕಾರ್ಯದರ್ಶಿ ದೇವಪ್ಪ ಕಂಬಳಿ, ನಿರುಪಾದಿ ಬನ್ನಟ್ಟಿ, ಬಿ.ಎನ್.ಯರಡಿಹಾಳ, ಶರಣಪ್ಪ ಸಿದ್ದಾಪೂರ, ರಗಡಪ್ಪ ಮೆಣೆದಾಳ, ಶ್ಯಾಮೀದಸಾಬ ತಾವರಗೇರಾ, ದ್ಯಾಮಮ್ಮ ಸೇರಿದಂತೆ ಅನೇಕರು ಇದ್ದರು.