ಸರಳ ಸಾಮೂಹಿಕ ಆರ್ಥಿಕ ಮಿತವ್ಯಯಕ್ಕೆ ಸಹಕಾರಿ

| Published : Apr 23 2024, 12:51 AM IST

ಸರಳ ಸಾಮೂಹಿಕ ಆರ್ಥಿಕ ಮಿತವ್ಯಯಕ್ಕೆ ಸಹಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಡಂಬಳ ಹೋಬಳಿಯ ಪೇಠಾಆಲೂರ ಗ್ರಾಮದ ಶ್ರೀಹಾಲೇಶ್ವರ 46ನೇ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ನಡೆಯಿತು,

ಕನ್ನಡಪ್ರಭ ವಾರ್ತೆ ಡಂಬಳ

ಸಾಲ ಮಾಡಿಕೊಂಡು ಮದುವೆ ಮಾಡಿಕೊಳ್ಳುವುದಕ್ಕಿಂತ ಹಣ ಉಳಿತಾಯದ ಜೊತೆಗೆ ಸರಳ ಸಾಮೂಹಿಕ ಮದುವೆ ಮಾಡಿಕೊಳ್ಳುವುದು ಒಳ್ಳೆಯ ಕೆಲಸ ಎಂದು ವಿರೂಪಾಪುರದ ಗುರು ಮುದಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಡಂಬಳ ಹೋಬಳಿಯ ಪೇಠಾಆಲೂರ ಗ್ರಾಮದ ಶ್ರೀಹಾಲೇಶ್ವರ 46ನೇ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದ ಸಾನಿಧ್ಯ ವಹಿಸಿ ಮಾತನಾಡಿದರು.

ಇಂತಹ ದುಬಾರಿ ಸಮಯದಲ್ಲಿ ಮನೆ ಕಟ್ಟುವುದು ಮತ್ತು ಮದುವೆ ಮಾಡುವುದು ಬಹಳ ಕಷ್ಟದ ಕೆಲಸ. ಜೊತೆಗೆ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಮನಗಂಡು ತ್ರಿವಿಧ ದಾಸೋಹಿ ಹಾಲೇಶ್ವರ ಶಿವಶರಣರು ಪ್ರತಿ ವರ್ಷ ಇಂತಹ ದುಬಾರಿ ಕಾಲದಲ್ಲಿ ಬಡವರಿಗಾಗಿ ಇಲ್ಲಿ ವರೆಗೆ 450ಕ್ಕೂ ಹೆಚ್ಚು ಜೋಡಿಗಳಿಗೆ ಮದುವೆ ಮಾಡಿಸಿದ್ದು ಪ್ರಶಂಸನೀಯ ಎಂದು ಹೇಳಿದರು.

ತ್ರಿವಿಧ ದಾಸೋಹಿ ಹಾಲೇಶ್ವರ ಶಿವಶರಣರು ಮಾತನಾಡಿ, ಸಾಮೂಹಿಕ ಮದುವೆ ಮೂಲಕ ಗುರುಹಿರಿಯರ, ಮಠಾಧೀಶರ ಆಶೀರ್ವಾದಕ್ಕೆ ಭಾಜನರಾದ ನೀವು ಧನ್ಯರು. ನಿಮ್ಮ ನವದಾಂಪತ್ಯ ಜೀವನ ಸುಖಕರವಾಗಲಿ. ದಾಂಪತ್ಯ ಜೀವನದಲ್ಲಿ ಕೋಪ ಮತ್ತು ದುಡಕನ್ನು ಬದಿಗಿಟ್ಟು ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಸೊಸೆಯಾದವಳು ಮನೆಯ ಹಿರಿಯರಾದ ಅತ್ತೆ ಮಾವರನ್ನು ತಂದೆ-ತಾಯಿಯಂತೆ ಕಾಣಿ. ಸೊಸೆಯನ್ನು ನಿಮ್ಮ ಮನೆಯ ಮಗಳಂತೆ ಕಂಡರೆ ನಿಮ್ಮ ಬದುಕು ಅನೋನ್ಯತೆಯ ಕೇಂದ್ರವಾಗಿರುತ್ತದೆ ಎಂದು ನವದಂಪತಿಗೆ ಮತ್ತು ಪಾಲಕರಿಗೆ ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ 8 ಜೋಡಿಗಳು ಕಂಕಣ ಭಾಗ್ಯ ಪಡೆದರು. ಈರಮ್ಮ ಬ್ಯಾಲಿಹಾಳ ಕುಟುಂಬದವರಿಂದ ಅನ್ನಸಂತರ್ಪಣೆ ಜರುಗಿತು. ಕಾರ್ಯಕ್ರಮದಲ್ಲಿ ಹಾಲೇಶ್ವರ ಮಠದ ಕಾರ್ಯದರ್ಶಿ ಪಂಚಾಕ್ಷರಯ್ಯ ಹಿರೇಮಠ, ಮಲ್ಲಯ್ಯ ಹಿರೇಮಠ, ಈರಮ್ಮ ಬ್ಯಾಲಿಹಾಳ, ಚಂದ್ರು ನಾಗರಡ್ಡಿ, ನಾಗಪ್ಪ ಚಿಕರಡ್ಡಿ, ವೀರನಗೌಡ ಸುಳ್ಳದ, ಶರಣಪ್ಪ ಬೂತರಡ್ಡಿ, ರವಿ ಚಾಕಲಬ್ಬಿ, ಹಾಲೇಶ ಸೂಡಿ, ಶರಣಪ್ಪ ಪರಡ್ಡಿ, ಮುನಿಯಪ್ಪ ಯು, ಗ್ರಾಮದ ಹಿರಿಯರು, ಯುವಕರು, ಹಾಲೇಶ್ವರ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು, ಗುರುವೃಂದ, ಮಹಿಳೆಯರು ವಿವಿಧ ಗ್ರಾಮಸ್ಥರು ಇದ್ದರು.