ಸಂಡೂರು ಗಣಿ ಭಾಗದ ಗ್ರಾಮಗಳಿಗೆ ಜನರ ಬದುಕಿನ ವಾಸ್ತವ ಸ್ಥಿತಿಗತಿ ಅರಿಯಲು ಸತ್ಯ ಶೋಧನಾ ತಂಡ ಭೇಟಿ

| Published : Aug 26 2024, 01:43 AM IST / Updated: Aug 26 2024, 09:08 AM IST

ಸಂಡೂರು ಗಣಿ ಭಾಗದ ಗ್ರಾಮಗಳಿಗೆ ಜನರ ಬದುಕಿನ ವಾಸ್ತವ ಸ್ಥಿತಿಗತಿ ಅರಿಯಲು ಸತ್ಯ ಶೋಧನಾ ತಂಡ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಗಣಿ ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿನ ಜನರ ಬದುಕಿನ ವಾಸ್ತವ ಸ್ಥಿತಿಗತಿ ಅರಿಯಲು ಮತ್ತು ಅರಣ್ಯದ ಪುನರುಜ್ಜೀವನದ ವಾಸ್ತವ ತಿಳಿಯಲು ಸಮಾಜ ಪರಿವರ್ತನಾ ಸಮುದಾಯ, ರೈತ ಸಂಘ ಮುಂತಾದ ಸಂಘಟನೆಗಳ ಮುಖಂಡರನ್ನೊಳಗೊಂಡ ಸತ್ಯಶೋಧನಾ ಸಮಿತಿ  ಭೇಟಿ

ಸಂಡೂರು: ಗಣಿ ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿನ ಜನರ ಬದುಕಿನ ವಾಸ್ತವ ಸ್ಥಿತಿಗತಿ ಅರಿಯಲು ಮತ್ತು ಅರಣ್ಯದ ಪುನರುಜ್ಜೀವನದ ವಾಸ್ತವ ತಿಳಿಯಲು ಸಮಾಜ ಪರಿವರ್ತನಾ ಸಮುದಾಯ, ರೈತ ಸಂಘ ಮುಂತಾದ ಸಂಘಟನೆಗಳ ಮುಖಂಡರನ್ನೊಳಗೊಂಡ ಸತ್ಯಶೋಧನಾ ಸಮಿತಿಯ ತಂಡ ಶನಿವಾರ, ಭಾನುವಾರ ತಾಲೂಕಿನ ವಿವಿಧ ಗಣಿಭಾಗದ ಗ್ರಾಮಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿತು.

ಸತ್ಯಶೋಧನ ಸಮಿತಿಯ ಮುಖಂಡರೂ ಹಾಗೂ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷರೂ ಆದ ಬಡಗಲಪುರ ನಾಗೇಂದ್ರ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಡೂರು ಪ್ರಾಕೃತಿಕ ಸಂಪತ್ತಿಗೆ ಹೆಸರಾಗಿದೆ. ಆದರೆ, ಇಲ್ಲಿನ ಜನಜೀವನ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಆಡಳಿತಕ್ಕೆ ಇಂದಿನ ಹಾಗೂ ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆ ಕಾಳಜಿ ಇಲ್ಲ. ಜನರ ಅಸಹಾಯಕತೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಜನರಲ್ಲಿ ಭ್ರಮೆ ತುಂಬಲಾಗಿದೆ. ಬಂಡವಾಳಶಾಹಿಗಳ ದುರಾಸೆಯಿಂದಾಗಿ ಮುಗ್ಧ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಕೇರಳದ ವಯನಾಡು, ರಾಜ್ಯದ ಕೊಡಗು ಪ್ರದೇಶಗಳಲ್ಲಿ ಪ್ರಕೃತಿ ನಾಶದಿಂದ ಉಂಟಾದ ದುಷ್ಪರಿಣಾಮಗಳನ್ನು ನೋಡಿದ್ದೇವೆ. ಸಂಡೂರು ಮತ್ತೊಂದು ವಯನಾಡು ಆಗುವುದು ಬೇಡ. ಇಲ್ಲಿ ಗಣಿಗಾರಿಕೆ ನಿಷೇಧವಾದರೆ ಮಾತ್ರ ಇಲ್ಲಿನ ಪ್ರಕೃತಿ, ಪರಿಸರ ಪುನರುಜ್ಜೀವನವಾಗಲು ಸಾಧ್ಯ. ಇಲ್ಲಿ ಗಣಿಗಾರಿಕೆಯಿಂದ ಜನರ ಆರೋಗ್ಯ, ಪರಿಸರ, ಕೃಷಿ ಹಾಳಾಗಿದೆ. ಇಲ್ಲಿನ ನೈಸರ್ಗಿಕ ಸಂಪತ್ತು, ಪರಿಸರವನ್ನು ಇಂದಿನ ಮತ್ತು ಮುಂದಿನ ಪೀಳಿಗೆಗೂ ಉಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಿ, ವರದಿ ಸಿದ್ಧಪಡಿಸಿ ರಾಜ್ಯ, ಕೇಂದ್ರ ಸರ್ಕಾರಕ್ಕೆ ನೀಡುವುದಲ್ಲದೆ, ಸಾರ್ವಜನಿಕರಿಗೂ ನೀಡಲಾಗುವುದು ಎಂದು ತಿಳಿಸಿದರು.

ಶ್ವೇತಪತ್ರ ಹೊರಡಿಸಿ:

ಜಿಂದಾಲ್ ಕಂಪನಿಗೆ ೩೬೬೭ ಎಕರೆ ಜಮೀನನ್ನು ಮಾರಾಟ ಮಾಡಲು ನಿರ್ಧಾರ ತೆಗೆದುಕೊಂಡಿರುವ ಕಾಂಗ್ರೆಸ್, ಈ ಹಿಂದೆ ಈ ಕ್ರಮವನ್ನು ವಿರೋಧಿಸಿತ್ತು. ಈಗ ಸರ್ಕಾರದ ತೀರ್ಮಾನವನ್ನು ರೈತ ಸಂಘ ಖಂಡಿಸುತ್ತದೆ. ರಾಜ್ಯದಲ್ಲಿ ಕೈಗಾರಿಕೆಗಳಿಗೆ ಎಷ್ಟು ಭೂಮಿ ನೀಡಲಾಗಿದೆ? ಎಷ್ಟು ಭೂಮಿ ಬಳಕೆ ಮಾಡಲಾಗಿದೆ? ಎಷ್ಟು ಉದ್ಯೋಗ ಸೃಷ್ಟಿಯಾಗಿದೆ? ಎಂಬುದರ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಸವೋದಯ ಕರ್ನಾಟಕ ಪಕ್ಷದ ಮುಖಂಡ ಉಗ್ರ ನರಸಿಂಹೇಗೌಡ ಮಾತನಾಡಿ, ತಾಲೂಕಿನಲ್ಲಿ ಗಣಿಗಾರಿಕೆಯ ಮೂಲಕ ಪರಿಸರದ ಮೇಲೆ ವಿಕೃತಿ ಮೆರೆಯಲಾಗುತ್ತಿದೆ. ಅದಿರು ಲಾರಿಗಳು ಮುಕ್ಕಾಲು ರಸ್ತೆಯನ್ನು ಆಕ್ರಮಿಸಿಕೊಂಡಿರುತ್ತವೆ. ಈಗಿರುವ ಪ್ರಮಾಣದಲ್ಲಿ ಗಣಿಗಾರಿಕೆ ಮುಂದುವರಿದರೆ, ಇನ್ನು ೩೦ ವರ್ಷಗಳಲ್ಲಿ ಇಲ್ಲಿನ ಗುಡ್ಡಗಳೆಲ್ಲ ನೆಲಸಮವಾಗಿ, ಬೆಂಗಾಡು ಆಗಲಿದೆ ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ಬೇಡಿಕೆಗಿಂತ ಮೂರುಪಟ್ಟು ಹೆಚ್ಚು ಅದಿರನ್ನು ತೆಗೆಯಲಾಗುತ್ತಿದೆ. ಈಗ ಹೊರ ತೆಗೆಯಲಾಗುತ್ತಿರುವ ಅದಿರಿನ ಪ್ರಮಾಣದಲ್ಲಿಯೇ ವಿಶ್ವೇಶ್ವರಯ್ಯ ಕಂಪನಿ ಹಾಗೂ ಕುದುರೆಮುಖ ಗಣಿ ಕಂಪನಿಗೆ ಅದಿರನ್ನು ಪೂರೈಸಬಹುದಾಗಿದೆ. ಸಂಡೂರು ಒಂದು ನಾಗರಿಕತೆಯ ತೊಟ್ಟಿಲಾಗಿದೆ. ೨೦ ವರ್ಷದ ಹಿಂದೆ ಸ್ವಾವಲಂಬಿಗಳಾಗಿದ್ದ ರೈತರು ಇಂದು ಪರಾವಲಂಬಿಗಳಾಗಿದ್ದಾರೆ. ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದು ವಿವರಿಸಿದರು.

ಜನ ಸಂಗ್ರಾಮ ಪರಿಷತ್ ಮುಖಂಡ ಶ್ರೀಶೈಲ ಆಲ್ದಳ್ಳಿ ಮಾತನಾಡಿ, ಅದಿರಿನ ಉತ್ಪಾದನೆಯ ಮಿತಿ ಕಡಿಮೆ ಮಾಡಬೇಕಿದೆ. ಗಣಿಬಾಧಿತ ಪ್ರದೇಶದ ಪರಿಸರ ಪುನಶ್ಚೇತನಕ್ಕಾಗಿ ರಚಿಸಲಾಗಿರುವ ಕೆಎಂಇಆರ್‌ಸಿ ಅಲ್ಲಿ ಸಂಗ್ರಹವಾಗಿರುವ ಹಣವನ್ನು ಇಲ್ಲಿನ ಜನರ ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗಾಗಿ ರಾಜಕಾರಣಿಗಳ ಹಸ್ತಕ್ಷೇಪವಿಲ್ಲದೆ ಸದ್ಬಳಕೆ ಮಾಡಬೇಕಿದೆ ಎಂದು ತಿಳಿಸಿದರು.

ಜನ ಸಂಗ್ರಾಮ ಪರಿಷತ್ ರಾಜ್ಯ ಸಮಿತಿ ಅಧ್ಯಕ್ಷ ಟಿ.ಎಂ. ಶಿವಕುಮಾರ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಲ್.ಕೆ. ನಾಯ್ಡು, ಉಪಾಧ್ಯಕ್ಷ ವಿರೂಪಾಕ್ಷಪ್ಪ, ಮುಖಂಡರಾದ ಗೋಣಿ ಬಸಪ್ಪ, ಜಿ.ಕೆ. ನಾಗರಾಜ, ಜಿ. ಪರಮೇಶ್ವರಪ್ಪ, ವೀರೇಶ್, ಕಾಡಪ್ಪ, ಷಣ್ಮುಖಪ್ಪ, ಕಾಶಪ್ಪ, ಮಂಜುನಾಥ, ಸಯ್ಯದ್ ಹೈದರ್, ತಂಬ್ರಳ್ಳಿ ರವಿಕುಮಾರ್, ಮೌನೇಶ್ ಮತ್ತು ಉಪಸ್ಥಿತರಿದ್ದರು.

ಸಂಡೂರು ತಾಲೂಕಿನ ವಿವಿಧ ಗಣಿ ಭಾಗದ ಗ್ರಾಮಗಳಿಗೆ ಶನಿವಾರ ಸತ್ಯ ಶೋಧನ ಸಮಿತಿ ಮುಖಂಡರು ಭೇಟಿ ನೀಡಿ, ಜನರ ಸ್ಥಿತಿಗತಿಗಳ ಕುರಿತು ಜನರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದರು.