ಸಾತನೂರು ಫಾರ್ಮ್‌ನಲ್ಲಿ ಕಾಡಾಗೆ ಸೇರಿದ ಸರ್ವೇ ನಂ 257 ರಲ್ಲಿರುವ 90 ಎಕರೆ ಅಚ್ಚುಕಟ್ಟಾದ ಪ್ರದೇಶವಾಗಿದೆ. ಜಾಗವನ್ನು ಖಾಲಿ ಬಿಡುವುದಕ್ಕಿಂತ ಕೈಗಾರಿಕೆಗೆ ಮೀಸಲಿಡಬೇಕು. ಈ ಜಾಗಕ್ಕೆ ಕಾರ್ಖಾನೆಗಳು ಬರುವುದಾದರೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಕೈಗಾರಿಕೆಗೆ ಮೀಸಲಿಡಲು ನಿರ್ಧರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕಾದರೆ ಹೆಚ್ಚು ಕಾರ್ಖಾನೆಗಳು ಬರಬೇಕು. ಬಂಡವಾಳ ಹೂಡಿಕೆಗೆ ಬರುವ ಕಂಪನಿಗಳಿಗೆ ಜಾಗ ಕೊಡಲು ಸಿದ್ಧರಿದ್ದೇವೆ ಎಂದು ಶಾಸಕ ಪಿ.ರವಿಕುಮಾರ್‌ ದೃಢವಾಗಿ ಹೇಳಿದರು.

ಸೋಮವಾರ ಸಾತನೂರು ಫಾರ್ಮ್‌ನಲ್ಲಿ ಕಾಡಾಗೆ ಸೇರಿದ ಸರ್ವೇ ನಂ 257 ರಲ್ಲಿರುವ 90 ಎಕರೆ ಜಾಗವನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಜಾಗ ಅಚ್ಚುಕಟ್ಟಾದ ಪ್ರದೇಶವಾಗಿದೆ. ಜಾಗವನ್ನು ಖಾಲಿ ಬಿಡುವುದಕ್ಕಿಂತ ಕೈಗಾರಿಕೆಗೆ ಮೀಸಲಿಡಬೇಕು. ಈಗಾಗಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕೃಷಿ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಈ ಜಾಗಕ್ಕೆ ಕಾರ್ಖಾನೆಗಳು ಬರುವುದಾದರೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಕೈಗಾರಿಕೆಗೆ ಮೀಸಲಿಡಲು ನಿರ್ಧರಿಸಿದ್ದಾರೆ ಎಂದರು.

ಹಾಗಾಗಿ ಕಾಡಾಗೆ ಸೇರಿದ ಸ್ಥಳವನ್ನು ವೀಕ್ಷಣೆ ಮಾಡಿದ್ದೇನೆ. ಜಾಗವು ಉತ್ತಮವಾಗಿದ್ದು ಮೂರು ಕಡೆಯಿಂದ ರಸ್ತೆ ಸಂಪರ್ಕದಿಂದ ಕೂಡಿದೆ. ನೀರಿನ ಸೌಲಭ್ಯವು ಸೂಕ್ತವಾಗಿದ್ದು, ನಗರಕ್ಕೆ ಹೊಂದಿಕೊಂಡಂತೆ ಇದೆ. ವಿದೇಶಗಳಿಂದ ಬರುವ ಕಾರ್ಖಾನೆಗಳಿಗೆ ನೀಡಬೇಕಾದ ಎಲ್ಲಾ ಸೌಕರ್ಯಗಳು ಇಲ್ಲಿ ಲಭ್ಯವಿದೆ ಎಂದರು.

ಈ ಸರ್ವೇ ನಂಬರ್‌ನಲ್ಲಿ 90 ಎಕರೆ ಜಾಗವಿದ್ದು ಹೆಚ್ಚುವರಿ 10 ಎಕರೆ ಜಾಗವನ್ನು ಭೂಸ್ವಾಧೀನಗೊಳಿಸಲಾಗುವುದು. ಸಾವಿರ ಎಕರೆ ಅಗತ್ಯವಿದ್ದರೂ ಭೂಸ್ವಾಧೀನ ಮಾಡಿ ಜಾಗವನ್ನು ಕೈಗಾರಿಕೆ ಮೀಸಲಿಡುತ್ತೇವೆ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಡಾ ಕುಮಾರ, ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ, ಮಂಡ್ಯ ತಹಸೀಲ್ದಾರ್ ವಿಶ್ವನಾಥ್, ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಾಳೆ ಕರಡಿ ಕೊಪ್ಪಲಿನಲ್ಲಿ ಸಂಭ್ರಮಾಚರಣೆ

ಕನ್ನಡಪ್ರಭ ವಾರ್ತೆ ಮಂಡ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.೬ಕ್ಕೆ ರಾಜ್ಯದಲ್ಲಿ ಸುದೀರ್ಘ ಅವಧಿ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ನಿಮಿತ್ತ ಜನವರಿ ೭ ರಂದು ತಾಲೂಕಿನ ಕರಡಿಕೊಪ್ಪಲು ಗ್ರಾಮದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳಿಂದ ಸಂಭ್ರಮಾಚರಣೆ ಏರ್ಪಡಿಸಲಾಗಿದೆ ಎಂದು ಕೆಪಿಸಿಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಸಿ.ಪುಟ್ಟಸ್ವಾಮಿಗೌಡ ತಿಳಿಸಿದರು.

ಸಿದ್ದರಾಮಯ್ಯ ಅವರು ದಿವಂಗತ ದೇವರಾಜು ಅರಸು ಅವರ ದಾಖಲೆ ಸರಿಗಟ್ಟಿ, ಹೊಸ ದಾಖಲೆ ಬರೆದಿದ್ದಾರೆ. ಈ ಸಂಭ್ರಮದ ವಿಶೇಷ ದಿನವನ್ನು ಜ.೭ರ ಸಂಜೆ ೬ ಗಂಟೆಗೆ ಮಂಡ್ಯ ತಾಲೂಕಿನ ಕರಡಿಕೊಪ್ಪಲು ಗ್ರಾಮದಲ್ಲಿ ಆಚರಿಸಿ ಗ್ರಾಮಸ್ಥರಿಗೆ ಸಿಹಿ ಹಂಚಿ ಸಂಭ್ರಮಿಸಿ ಭೋಜನ ಕೂಟ ಏರ್ಪಡಿಸಿರುವುದಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಸಂಭ್ರಮ ಕಾರ್ಯಕ್ರಮಕ್ಕೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಗಣಿಗ, ಡಾ.ರಾಮ ಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ದಡದಪುರ ಶಿವಣ್ಣ, ಮೈಸೂರು-ಚಾಮರಾಜನಗರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮಿಗೌಡ, ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಎಲ್.ಸುರೇಶ್, ಮಂಡ್ಯ ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಮನ್‌ಮುಲ್ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ, ಮೈಸೂರು ಮಹಾನಗರ ಪಾಲಿಕೆ ಸದಸ್ಯ ಜೆ.ಗೋಪಿ, ಹೊಳೆನರಸೀಪುರ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಮಂಜೇಗೌಡ, ಚಲನಚಿತ್ರ ನಿರ್ಮಾಪಕ ಮಾವಿನಕೆರೆ ಸುರೇಶ್ ಇತರರು ಭಾಗವಹಿಸುವರು ಎಂದರು.

ಮುಖಂಡರಾದ ಕೆಂಚಪ್ಪ, ಅಶೋಕ್ ಇತರರು ಗೋಷ್ಠಿಯಲ್ಲಿದ್ದರು.