ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಅ. 31ರಂದು ಕರೆ ನೀಡಿರುವ ಕೊಪ್ಪಳ ಬಂದ್ ಯಶಸ್ವಿಗೊಳಿಸಬೇಕು ಎಂದು ಸಂಸದ ರಾಜಶೇಖರ ಹಿಟ್ನಾಳ ಮನವಿ ಮಾಡಿದರು.
ಕೊಪ್ಪಳ: ಜನರಿಗೆ ಸಮಸ್ಯೆಯನ್ನು ತಂದೊಡ್ಡುವ ಕಾರ್ಖಾನೆಗಳು ಬೇಡವೇ ಬೇಡ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.
ನಗರಸಭೆ ಆವರಣದಲ್ಲಿ ನಡೆಯುತ್ತಿರುವ 362ನೇ ದಿನದ ಬಲ್ಡೋಟ ವಿರೋಧಿ ಹೋರಾಟಕ್ಕೆ ಬೆಂಬಲ ಸೂಚಿಸಿ ಅವರು ಮಾತನಾಡಿದರು. ಕಾರ್ಖಾನೆಗಳಿಂದ ತೊಂದರೆ ಅನುಭವಿಸುತ್ತಿರುವ 22 ಗ್ರಾಮಗಳ ಜನರ ಜೀವ ಉಳಿಸಬೇಕು. ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು. ತುಂಗಭದ್ರಾ ಜಲಾಶಯದ ನದಿ ನೀರನ್ನು ವಿಷಮಯಗೊಳಿಸುತ್ತಿರುವ ಕಾರ್ಖಾನೆಗಳನ್ನು ಸೀಜ್ ಮಾಡಬೇಕು ಎಂದು ಆಗ್ರಹಿಸಿದರು.ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಅ. 31ರಂದು ಕರೆ ನೀಡಿರುವ ಕೊಪ್ಪಳ ಬಂದ್ ಯಶಸ್ವಿಗೊಳಿಸಬೇಕು. ಶೀಘ್ರದಲ್ಲೇ ಮುಖ್ಯಮಂತ್ರಿಗಳ ಭೇಟಿಗೆ ದಿನಾಂಕ ನಿಗದಿಪಡಿಸಲು ಪ್ರಯತ್ನಿಸುತ್ತೇನೆ. ಈ ಕುರಿತು ಸಚಿವರು ಹಾಗೂ ಶಾಸಕರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಜನರಿಗೆ ಬೇಡವಾದರೆ ನಮಗೂ ಬೇಡ. ಜನರು ಈ ಹೋರಾಟದಲ್ಲಿ ಗಟ್ಟಿಯಾಗಿ ನಿಲ್ಲಬೇಕು. ಸರ್ಕಾರ ನಮ್ಮದೇ ಆಗಿದ್ದರೂ ಸಮಸ್ಯೆ ಬಗೆಹರಿಸಲು ಒಂದು ಮಾರ್ಗವಿದೆ. ಸರ್ಕಾರ ತನ್ನ ಕೆಲಸ ಮಾಡುತ್ತಿದೆ; ನಾವು ಹೋರಾಟದ ಮೂಲಕ ಬಲ್ಡೋಟ ಕಾರ್ಖಾನೆ ತೆರವಿಗೆ ಪ್ರಯತ್ನಿಸೋಣ ಎಂದರು.ಮಾಲಿನ್ಯ ನಿಯಂತ್ರಣವಾಗಲಿ: ಹೋರಾಟದ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಕಾರ್ಖಾನೆಗಳಿಂದ ಬಾಧಿತವಾಗಿರುವ 22 ಗ್ರಾಮಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತಕ್ಷಣವೇ ಕಾರ್ಖಾನೆಗಳನ್ನು ಮುಚ್ಚಿ ಮಾಲಿನ್ಯ ತಡೆಯಬೇಕು ಎಂದು ಆಗ್ರಹಿಸಿದರು.
ಗವಿಮಠದ ಶ್ರೀಗಳು ಹೇಳಿದ ಮಾತುಗಳನ್ನು ಉಲ್ಲೇಖಿಸಿದ ಅವರು, ಜಪಾನ್, ಜರ್ಮನಿ ತಂತ್ರಜ್ಞಾನ ಅಳವಡಿಸುವುದಾಗಿ ಪದೇ ಪದೇ ಹೇಳಲಾಗುತ್ತಿದೆ. ಆದರೆ, ಕಳೆದ 20 ವರ್ಷಗಳಲ್ಲಿ ಅದನ್ನು ಸಮರ್ಪಕವಾಗಿ ಅಳವಡಿಸದಿರುವುದೇಕೆ? ತುಂಗಭದ್ರಾ ನದಿ ವಿಷಮಯವಾಗುವುದರಲ್ಲಿ ಈ ಕಾರ್ಖಾನೆಗಳ ಪಾತ್ರವೂ ದೊಡ್ಡದಿದೆ. ತುಂಗಭದ್ರಾ ನದಿ ಹರಿಯುವ ಜಿಲ್ಲೆಗಳ ರೈತರು ಈ ಹೋರಾಟಕ್ಕೆ ತೀವ್ರವಾಗಿ ಧುಮುಕಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೊಲಗಳು ಬರಡು ಆಗಲಿದೆ. ವಿಷಪೂರಿತ ನೀರಿನಿಂದ ಬೆಳೆಗಳೂ ವಿಷಮಯವಾಗಲಿವೆ ಎಂದು ಎಚ್ಚರಿಸಿದರು.ಹೋರಾಟದಿಂದ ದಿಟ್ಟ ಉತ್ತರ ನೀಡೋಣ: ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ ಮಾತನಾಡಿ, ಕಾರ್ಖಾನೆಗಳಿಂದ ಬಾಧಿತ ಗ್ರಾಮಗಳಲ್ಲಿ ಬೆದರಿಕೆ ಹಾಗೂ ದಬ್ಬಾಳಿಕೆ ನಡೆಯುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಪರಿಸರ ಹಾಳುಮಾಡಿ ಜನರ ಮೇಲೆ ಹಲ್ಲೆ ನಡೆಸಿದರೆ ಹೋರಾಟದ ಮೂಲಕ ತಕ್ಕ ಉತ್ತರ ನೀಡೋಣ. ಧೈರ್ಯದಿಂದ ಒಗ್ಗಟ್ಟಾಗಿ ನಿಂತು ಪರಿಸ್ಥಿತಿ ಎದುರಿಸೋಣ ಎಂದು ಕರೆ ನೀಡಿದರು.
ಸಂಚಾಲಕರಾದ ಮಂಜುನಾಥ ಜಿ. ಗೊಂಡಬಾಳ, ನಟರಾಜ ಸವಡಿ, ಡಿ.ಎಂ. ಬಡಿಗೇರ, ರವಿ ಕಾಂತನವರ, ಸಂತೋಷ ದೇಶಪಾಂಡೆ, ಶಿವಕುಮಾರ ಕುಕನೂರು, ರಮೇಶ ತುಪ್ಪದ, ಶಂಭುಲಿಂಗಪ್ಪ ಹರಗೇರಿ, ರಾಜಶೇಖರ ಏಳಬಾವಿ ಉಪಸ್ಥಿತರಿದ್ದರು.