ಪಕ್ಷಿವೀಕ್ಷಣೆಯಲ್ಲಿ ಪರಿಣತಿ ಹೊಂದಿರಬೇಕೆಂಬ ಕಡ್ಡಾಯವಿಲ್ಲ. ಆರಂಭಿಕ ಪಕ್ಷಿವೀಕ್ಷಕರಿಂದ ಹಿಡಿದು ಅನುಭವಿ ಪಕ್ಷಿಪ್ರೇಮಿಗಳವರೆಗೆ ಕರ್ನಾಟಕದ ಯಾವುದೇ ಭಾಗದ ಸಾರ್ವಜನಿಕರು ಈ ಗಣತಿಯಲ್ಲಿ ಪಾಲ್ಗೊಳ್ಳಬಹುದು.
ಕಾರವಾರ: ಕರ್ನಾಟಕ ರಾಜ್ಯೋತ್ಸವದ ಸಂಭ್ರಮಕ್ಕೆ ಪ್ರಕೃತಿಯ ಸೊಬಗನ್ನು ಬೆಸೆಯುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ‘ಕರ್ನಾಟಕ ರಾಜ್ಯೋತ್ಸವ ಪಕ್ಷಿ ಗಣತಿ 2026’ ಅಭಿಯಾನವನ್ನು ಅ. 30ರಿಂದ ನವೆಂಬರ್ 2ರ ವರೆಗೆ ರಾಜ್ಯಾದ್ಯಂತ ಆಯೋಜಿಸಲಾಗಿದೆ. ಕರ್ನಾಟಕ ಪಕ್ಷಿ ಮೇಲ್ವಿಚಾರಣಾ ಜಾಲ ಸೇರಿದಂತೆ ಪಕ್ಷಿವೀಕ್ಷಕ ಸಮುದಾಯದ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪಕ್ಷಿಪ್ರೇಮಿಗಳು, ಪ್ರಕೃತಿ ಆಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಬಹುದು.
ಪಕ್ಷಿಗಳ ಪ್ರಭೇದಗಳು, ಅವುಗಳ ವಾಸಸ್ಥಾನ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಅವುಗಳ ಇರುವಿಕೆಯ ಕುರಿತು ವೈಜ್ಞಾನಿಕ ದತ್ತಾಂಶ ಸಂಗ್ರಹಿಸಲು ಈ ಕಾರ್ಯಕ್ರಮ ನೆರವಾಗಲಿದೆ. ಪಕ್ಷಿವೀಕ್ಷಣೆಯಲ್ಲಿ ಪರಿಣತಿ ಹೊಂದಿರಬೇಕೆಂಬ ಕಡ್ಡಾಯವಿಲ್ಲ. ಆರಂಭಿಕ ಪಕ್ಷಿವೀಕ್ಷಕರಿಂದ ಹಿಡಿದು ಅನುಭವಿ ಪಕ್ಷಿಪ್ರೇಮಿಗಳವರೆಗೆ ಕರ್ನಾಟಕದ ಯಾವುದೇ ಭಾಗದ ಸಾರ್ವಜನಿಕರು ಈ ಗಣತಿಯಲ್ಲಿ ಪಾಲ್ಗೊಳ್ಳಬಹುದು.ಭಾಗವಹಿಸುವವರು ಕನಿಷ್ಠ 15 ನಿಮಿಷಗಳ ಕಾಲ ಪಕ್ಷಿಗಳನ್ನು ವೀಕ್ಷಿಸಿ, ದೃಷ್ಟಿ ಅಥವಾ ಧ್ವನಿಯ ಮೂಲಕ ಗುರುತಿಸಿದ ಪಕ್ಷಿಗಳ ಹೆಸರು ಮತ್ತು ಸಂಖ್ಯೆಯನ್ನು ದಾಖಲಿಸಬೇಕು. ಈ ಪಟ್ಟಿಯನ್ನು eBird ಮೊಬೈಲ್ ಆ್ಯಪ್ ಮೂಲಕ ಸಿದ್ಧಪಡಿಸಿ ಅಪ್ಲೋಡ್ ಮಾಡಬೇಕು. ಅ. 30 ರಿಂದ ನ. 2ರ ಅವಧಿಯಲ್ಲಿ ಯಾವುದೇ ಒಂದು ದಿನ ಅಥವಾ ನಾಲ್ಕೂ ದಿನ ಪಕ್ಷಿವೀಕ್ಷಣೆ ನಡೆಸಲು ಅವಕಾಶವಿದೆ. ಬೆಳಗ್ಗೆ, ಸಂಜೆ ಹಾಗೂ ರಾತ್ರಿ ವೇಳೆಯಲ್ಲಿಯೂ ಪಕ್ಷಿಗಳನ್ನು ದಾಖಲಿಸಬಹುದು. ಪಾಲ್ಗೊಳ್ಳುವವರನ್ನು ಉತ್ತೇಜಿಸಲು ಈ ಬಾರಿ 3 ವಿಶೇಷ ಸವಾಲುಗಳನ್ನು ರೂಪಿಸಲಾಗಿದೆ.
ಮೊದಲ ಸವಾಲಿನಲ್ಲಿ ಕರ್ನಾಟಕದ 30 ಜಿಲ್ಲೆಗಳ ಪೈಕಿ ಸಾಧ್ಯವಾದಷ್ಟು ಹೆಚ್ಚು ಜಿಲ್ಲೆಗಳಲ್ಲಿ ಪಕ್ಷಿ ಗಣತಿ ನಡೆಸಬೇಕು. ಒಂದು ಜಿಲ್ಲೆಯನ್ನು ಅರ್ಹವೆಂದು ಪರಿಗಣಿಸಲು ಅಲ್ಲಿ ಕನಿಷ್ಠ 15 ನಿಮಿಷಗಳ ಅವಧಿಯ 4 ಸಂಪೂರ್ಣ ಪಕ್ಷಿ ಪಟ್ಟಿಗಳನ್ನು ದಾಖಲಿಸಿರಬೇಕು. ಎರಡನೇ ಸವಾಲು ಕಡಿಮೆ ಪಕ್ಷಿ ದಾಖಲೆಗಳಿರುವ ಜಿಲ್ಲೆಗಳಿಗೆ ಆದ್ಯತೆ ನೀಡುವುದಾಗಿದೆ. ಗಣತಿ ಆರಂಭದ ವೇಳೆಗೆ 10,000ಕ್ಕಿಂತ ಕಡಿಮೆ ಸಂಪೂರ್ಣ ಪಕ್ಷಿ ಪಟ್ಟಿಗಳು ದಾಖಲಾಗಿರುವ ಜಿಲ್ಲೆಗಳು ಈ ಸವಾಲಿಗೆ ಅರ್ಹವಾಗಿವೆ.ಮೂರನೇ ಸವಾಲಿನಲ್ಲಿ ಪಕ್ಷಿಗಳ ದಾಖಲೆಗಳಿಲ್ಲದ ಪ್ರದೇಶಗಳನ್ನು ಗುರುತಿಸಿ ಗಣತಿ ನಡೆಸುವುದಕ್ಕೆ ಆದ್ಯತೆ ನೀಡಲಾಗಿದೆ. ನ. 10ರೊಳಗೆ ಪಟ್ಟಿಗಳ ಅಪ್ಲೋಡ್ ಕಡ್ಡಾಯ
ಅ. 30ರಿಂದ ನ. 2, 2026ರ ಅವಧಿಯಲ್ಲಿ ನಡೆಸಿದ ಪಕ್ಷಿವೀಕ್ಷಣೆಯ ಪಟ್ಟಿಗಳನ್ನು ನ. 10, 2026ರೊಳಗೆ ಅಪ್ಲೋಡ್ ಮಾಡಬೇಕು. ಕರ್ನಾಟಕದ ಹೊರಗೆ ಪಕ್ಷಿವೀಕ್ಷಣೆ ನಡೆಸುವವರು ತಮ್ಮ ಪಟ್ಟಿಗಳನ್ನು eBird ಬಳಕೆದಾರ ಐಡಿ ‘karnatakabirdcount’ ಜತೆ ಹಂಚಿಕೊಳ್ಳಬಹುದು.ವೀಕ್ಷಣೆಯ ಸಂದರ್ಭದಲ್ಲಿ ದೃಷ್ಟಿ ಅಥವಾ ಧ್ವನಿಯ ಮೂಲಕ ಗುರುತಿಸಲು ಸಾಧ್ಯವಾದ ಎಲ್ಲ ಪಕ್ಷಿಗಳನ್ನು ಅವುಗಳ ಸಂಖ್ಯೆಯೊಂದಿಗೆ ಸಾಧ್ಯವಾದಷ್ಟು ನಿಖರವಾಗಿ ದಾಖಲಿಸಿರುವ ಪಟ್ಟಿಯನ್ನು ‘ಸಂಪೂರ್ಣ ಪಕ್ಷಿ ಪಟ್ಟಿ’ ಎಂದು ಪರಿಗಣಿಸಲಾಗುತ್ತದೆ.
ರಾಜ್ಯದ ಪಕ್ಷಿ ವೈವಿಧ್ಯವನ್ನು ಗುರುತಿಸುವುದು, ಜೀವವೈವಿಧ್ಯ ಸಂರಕ್ಷಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವುದು ಹಾಗೂ ಪಕ್ಷಿಗಳ ಕುರಿತು ದೀರ್ಘಕಾಲಿಕ ವೈಜ್ಞಾನಿಕ ದತ್ತಾಂಶ ಸಂಗ್ರಹಿಸುವುದು ಈ ಅಭಿಯಾನದ ಆಶಯವಾಗಿದೆ.ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿ ಹಾಗೂ ಮಾರ್ಗದರ್ಶನದ ವಿಡಿಯೊಗಳಿಗಾಗಿ https://birdcount.in/event/krbc/ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ವಿಘ್ನೇಶ ಭಟ್ ಅವರ ಮೊ. 9035237091 ಅಥವಾ karnatakabirdcount@gmail.com ಮೂಲಕ ಸಂಪರ್ಕಿಸಬಹುದು ಪ್ರಕಟಣೆ ತಿಳಿಸಿದೆ.