ಕೊಪ್ಪಳ: ನಿಮ್ಮೆಲ್ಲರನ್ನು ನೋಡಿದರೇ ಸಂಕಟವಾಗುತ್ತದೆ.ಮನೆಯ ಮಕ್ಕಳು ಅಂಗಳದಲ್ಲಿ ಗಲೀಜು ಮಾಡಿಕೊಂಡು ಬಂದರೇ ಬೈಯುತ್ತೇವೆ.ಆದರೆ, ಮನೆಯಲ್ಲಿಯೇ ಗಲೀಜಾಗುವಂತಹ ಸ್ಥಿತಿ ಇರುವುದು ನೋಡಲು ಆಗುತ್ತಿಲ್ಲ ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.

ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮಕ್ಕೆ ಬಿಜೆಪಿ ನಿಯೋಗದೊಂದಿಗೆ ಭೇಟಿ ನೀಡಿದ್ದ ಅವರು, ಗ್ರಾಮಸ್ಥರನ್ನುದ್ಧೇಶಿಸಿ ಮಾತನಾಡಿದರು.

ಈ ಹಿಂದೆ ಹಿರಿಯರು ನಮ್ಮೂರ ಬಳಿ ಕಾರ್ಖಾನೆ ಬಂದರೇ ಅನುಕೂಲವಾಗುತ್ತದೆ.ಉದ್ಯೋಗ ಸಿಗುತ್ತದೆ ಎಂದು ಭೂಮಿ ಕೊಟ್ಟಿದ್ದಾರೆ.ನಾಯಕರು ಸಹ ಆ ದಿಸೆಯಲ್ಲಿ ಚರ್ಚಿಸಿದ್ದಾರೆ. ಆದರೆ, ದುರಂತ ನೋಡಿ ಇಂದು ಇಲ್ಲಿಯ ಪರಿಸ್ಥಿತಿ ಯಾರಿಗೂ ಬರಬಾರದು ಎನ್ನುವಂತಾಗಿದೆ.ಕಾರ್ಖಾನೆಯ ಧೂಳಿನಿಂದ ಜನ,ಜಾನುವಾರು ಮತ್ತು ಭೂಮಿಯ ಆರೋಗ್ಯವೂ ಹಾಳಾಗಿದೆ. ಇಂಥ ಸ್ಥಿತಿಯಲ್ಲಿ ನಾವು ಇಲ್ಲಿ ಬದುವುದು ಅಸಾಧ್ಯವಾಗಿದೆ ಎಂದರು.

ಕೇಂದ್ರ ಕೈಗಾರಿಕೆ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ,ನಾವು ಸಹ ಎಲ್ಲವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ. ಕೇಂದ್ರದಿಂದ ಏನು ಪರಿಹಾರ ಕಂಡುಕೊಳ್ಳಬೇಕು ಎನ್ನುವುದನ್ನು ಮಾಡುವಂತೆ ಮನವಿ ಮಾಡುತ್ತೇವೆ ಎಂದರು.

ರಾಜ್ಯ ಸರ್ಕಾರ ಕ್ರಮಕೈಗೊಳ್ಳುವ ಅಧಿಕಾರ ಇದ್ದರೂ ಸಹ ಈ ಜನರ ನೋವಿಗೆ ಸ್ಪಂದಿಸುತ್ತಿಲ್ಲ. ವಿಪ ಸದಸ್ಯೇ ಹೇಮಲತಾ ನಾಯಕ ವಿಧಾನಪರಿಷತ್ ನಲ್ಲಿ ಹಲವಾರು ಬಾರಿ ಪ್ರಶ್ನೆ ಮಾಡಿದ್ದಾರೆ. ಆದರೂ ಸಹ ಸರ್ಕಾರ ಸ್ಪಂದಿಸಿಲ್ಲ ಎಂದು ದೂರಿದರು.


ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ,ನಾನು ಹಲವಾರು ಬಾರಿ ಪ್ರಶ್ನೆ ಮಾಡಿದ್ದೇನೆ.ಆದರೂ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ.ಸರಿಯಾದ ಉತ್ತರ ನೀಡುತ್ತಿಲ್ಲ ಎಂದು ಕಣ್ಣೀರು ಹಾಕಿದರು.

ಐಐಎಸ್ ಇ ಸಂಸ್ಥೆಯಿಂದ ಅಧ್ಯಯನ ಮಾಡಿಸುವಂತೆ ಆಗ್ರಹಿಸಿದ್ದೇವೆ. ಕೈಗಾರಿಕಾ ಸಚಿವರು ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿಗಳು ಸಹ ಕೊಪ್ಪಳ ಧೂಳಿನ ಗೋಳಿಗೆ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.

ಈ ಹಿಂದೆ ಹಿರೇಬಗನಾಳ ಗ್ರಾಮದಲ್ಲಿ ರೈತರ ದೊಡ್ಡ ಹೋರಾಟ ನಡೆದಿದೆ. ರೈತರು ಇಡೀ ಸರ್ಕಾರವೇ ಎಚ್ಚೆತ್ತುಕೊಳ್ಳುವಂತೆ ಹೋರಾಟ ಮಾಡಿದ್ದಾರೆ. ಆಗಲೂ ನಾನು ಇಲ್ಲಿಗೆ ಬಂದಿದ್ದೇನೆ. ಅದಾದ ನಂತರ ಈಗ ವಿಪ ಸದಸ್ಯೆಯಾದ ಮೇಲೆ ಕಾರ್ಖಾನೆಯ ಸಮಸ್ಯೆಯ ಕುರಿತು ಅನೇಕ ಭಾರಿ ಭೇಟಿ ನೀಡಿದ್ದೇನೆ, ಇದೆಲ್ಲವನ್ನು ಸರ್ಕಾರ ಅಧಿವೇಶನದಲ್ಲಿ ಪ್ರಶ್ನೆ ಮಾಡಿದ್ದೇನೆ. ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಬಿಜೆಪಿ ರಾಜ್ಯ ಕೋರ್ ಕಮಿಟಿ ಸದಸ್ಯ ಡಾ.ಬಸವರಾಜ ಕ್ಯಾವಟರ ಮಾತನಾಡಿ, ರಾಜ್ಯ ಸರ್ಕಾರ ಕೂಡಲೇ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಜನರು ತೀವ್ರ ಸಂಕಷ್ಟದಲ್ಲಿದ್ದರೂ ಕೈಗಾರಿಕೆಗಳ ಮೇಲೆ ಕ್ರಮಕೈಗೊಳ್ಳದೇ ಇದ್ದರೆ ಹೇಗೆ ಎಂದು ಕಿಡಿಕಾರಿದರು.

ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಗಣೇಶ ಹೊರತಟ್ನಾಳ, ವೀರೇಶ ಸಜ್ಜನ ಸೇರಿದಂತೆ ಅನೇಕರು ಇದ್ದರು.