ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ಕೃಷಿಗೆ ಬಳಸುವ ಯೂರಿಯಾ ಗೊಬ್ಬರದಿಂದ ನಕಲಿ ಆ್ಯಡ್ ಬ್ಲೂ ಆಯಿಲ್ ತಯಾರು ಮಾಡುತಿದ್ದ ಫ್ಯಾಕ್ಟರಿಯೊಂದರ ಮೇಲೆ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ಕೃಷಿ ಅಧಿಕಾರಿಗಳು ದಾಳಿ ನಡೆಸಿ ನಕಲಿ ಮಾಲು ವಶಪಡಿಸಿಕೊಂಡು ದಂಧೆಕೋರರ ವಿರುದ್ಧ ಎಫ್.ಐ.ಆರ್ ದಾಖಲಿಸಿದ ಘಟನೆ ನಗರ ಹೊರವಲಯದ ಚದಲಪುರ ಕ್ರಾಸ್ ಬಳಿ ನಡೆದಿದೆ.ಚದಲಪುರ ಕ್ರಾಸ್ ಬಳಿ ನಕಲಿ ಆ್ಯಡ್ ಬ್ಲೂ ಆಯಿಲ್ ತಯಾರು ಮಾಡುತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭಾನುವಾರ ರಾತ್ರಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಈ ಗೋದಾಮಿನಲ್ಲಿ ಕ್ಯಾನ್‌ಗಳಿಗೆ ಬ್ರಾಂಡೆಡ್ ಲೇಬಲ್‌ಗಳನ್ನು ಅಂಟಿಸಿ ಮಾರಾಟಕ್ಕೆ ಸಿದ್ಧಪಡಿಸಲಾಗುತ್ತಿತ್ತು. ಕಡಿಮೆ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಪರಾರಿಯಾಗಿದ್ದು ಅವರು ಹೊರ ರಾಜ್ಯಗಳಿಂದ ಯೂರಿಯಾವನ್ನು ಇಲ್ಲಿಗೆ ತರಿಸಿಕೊಂಡು ಈ ದಂಧೆ ನಡೆಸುತಿದ್ದರು ಎನ್ನಲಾಗಿದೆ.ಮುಖ್ಯವಾಗಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತ್ ಕಂಪನಿಗಳಾದ ಶ್ರೀರಾಮ್ ಫರ್ಟಿಲೈಸರ್ ಅಂಡ್ ಕೆಮಿಕಲ್ಸ್, ಜಿಎಂಎಫ್‌ಸಿಯ ಸುಮಾರು 250 ಕೃಷಿಗೆ ಉಪಯೋಗಿಸುವ ಯೂರಿಯ ಚೀಲಗಳು ದೊರೆತಿದ್ದು, ಇವುಗಳನ್ನು ಉಪಯೋಗಿಸಿ ನಕಲಿ ಆಯಿಲ್ ತಯಾರಿಸಿ, ಅದಕ್ಕೆ ಪ್ರಮುಖ ಕಂಪನಿಗಳ ಸ್ಟಿಕರ್ ಗಳನ್ನು ಬಳಸುತ್ತಿದ್ದರು.
ನಕಲಿ ಆಯಿಲ್ ಡಬ್ಬಗಳು, ಆಯಿಲ್ ತಯಾರಿಸಲು ಬಳಸುತಿದ್ದ ಫಿಲ್ಟರ್, ಯೂರಿಯಾ ಗೊಬ್ಬರದ ಚೀಲಗಳು, ಟ್ಯಾಂಕರ್ ಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಆಯಿಲ್ ಕಂಪನಿಗೆ ಕಟ್ಟಡ ಬಾಡಿಗೆಗೆ ನೀಡಿದ್ದ ಮಾಲೀಕ ಉಮೇಶ್ ಅವರ ಬಳಿ ಇರುವ ಅಗ್ರಿಮೆಂಟ್ ಕಾಗದಗಳು ಮತ್ತಿತರ ದಾಖಲೆಗಳ ವಶಕ್ಕೆ ಪಡೆದಿದ್ದಾರೆ.
ಇನ್ನು ಇದೇ ತರಹದ ಕಂಪನಿಗಳು ಬೇರೆ ಎಲ್ಲಾದರೂ ಇದ್ದರೆ ನಡೆಯುತ್ತಿವೆಯಾ? ಎಂಬುದರ ಬಗ್ಗೆ ತಲಾಶ್ ನಡೆಸಿರುವ ತಹಸೀಲ್ದಾರ್ ರಶ್ಮಿ ಮತ್ತು ಉಪವಿಬಾಗಾಧಿಕಾರಿ ಅಶ್ವಿನ್ ಮಾತನಾಡಿ, ನಮ್ಮಲ್ಲಿ ಈ ಸದ್ಯ ಯೂರಿಯಾ ಕೊರತೆ ಇಲ್ಲ. ಇಲ್ಲಿ ಬಳಸಿರುವ ಯೂರಿಯಾ ನಮ್ಮ ರಾಜ್ಯದ್ದಾ ಅಥವಾ ಹೊರ ರಾಜ್ಯದ್ದಾ ಎಂಬುದನ್ನನ್ನು ಖಾತ್ರಿಪಡಿಸಿಕೊಳ್ಳಲು ಸ್ಯಾಂಪಲ್ ಅನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ತಿಳಿಸಿದರು.
ಸಿಕೆಬಿ-4 ನಗರ ಹೊರವಲಯದ ಚದಲಪುರ ಕ್ರಾಸ್ ಬಳಿ ನಕಲಿ ಆ್ಯಡ್ ಬ್ಲೂ ಆಯಿಲ್ ತಯಾರು ಮಾಡುತಿದ್ದ ಗೋದಾಮಿನ ಮೇಲೆ ದಾಳಿ.ಸಿಕೆಬಿ-5 ಬ್ರಾಂಡ್ ಹೆಸರಲ್ಲಿ ತಯಾರಾಗಿರುವ ನಕಲಿ ಆಯಿಲ್ ಡಬ್ಬಿಗಳು.
ಸಿಕೆಬಿ-6 ಬ್ರಾಂಡ್ ಹೆಸರಲ್ಲಿ ತಯಾರಾಗಿರುವ ನಕಲಿ ಆಯಿಲ್ ಲೇಬಲ್ ಗಳು