ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಅಧ್ಯಾಪಕ ನಿರಂತರ ವಿದ್ಯಾರ್ಥಿಯಾಗಿ ನಿತ್ಯ ಓದುವ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ತನ್ನ ಬೋಧನಾ ಕೌಶಲ್ಯವನ್ನು ವೃದ್ಧಿಸಿಕೊಳ್ಳುವಂತೆ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಪಿ.ಹರೀಶ್ ಕರೆ ನೀಡಿದರು.ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಕೊಡುಗೆಯನ್ನು ಸ್ಮರಿಸಿದರು.

ಆದಿಚುಂಚನಗಿರಿಯನ್ನು ವಿಶ್ವ ಮಟ್ಟಕ್ಕೆ ಎತ್ತರಿಸಿದ ಕೀರ್ತಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳಿಗೆ ಸಲ್ಲುತ್ತದೆ. ಭೈರವೈಕ್ಯ ಶ್ರೀಗಳ ಶಿಷ್ಯರಾಗಿ ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡರು ಬಿಜಿಎಸ್ ಶಿಕ್ಷಣ ಸಂಸ್ಥೆಗಳನ್ನು ರಾಜ್ಯಾದ್ಯಂತ ವಿಸ್ತರಿಸಿ ಕಟ್ಟಿ ಬೆಳೆಸಿ ಶ್ರೀಮಠದ ಕೀರ್ತಿಯನ್ನು ಮತ್ತಷ್ಟು ಪಸರಿಸುತ್ತಿದ್ದಾರೆ ಎಂದರು.

ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರೆ ಸಾಲದು. ಶಿಕ್ಷಕರ ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸವಾಗಬೇಕು. ಪ್ರತಿವರ್ಷ ಬಿಜಿಎಸ್ ಮಾದರಿಯಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರ ವೃತ್ತಿ ಕೌಶಲ್ಯವನ್ನು ಹೆಚ್ಚಿಸುವ ಶೈಕ್ಷಣಿಕ ಕಾರ್ಯಾಗಾರಗಳ ಅಗತ್ಯತೆಯಿದೆ ಎಂದರು.

ಸಮಾಜವನ್ನು ತಿದ್ದುವುದು ಕಷ್ಟದ ಕೆಲಸ. ಆದರೆ, ಶಿಕ್ಷಕರು ಸಮಾಜವನ್ನು ತಿದ್ದಬಹುದು. ಶಿಕ್ಷಕರು ತಮ್ಮ ನಡೆ, ನುಡಿ ಮತ್ತು ಬೋಧನಾ ಕೌಶಲ್ಯದ ಮೂಲಕ ವಿದ್ಯಾರ್ಥಿಗಳಿಗೆ ರೋಲ್ ಮಾಡಲ್ ಗಳಾಗಬೇಕು. ಕಲಿತ ವಿದ್ಯಾರ್ಥಿಗಳನ್ನು ಸಮಾಜದ ಆಸ್ತಿಯನ್ನಾಗಿಸುವ ಶಕ್ತಿ ಶಿಕ್ಷಕರಿಗಿದೆ ಎಂದರು.


ಪ್ರತಿಯೊಬ್ಬ ಶಿಕ್ಷಕನೂ ವಿದ್ಯಾರ್ಥಿ ಜೀವನವನ್ನು ದಾಟಿ ಬಂದಿದ್ದಾನೆ. ತಾಯಿಯ ಪರಿಶ್ರಮವನ್ನು ಮಕ್ಕಳು ಅರಿಯಬೇಕು. ಅದರಂತೆ ಶಿಕ್ಷಕರ ಪರಿಶ್ರಮವನ್ನು ವಿದ್ಯಾರ್ಥಿಗಳು ತಿಳಿಯಬೇಕು. ಶಿಕ್ಷಕ ತಾನು ಕಲಿತಿರುವುದನ್ನು ಮಕ್ಕಳಿಗೆ ಧಾರೆ ಎರೆಯಬೇಕು. ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ಆತ್ಮ ಸ್ಥೈರ್ಯವನ್ನು ತುಂಬೇಕು. ಆದರ್ಶ ಶಿಕ್ಷಕರು ಸಮಾಜದ ದಾರಿ ದೀಪಗಳಾಗಿದ್ದಾರೆ ಎಂದರು.

ಶಿಕ್ಷಣ ಕ್ಷೇತ್ರದಲಿಂದು ಸಾಕಷ್ಟು ಬದಲಾವಣೆಗಳಾಗಿವೆ. ಜಾಗತಿಕ ಬದಲಾವಣೆಗೆ ತಕ್ಕಂತೆ ಶಿಕ್ಷಣ ಕ್ಷೇತ್ರದಲ್ಲೂ ಹೊಸತನ ಕಾಣಿಸಿಕೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆಗಳಿಗೆ ತಕ್ಕಂತೆ ಶಿಕ್ಷಕರ ಬೋಧನಾ ವಿಧಾನಗಳಲ್ಲೂ ಬದಲಾವಣೆಯಾಗಬೇಕು ಎಂದರು.

ಅಂಕಗಳ ಮೇಲೆ ಇಂದು ಮಕ್ಕಳ ಪ್ರತಿಭೆಯನ್ನು ಅಳೆಯಲಾಗುತ್ತಿದೆ. ಆದರೆ, ವಿದ್ಯಾರ್ಥಿಗಳು ಗಳಿಸಿದ ಅಂಕಗಳ ಮೇಲೆ ಅವರ ಬದುಕು ನಿರ್ಧಾರವಾಗುವುದಿಲ್ಲ. ಕಲಿಕೆ ಮುಗಿದ ನಂತರ ಸಮಾಜದ ಮುಖ್ಯವಾಹಿನಿಗೆ ಬರುವ ಮಕ್ಕಳು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಅಗತ್ಯವಾದ ಆತ್ಮಸ್ಥೈರ್ಯವನ್ನು ಶಿಕ್ಷಕರು ತುಂಬಬೇಕು ಎಂದರು.

ಶಿಸ್ತು ಮತ್ತು ಮೌಲ್ಯಯುತ ವ್ಯಕ್ತಿಗಳ ನಿರ್ಮಾಣ ಶಿಕ್ಷಣದ ಮುಖ್ಯ ಗುರಿಯಾಗಬೇಕು. ಸಂಸ್ಕಾರವಂತ ವಿದ್ಯಾರ್ಥಿಗಳನ್ನು ರೂಪುಗೊಳಿಸುವ ಕೆಲಸಕ್ಕೆ ಶಿಕ್ಷಕರು ಹೆಚ್ಚು ಒತ್ತು ನೀಡಬೇಕು. ಮಕ್ಕಳಿಗೆ ಪಠ್ಯದ ಜೊತೆಗೆ ಮೌಲ್ಯಯುಯ ಶಿಕ್ಷಣ ನೀಡುವಂತೆ ಡಾ.ಪಿ.ಹರೀಶ್ ಕರೆ ನೀಡಿದರು.

ಬಿಜಿಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಶಿಕ್ಷಕರು ಮಕ್ಕಳ ಭವಿಷ್ಯಕ್ಕೆ ಮುಳ್ಳಾಗಬಾರದು. ಪೋಷಕರ ನಿರೀಕ್ಷೆಗಳನ್ನು ಸಾಕಾರಗೊಳಿಸುವ ಜವಾಬ್ದಾರಿ ನಮ್ಮ ಶಿಕ್ಷಕರಿಗೆ ಸೇರಿದೆ. ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬಿ ಅವರ ಬದುಕಿನಲ್ಲಿ ಆಶಾ ಭಾವನೆಗಳನ್ನು ಮೂಡಿಸುವಂತೆ ಕರೆ ನೀಡಿದರು.

ಹಿರಿಯ ಪತ್ರಕರ್ತರಾದ ಎಂ.ಕೆ.ಹರಿಚರಣತಿಲಕ್, ಕೆ.ಆರ್.ನೀಲಕಂಠ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ ನಿವೃತ್ತ ಪ್ರೊ.ಬಿ.ಎಂ.ಜಗದೀಶ್ ಶಿಕ್ಷಕ ಸಮುದಾಯಕ್ಕೆ ಬೋಧನಾ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.