25 ವರ್ಷಗಳಿಂದ ಮಹಾನಗರ ಅಭಿವೃದ್ಧಿಯಲ್ಲಿ ವಿಫಲ

| Published : Jul 24 2025, 01:45 AM IST

ಸಾರಾಂಶ

ಮಹಾನಗರ ಪಾಲಿಕೆಯಲ್ಲಿ ಆಡಳಿತ ಪಕ್ಷದ ಪ್ರಭಾವಿ ಸದಸ್ಯರು ಮತ್ತು ಮೇಯರ್, ಉಪಮೇಯರ್‌ಗಳ ವಾರ್ಡ್‌ಗಳು ಮಾತ್ರ ಅಭಿವೃದ್ಧಿ ಹೊಂದುತ್ತಿವೆ. ಉಳಿದ ಸದಸ್ಯರ ವಾರ್ಡ್‌ಗಳನ್ನು ಕಡೆಗಣಿಸುತ್ತಿದ್ದು, ಇನ್ಮುಂದೆ ಇದಕ್ಕೆ ಅವಕಾಶ ಕೊಡುವುದಿಲ್ಲ.

ಹುಬ್ಬಳ್ಳಿ: ಕಳೆದ 25 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಅವಳಿ ನಗರ ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿದೆ. ಅಭಿವೃದ್ಧಿ ಪರ ಕೈಗೊಳ್ಳುವ ವಿಷಯಗಳಿಗೆ ಪ್ರತಿಪಕ್ಷ ಖಂಡಿತ ಕೈ ಜೋಡಿಸಲಿದೆ. ಆದರೆ, ಹೇಳುವುದು ಒಂದು ಮಾಡುವುದು ಇನ್ನೊಂದಾದರೆ ಪ್ರತಿಪಕ್ಷ ಹೋರಾಟ ಮಾಡಲಿದೆ. ಸಮಸ್ಯೆಗಳಿಗೆ ಪರಿಹಾರ ಸಿಗುವರೆಗೂ ಪ್ರತಿಭಟಿಸಲಿದೆ ಎಂದು ಪಾಲಿಕೆ ಪ್ರತಿಪಕ್ಷ ನಾಯಕ ಇಮ್ರಾನ್ ಯಲಿಗಾರ ತಿಳಿಸಿದರು.

ಪಾಲಿಕೆಯಲ್ಲಿ ಬುಧವಾರ ಪ್ರತಿಪಕ್ಷ ನಾಯಕರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದರು.

ಮಹಾನಗರ ಪಾಲಿಕೆಯಲ್ಲಿ ಆಡಳಿತ ಪಕ್ಷದ ಪ್ರಭಾವಿ ಸದಸ್ಯರು ಮತ್ತು ಮೇಯರ್, ಉಪಮೇಯರ್‌ಗಳ ವಾರ್ಡ್‌ಗಳು ಮಾತ್ರ ಅಭಿವೃದ್ಧಿ ಹೊಂದುತ್ತಿವೆ. ಉಳಿದ ಸದಸ್ಯರ ವಾರ್ಡ್‌ಗಳನ್ನು ಕಡೆಗಣಿಸುತ್ತಿದ್ದು, ಇನ್ಮುಂದೆ ಇದಕ್ಕೆ ಅವಕಾಶ ಕೊಡುವುದಿಲ್ಲ. ತಮಗೆ ಬೇಕಾದ ಸದಸ್ಯರ ಕಾಮಗಾರಿಗಳ ಠರಾವ್ ಬರೆಯಿಸಿ ಪಾಸ್ ಮಾಡಿಕೊಂಡು ಕೆಲಸ ಮಾಡಲಾಗುತ್ತಿದೆ. ಇದು ಸರಿಯಲ್ಲ, ಮೇಯರ್, ಉಪಮೇಯರ್‌ಗಳು ಇಡೀ ಪಾಲಿಕೆಯನ್ನು ಪ್ರತಿನಿಧಿಸುತ್ತಾರೆ. ಪಾಲಿಕೆ ಸದಸ್ಯರ ವಾರ್ಡ್‌ಗಳಿಗೂ ಸ್ಪಂದಿಸಬೇಕಾಗುತ್ತದೆ. ಆದರೆ, ಇಲ್ಲಿ ವರೆಗೆ ಯಾರೂ ಸ್ಪಂದಿಸಿಲ್ಲ. ಈ ಬಗ್ಗೆ ಗಮನ ಸೆಳೆಯುತ್ತವೆ ಎಂದರು.

ವಾರ್ಡ್ ಫಂಡ್‌ ₹1.25 ಕೋಟಿ ಯಾವುದಕ್ಕೂ ಸಾಲುವುದಿಲ್ಲ. ಇದನ್ನು ಹೆಚ್ಚಿಸಬೇಕು. ಅವಳಿ ನಗರದಲ್ಲಿ ತಗ್ಗು ಗುಂಡಿಗಳಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಸಾರ್ವಜನಿಕ ಶೌಚಾಲಯವಿಲ್ಲದೇ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸುವುದಾಗಿ ತಿಳಿಸಿದರು.

ಈ ವೇಳೆ ಪಾಲಿಕೆ ಸದಸ್ಯ ಮಂಜುನಾಥ ಬುರ್ಲಿ ಸೇರಿದಂತೆ ಹಲವರು ಇದ್ದರು. ಎಂಎಲ್‌ಸಿ ಸಲೀಂ ಅಹ್ಮದ, ಮಂಜುನಾಥ ಅಬ್ಬಯ್ಯ, ಪಾಲಿಕೆಯ ಕಾಂಗ್ರೆಸ್ ಸದಸ್ಯರು ಸೇರಿದಂತೆ ಹಲವು ಗಣ್ಯರು ಪ್ರತಿಪಕ್ಷ ನಾಯಕರಿಗೆ ಶುಭಕೋರಿದರು.