ನಾಳೆ ಹಾಸನಾಂಬೆಯ ಅಕ್ಕ ಕೆಂಚಾಂಬೆಯ ಜಾತ್ರೆ

| Published : Nov 05 2024, 12:40 AM IST

ಸಾರಾಂಶ

ಕೆಂಚಾಂಬ ದೇವಿಯ ಜಾತ್ರೆಗೆ ಹಾಸನಾಂಬೆಯ ದರ್ಶನ ಮುಗಿದ ಮರುದಿನದಿಂದಲೇ ಧಾರ್ಮಿಕ ಕಾರ್ಯಗಳು ಆರಂಭವಾಗುವುದು ಎರಡೂ ಪುಣ್ಯಕ್ಷೇತ್ರಗಳ ನಡುವಿನ ಒಡನಾಟಕ್ಕೆ ಸಾಕ್ಷಿಯಾಗಿದ್ದು, ಹಾಸನಾಂಬೆ ಉತ್ಸವ ಮುಗಿದ ನಂತರ ಹಾಸನದಲ್ಲಿ ನೆಲೆಸಿರುವ ಸಹೋದರಿಯರು ಹಿರಿಯ ಸಹೋದರಿ ಕ್ಷೇತ್ರಕ್ಕೆ ವಿಹಾರ ಹೊರಡುತ್ತಾರೆಂಬ ಪ್ರತೀತಿ ಇದೆ. ಹಾಸನಾಂಬೆಯ ಹಿರಿಯ ಸಹೋದರಿ ಕೆಂಚಾಂಬದೇವಿಗೂ ಹಾಸನಾಂಬೆಯಷ್ಟೆ ಐತಿಹಾಸಿಕ ಹಿನ್ನೆಲೆ ಇದ್ದು ನವೆಂಬರ್ ೬ರಂದು ದೇವಿಯ ಜಾತ್ರೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಹಾಸನಾಂಬೆಯ ಹಿರಿಯ ಸಹೋದರಿ ಕೆಂಚಾಂಬದೇವಿಗೂ ಹಾಸನಾಂಬೆಯಷ್ಟೆ ಐತಿಹಾಸಿಕ ಹಿನ್ನೆಲೆ ಇದ್ದು ನವೆಂಬರ್ ೬ರಂದು ದೇವಿಯ ಜಾತ್ರೆ ನಡೆಯಲಿದೆ. ಕೆಂಚಾಂಬ ದೇವಿಯ ಜಾತ್ರೆಗೆ ಹಾಸನಾಂಬೆಯ ದರ್ಶನ ಮುಗಿದ ಮರುದಿನದಿಂದಲೇ ಧಾರ್ಮಿಕ ಕಾರ್ಯಗಳು ಆರಂಭವಾಗುವುದು ಎರಡೂ ಪುಣ್ಯಕ್ಷೇತ್ರಗಳ ನಡುವಿನ ಒಡನಾಟಕ್ಕೆ ಸಾಕ್ಷಿಯಾಗಿದ್ದು, ಹಾಸನಾಂಬೆ ಉತ್ಸವ ಮುಗಿದ ನಂತರ ಹಾಸನದಲ್ಲಿ ನೆಲೆಸಿರುವ ಸಹೋದರಿಯರು ಹಿರಿಯ ಸಹೋದರಿ ಕ್ಷೇತ್ರಕ್ಕೆ ವಿಹಾರ ಹೊರಡುತ್ತಾರೆಂಬ ಪ್ರತೀತಿ ಇದೆ. ಐತಿಹಾಸಿಕ ಹಿನ್ನೆಲೆ: ಉತ್ತರ ಪ್ರದೇಶದ ಕಾಶಿಯಿಂದ ದೈವಾಂಶಸಂಭೂತ ಸಪ್ತಸಹೋದರಿಯರು ಪೂರ್ವಾಭಿಮುಖವಾಗಿ ಸಂಚಾರ ಆರಂಭಿಸಿದ್ದು ಆಲೂರು ತಾಲೂಕು ಕೆ.ಹೊಸಕೋಟೆ ಪ್ರದೇಶಕ್ಕೆ ಆಗಮಿಸಿದ ವೇಳೆ ಋಷಿಮುನಿಯೊಬ್ಬರು ತಪಸ್ಸಿಗೆ ಕುಳಿತಿದ್ದನ್ನು ಗಮನಿಸಿ ಕ್ಷೇತ್ರದಲ್ಲಿ ವಾಸ್ತವ್ಯ ಹೂಡುತ್ತಾರೆ. ಆದರೆ, ಮಹಿಷಾಸುರನ ಮರ್ಧನದ ನಂತರ ಹೆದರಿದ ಆತನ ಸಹೋದರ ರಕ್ತಬೀಜಾಸುರ ಮಲೆನಾಡಿನೆಡೆಗೆ ವಲಸೆ ಬರುತ್ತಾನೆ. ಹೀಗೆ ವಲಸೆ ಬಂದ ರಾಕ್ಷಸ ಋಷಿಮುನಿಗಳ ತಪ್ಪಸ್ಸಿಗೆ ಭಂಗ ತರುತ್ತಿರುತ್ತಾನೆ. ಇದರಿಂದ ಬೇಸತ್ತ ಋಷಿಮುನಿಗಳು ರಾಕ್ಷಸನ ಸಂಹಾರ ನಡೆಸುವಂತೆ ಸಪ್ತಸಹೋದರಿಯರ ಪೈಕಿ ಹಿರಿಯರಾದ ಬ್ರಹ್ಮಿಣಿ ದೇವಿಯಲ್ಲಿ ಅರಿಕೆ ಮಾಡಿಕೊಳ್ಳುತ್ತಾರೆ. ಋಷಿಮುನಿಯ ಅರಿಕೆಯಿಂದ ರಾಕ್ಷಸನ ಸಂಹಾರಕ್ಕೆ ಮುಂದಾಗುತ್ತಾರೆ. ಆದರೆ, ಸಂಹಾರದ ಹಂತವಾಗಿ ನಡೆಸಿದ ಪ್ರತಿ ಯುದ್ಧದಲ್ಲಿ ಗಾಯಗೊಳ್ಳುವ ರಾಕ್ಷಸನ ರಕ್ತ ನೆಲಕ್ಕೆ ಬಿದ್ದ ತಕ್ಷಣ ನೂರಾರು ರಾಕ್ಷಸರು ಸೃಷ್ಟಿಯಾಗುತ್ತಿರುತ್ತಾರೆ. ಈ ವೇಳೆ ಬ್ರಹ್ಮ,ವಿಷ್ಣು, ಮಹೇಶ್ವರರು ತಮ್ಮೆಲ್ಲ ಶಕ್ತಿಯನ್ನು ದೇವಿಗೆ ಧಾರೆ ಎರೆದು ತನ್ನ ನಾಲಿಗೆಯನ್ನು ನೆಲಕ್ಕೆ ಹಾಸಿ ರಾಕ್ಷಸನ ರಕ್ತ ನೆಲಕ್ಕೆ ಬೀಳದಂತೆ ರಾಕ್ಷಸನ ಸಂಹಾರ ನಡೆಸುವಂತೆ ಸೂಚಿಸುತ್ತಾರೆ. ಇದರಂತೆ ಭೂಮಿಗೆ ನಾಲಿಗೆ ಹಾಸಿ ರಕ್ತಬೀಜಾಸುರನ ಸಂಹಾರ ನಡೆಸಲಾಗುತ್ತದೆ. ರಾಕ್ಷಸ ಸಂಹಾರಗೊಂಡ ಹರಿಹಳ್ಳಿ ಗ್ರಾಮದಲ್ಲಿರುವ ದೇವಿಯ ದೇವಸ್ಥಾನ ಇರುವ ಪ್ರದೇಶದ ಮಣ್ಣು ಇಂದಿಗೂ ಕೆಂಪುವರ್ಣದಿಂದ ಕೂಡಿದ್ದರೆ, ಮಳೆಗಾಲದ ವೇಳೆ ಇಲ್ಲಿನ ಮಣ್ಣು ರಕ್ತದಂತೆ ಭಾಸವಾಗುತ್ತದೆ. ದೇವಸ್ಥಾನದ ಹೊರವಲಯದ ಮಣ್ಣು ಕಪ್ಪುವರ್ಣದಿಂದ ಕೂಡಿದ್ದು ಕುತೂಹಲದಾಯಕವಾಗಿದೆ.

ಕಲ್ಯಾಣಿ: ರಾಕ್ಷಸನ ಸಂಹಾರದ ನಂತರ ದಾಹದಿಂದ ಬಳಲಿದ ದೇವಿ ತನ್ನ ಮೊಣಕೈಯಿಂದ ನೆಲವನ್ನು ಗುದ್ದಿ ಕಲ್ಯಾಣಿ ಸೃಷ್ಟಿಸಿದ್ದು ಇಂದಿಗೂ ತ್ರಿಭುಜಾಕಾರದ ಕಲ್ಯಾಣಿ ಇದೆ. ಕಲ್ಯಾಣಿ ಇರುವ ಪ್ರದೇಶದಲ್ಲಿ ದೇವಿಯ ಪಾದ ಸೇರಿದಂತೆ ಹಲವು ಕುರುಹುಗಳನ್ನು ಕಾಣಬಹುದಾಗಿದೆ. ರಾಕ್ಷಸನ ಸಂಹಾರದ ಪ್ರಾಯಶ್ಚಿತವಾಗಿ ದೇವಿ ಅಗ್ನಿಪ್ರವೇಶ ಮಾಡುತ್ತಾರೆ ಎಂಬ ಪ್ರತೀತಿ ಇದ್ದು ಇದಕ್ಕಾಗಿ ನವಂಬರ್‌ ತಿಂಗಳಿನಲ್ಲಿ ಕೆಂಡೋತ್ಸವದೊಂದಿಗೆ ಒಂದು ದಿನದ ಜಾತ್ರೆ ನಡೆಯುತ್ತದೆ.

ರಾಕ್ಷಸನ ಸಂಹಾರದ ನಂತರ ಬ್ರಹ್ಮಿಣಿ ದೇವಿ ಕೆಂಚಾಂಬ ದೇವಿಯಾಗಿ ಸುತ್ತಲಿನ ೪೮ ಹಳ್ಳಿಗಳಲ್ಲಿ ಪ್ರಸಿದ್ಧಿ ಪಡೆಯುತ್ತಾರೆ. ಉಳಿದ ಆರು ದೇವಿಯರು ಮುಂದೆ ಪ್ರಯಾಣ ಬೆಳೆಸಿ ಹಾಸನದ ದೇವಿಗೆರೆಯ ಮೂರು ಕೊಳದಲ್ಲಿ ಮೂವರು ಹಾಗೂ ಕೊಳದ ಅನತಿ ದೂರದಲ್ಲಿದ್ದ ಅರಳಿ ಮರದ ಸಮೀಪ ಮೂವರು ನೆಲೆ ನಿಲ್ಲುವ ಮೂಲಕ ಮುಂದೆ ಹಾಸನಾಂಬೆಯಾರಾಗಿ ಜನಪ್ರಿಯಗೊಳ್ಳುತ್ತಾರೆ. ಅಂದಿನಿಂದ ವರ್ಷಕ್ಕೊಮ್ಮೆ ಅಕ್ಕತಂಗಿಯರು ಜಾತ್ರೆ ಸಂದರ್ಭದಲ್ಲಿ ಸಂಧಿಸುತ್ತಾರೆಂಬ ಐತಿಹಾಸಿಕ ಹಿನ್ನೆಲೆಯಿದೆ.

ಜಾತ್ರೆ: ಕಾರ್ತಿಕ ಮಾಸದ (ನವಂಬರ್ ತಿಂಗಳ) ಬುಧವಾರದಂದು ಹರಿಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಕೆಂಚಾಂಬ ದೇವಸ್ಥಾನದಲ್ಲಿ ಜಾತ್ರೆ ನಡೆಯುತ್ತಿದ್ದರೆ ಮಂಗಳವಾರ ಮೂಲ ಸನ್ನಿಧಾನದಲ್ಲಿ ಸಪ್ತಮಾತೃಕೆಯರಿಗೆ ಆಲಂಕಾರ ಮಾಡಲಾಗುತ್ತದೆ. ವೈಶಾಖ ಮಾಸದ (ಮೇ ತಿಂಗಳು) ಮೊದಲ ಭಾನುವಾರ ೪೮ ಗ್ರಾಮಗಳಲ್ಲಿ ಸಾರು(ಕೂಗು) ಹಾಕುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುತ್ತಿದ್ದು, ೪೮ ಗ್ರಾಮಗಳಲ್ಲೂ ದೇವಿಯ ಮುಖವಾಡದೊಂದಿಗೆ ಸುಗ್ಗಿ ನಡೆಯುತ್ತದೆ. ಅಂದು ಹರಿಹಳ್ಳಿ ಗ್ರಾಮದ ಮೂಲ ಸನ್ನಿಧಾನದಲ್ಲಿ ಸಪ್ತಮಾತೃಕೆಯರು ಯುದ್ಧಕ್ಕೆ ಸಿದ್ಧರಾಗಿರುವಂತೆ ಅಲಂಕಾರ ಮಾಡಲಾದರೆ, ಕೆಂಚಾಂಬ ದೇವಿಯ ದೇವಸ್ಥಾನದಲ್ಲಿ ಯುದ್ಧ ಮುಗಿದ ನಂತರ ಶಾಂತಿಯ ಭಂಗಿಯಲ್ಲಿರುವ ಅಲಂಕಾರ ಮಾಡಲಾಗುತ್ತಿದೆ. ಒಟ್ಟಾರೆ ವರ್ಷಕ್ಕೆ ಎರಡು ಬಾರಿ ನಡೆಯುವ ದೇವಿಯ ಜಾತ್ರೆ ಹಲವು ವಿಶೇಷಗಳಿಂದ ಕೂಡಿದ್ದು ಹಾಸನಾಂಬೆಯಷ್ಟೆ ಐತಿಹಾಸಿಕ ಹಿನ್ನೆಲೆ ಹೊಂದಿದೆ.

ಶ್ರೇಷ್ಠ: ದೇವಿ ರಾಕ್ಷಸನ ವಧೆಮಾಡಿದ ಪ್ರದೇಶದ ಮಣ್ಣು ಹಾಗೂ ವಧೆ ನಂತರ ದೇವಿ ಸೃಷ್ಟಿಸಿದ ಕಲ್ಯಾಣಿಯ ನೀರು ಅತ್ಯಂತ ಶ್ರೇಷ್ಟ ಎಂಬ ನಂಬಿಕೆ ಇದೆ.

ದೇವಿಯ ಬಗ್ಗೆ ಹಲವು ಕಥೆ: ಹಾಸನಾಂಬ ದೇವಿ ಉತ್ಸವದ ನಂತರ ಆರಂಭವಾಗುವ ಕೆಂಚಾಂಬ ದೇವಿಯ ಜಾತ್ರೆಯ ವೇಳೆಗೆ ಆರು ಸಹೋದರಿಯರು ಕೆಂಚಾಂಬ ದೇವಿಯ ಸನ್ನಿಧಾನಕ್ಕೆ ಬಂದು ರಾತ್ರಿವೇಳೆ ವಿಹಾರ ನಡೆಸುತ್ತಾರೆಂಬ ಪ್ರತೀತಿ ಇದ್ದು, ಜಾತ್ರೆ ನಂತರದ ದಿನಗಳಲ್ಲಿ ರಾತ್ರಿ ವೇಳೆ ದೇವಸ್ಥಾನದ ಸಮೀಪ ಯಾರು ಸಂಚರಿಸುವುದಿಲ್ಲ. ಆದರೆ, ಇದರ ಬಗ್ಗೆ ಅರಿವಿಲ್ಲದ ಜಾತ್ರೆಗೆ ಬಂದಿದ್ದ ಬಳೆಗಾರ ವ್ಯಾಪಾರಮಾಡಿದ ಸಂತಸದಲ್ಲಿ ದೇವಸ್ಥಾನದಲ್ಲೆ ನಿದ್ರೆಗೆ ಜಾರಿರುತ್ತಾನೆ. ಆದರೆ, ಮಧ್ಯರಾತ್ರಿ ವಿಹಾರಕ್ಕೆ ಬಂದ ಕೆಂಚಾಂಬ ದೇವಿ ಬಳೆಗಾರನನ್ನು ನಿದ್ರೆಯಿಂದ ಎಚ್ಚರಿಸಿ ಇಲ್ಲಿ ಮಲಗದಂತೆ ತಿಳಿಸಿ ಇಲ್ಲಿಂದ ಹೋಗುವಂತೆ ನಿರ್ದೇಶಿಸುತ್ತಾಳೆ. ಆದರೆ ಕೆಲವು ದೂರ ತೆರಳಿದ ಬಳೆಗಾರನನ್ನು ವಾಪಸ್‌ ಕರೆದು ತನ್ನ ಎರಡು ಕೈಗಳಿಗೆ ಬಳೆ ತೊಡಿಸಿಕೊಂಡು ತನ್ನ ನಿಜ ದರ್ಶನ ನೀಡಿ ಹಿಂದಿರುಗಿ ನೋಡದೆ ತನ್ನ ಊರಿಗೆ ತೆರಳುವಂತೆ ಹೇಳುತ್ತಾರೆ. ಆದರೆ, ಸಾಕಷ್ಟು ದೂರ ತೆರಳಿದ ಬಳೆಗಾರ ಹಿಂಬಂದಿಯಿಂದ ಬರುತ್ತಿದ್ದ ಗೆಜ್ಜೆಸದ್ದಿನಿಂದ ಬೆದರಿ ಹಿಂದುರುಗಿ ನೋಡುತ್ತಾನೆ. ಹೀಗೆ ಹಿಂದುರುಗಿ ನೋಡಿದ ಪ್ರದೇಶದಲ್ಲೆ ಬಳೆಗಾರ ಕಲ್ಲಾಗುತ್ತಾನೆ ಎಂಬ ಐತಿಹಾಸಿಕ ಪ್ರತೀತಿ ಇದ್ದು, ಹರಿಹಳ್ಳಿ ಗ್ರಾಮದಲ್ಲಿರುವ ಈ ಕಲ್ಲನ್ನು ಗ್ರಾಮಸ್ಥರು ಬಳೆಗಾರನ ಕಲ್ಲು ಎಂದು ಕರೆಯುತ್ತಾರೆ.

ಸಂಹಾರದ ವೇಳೆ ಕಾವಲು: ಮಾಯಾವಿಯಾದ ರಕ್ತಬೀಜಾಸುರನ ಕಾಟ ಅತಿಯಾದ್ದರಿಂದ ಬೇಸತ್ತ ದೇವಾನುದೇವತೆಗಳು ರಾಕ್ಷಸನ ವಧೆಗೆ ತೀರ್ಮಾನಿಸಿ ಬ್ರಹ್ಮಿಣಿದೇವಿಗೆ ತಮ್ಮ ಶಕ್ತಿತುಂಬಿ ಮಾಯಾವಿ ರಾಕ್ಷಸ ಬೇರೆಡೆ ತೆರಳದಂತೆ ನಾಲ್ಕು ದಿಕ್ಕಿನಲ್ಲೂ ಕಾವಲಿಗೆ ನಿಲ್ಲುತ್ತಾರೆ ಎಂಬ ಪುರಾಣವಿದೆ. ಈ ದೇವಾನುದೇವತೆ ಕಾವಲು ನಿಂತ ಸ್ಥಳಗಳಾದ ಕೂಡಗಿನ ಗಡಿಯಲ್ಲಿರುವ ಗೋಪಾಲಪುರದಲ್ಲಿ ಗೋಪಾಲಸ್ವಾಮಿ ದೇವಸ್ಥಾನ, ಸಕಲೇಶಪುರ ತಾಲೂಕಿನ ಶುಕ್ರವಾರಸಂತೆ ಗ್ರಾಮ ಸನಿಹದ ಶಟ್ಟಿಹಳ್ಳಿ ಗ್ರಾಮದಲ್ಲಿ ತೀರ ಅಪರೂಪದ ಬ್ರಹ್ಮ ದೇವಸ್ಥಾನ ಆಲೂರು ತಾಲೂಕಿನ ಪಾರ್ವತಮ್ಮನ ಬೆಟ್ಟದಲ್ಲಿ ಪಾರ್ವತಮ್ಮ ದೇವಿಯರ ದೇವಸ್ಥಾನವಿದ್ದರೆ ಆಲೂರು ತಾಲೂಕು ಗಂಜಿಗೆರೆ ಗ್ರಾಮದಲ್ಲಿ ವೆಂಕಟರಮಣ ದೇವಸ್ಥಾನವಿದ್ದು, ಈ ನಾಲ್ಕು ದೇವಸ್ಥಾನದಲ್ಲಿ ಜಾತ್ರೆವೇಳೆ ವಿವಿಧ ಪೂಜೆಗಳು ನಡೆಯುವುದು ವಿಶೇಷವಾಗಿದೆ. ಹರಿಹಳ್ಳಿ ಗ್ರಾಮಕ್ಕೆ ಸುಮಾರು ೧೪ ಕಿ.ಮೀ. ದೂರದಲ್ಲಿರುವ ಗಂಜಿಗೆರೆ ಗ್ರಾಮದ ವೆಂಕಟರಮಣ ದೇವಸ್ಥಾನದಿಂದ ಮೂರು ವರ್ಷಕ್ಕೂಮ್ಮೆ ಕಳಸ ಹೊತ್ತು ಕೆಂಚಾಂಬ ದೇವಿಯ ದರ್ಶನಕ್ಕೆ ಓಡಿ ಬರುವುದು ಇಂದಿಗೂ ನಡೆಯುತ್ತಿದ್ದು ಪವಾಡದಂತಿದೆ. ಇದಕ್ಕೆ ಹೊರ ಊರ ಒಕ್ಕೂಟ ಸೇವೆ ಎಂದೆ ಕರೆಸಿಕೊಳ್ಳುತ್ತಿದೆ.

ಸುಗ್ಗಿ ಜಾತ್ರೆ ಆರಂಭ ಅಂತ್ಯ: ಕೆಂಚಾಂಬ ದೇವಿಗೆ ನಂವಂಬರ್‌ ತಿಂಗಳಿನಲ್ಲಿ ನಡೆಯುವ ಜಾತ್ರೆ ಸಕಲೇಶಪುರ ಹಾಗೂ ಆಲೂರು ತಾಲೂಕಿನಲ್ಲಿ ನಡೆಯುವ ಸುಗ್ಗಿ ಜಾತ್ರೆಗಳ ಆರಂಭಕ್ಕೆ ಬುನಾದಿಯಾದರೆ ಮೇ ತಿಂಗಳಿನಲ್ಲಿ ನಡೆಯುವ ಜಾತ್ರೆ ಸುಗ್ಗಿ ಜಾತ್ರೆಗಳ ಅಂತಿಮವಾಗಿದ್ದು ತದನಂತರ ಯಾವುದೆ ಜಾತ್ರೆಗಳು ಜರುಗದಿರುವುದು ವಿಶೇಷವಾಗಿದೆ. *ಹೇಳಿಕೆ1

ಹಾಸನಾಂಬೆಯಷ್ಟೆ ಕೆಂಚಾಂಬ ದೇವಿಗೂ ಐತಿಹಾಸಿಕ ಹಿನ್ನೆಲೆಯಿದ್ದು, ಎರಡೂ ಧಾರ್ಮಿಕ ಸ್ಥಳಗಳಿಗೂ ನಂಟಿದೆ. ಅಪಾರ ಶಕ್ತಿಹೊಂದಿರುವ ದೇವಿಯ ದರ್ಶನ ಪಡೆಯುವುದು ಒಂದು ಪುಣ್ಯದ ಕೆಲಸ.

ರವಿ ಜೋಯಿಷ್. *ಹೇಳಿಕೆ 2

- ಕೆಂಚಾಂಬ ದೇವಿಯ ಉತ್ಸವ ಮೇ ತಿಂಗಳಿನಲ್ಲಿ ೪೮ ಗ್ರಾಮಗಳಲ್ಲಿ ನಡೆಯಲಿದೆ. ನವಂಬರ್‌ ತಿಂಗಳಿನಲ್ಲಿ ನಡೆಯುವ ಉತ್ಸವ ಹಾಸನಾಂಬೆಯರು ಹಿರಿಯಕ್ಕನ ದರ್ಶನಕ್ಕೆ ಬರುತ್ತಾರೆಂಬ ಪ್ರತೀತಿಯಲ್ಲಿ ನಡೆಸಲಾಗುತ್ತಿದೆ.

ಶಾಂತಮಲ್ಲಪ್ಪ,ನಿವೃತ್ತ ಶಿಕ್ಷಕ ಕಾಡ್ಲೂರು ಕೊಪ್ಪಲು ------------------------------------------------------------