ಧಾರವಾಡ:
ನಗರದ ಮಾಳಾಪುರದಲ್ಲಿ ಶುಕ್ರವಾರ ರಾತ್ರಿ ಹತ್ಯೆಗೀಡಾದ ಯುವ ಕಾಂಗ್ರೆಸ್ ಮುಖಂಡ ಫೈರೋಜ್‌ಖಾನ್ ಪಠಾಣ ಅವರ ಅಂತ್ಯಕ್ರಿಯೆ ಶನಿವಾರ ನಡೆಯಿತು. ಈ ನಡುವೆ ಹಂತಕರನ್ನು ಬಂಧಿಸುವಂತೆ ಆಗ್ರಹಿಸಿ ಹತ್ಯೆಗೀಡಾದ ಫೈರೋಜ್‌ಖಾನ್ ಪಠಾಣ ಬೆಂಬಲಿಗರು ಹಾಗೂ ಕುಟುಂಬಸ್ಥರು ಉಪನಗರ ಠಾಣೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಲು ಮುಂದಾದರು. ಆಗ ಪೊಲೀಸರು ಮನವೊಲಿಸಿ ಪರಿಸ್ಥಿತಿ ಶಾಂತಗೊಳಿಸಿದರು.ಶುಕ್ರವಾರ ರಾತ್ರಿ ಮಾಳಾಪುರ ಹಾಶ್ಮಿನಗರ 4ನೇ ಕ್ರಾಸ್‌ನಲ್ಲಿ ಇರುವ ಫೈರೋಜ್ ಮನೆಗೆ ನುಗ್ಗಿದ ನಾಲ್ವರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿ ಆಗಿದ್ದರು. ಹತ್ಯೆ ವೀಡಿಯೋ ವೈರಲ್ ಆಗಿತ್ತು. ಕೊಲೆ ಆರೋಪಿಗಳು ಯಾರೆಂಬುದು ಗೊತ್ತಿದ್ದರೂ ಪೊಲೀಸರು ಅವರನ್ನು ಬಂಧಿಸಿಲ್ಲ ಎಂದು ಮೃತನ ಬೆಂಬಲಿಗರು ಪೊಲೀಸ್ ಠಾಣೆ ಎದುರು ಮೃತದೇಹ ಇಟ್ಟು ಪ್ರತಿಭಟಿಸಲು ಮುಂದಾಗಿದ್ದರು. ಇದರಿಂದ ಕೆಲ ಹೊತ್ತು ಗೊಂದಲ ನಿರ್ಮಾಣ ಆಗಿತ್ತು.
ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ನಂತರ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗದೆ ಪೊಲೀಸ್ ಠಾಣೆಯತ್ತ ಆ್ಯಂಬುಲೆನ್ಸ್ ತಿರುಗಿಸಲಾಯಿತು. ಆಗ ಕೆಸಿ ಪಾರ್ಕ್ ಬಳಿ ವಾಹನ ತಡೆದ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಲಿಲ್ಲ. ಈ ವೇಳೆ ಪೊಲೀಸರು ಮತ್ತು ಮೃತರ ಬೆಂಬಲಿಗರ ಮಧ್ಯೆ ವಾಗ್ವಾದ ನಡೆಯಿತು. ಮಧ್ಯಪ್ರವೇಶಿಸಿದ ಹಿರಿಯ ಅಧಿಕಾರಿಗಳು, ನಾವು ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ. ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ ನಂತರ ಮೃತದೇಹವನ್ನು ಅವರ ಮನೆಗೆ ತೆಗೆದುಕೊಂಡು ಹೋಗಲಾಯಿತು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮೃತನ ಆಪ್ತ ಅಬ್ದುಲ್ ದೇಸಾಯಿ, ಆರು ತಿಂಗಳ ಹಿಂದೆಯೇ ಫೈರೋಜ್ ಹಾಗೂ ನನಗೆ ಜೀವ ಬೆದರಿಕೆ ಇದೆ ಎಂದು ಪೊಲೀಸರಿಗೆ ದೂರು ನೀಡಿದ್ದೇವೆ. ಈ ಬಗ್ಗೆ ಗೃಹ ಸಚಿವರಿಗೂ ಪತ್ರ ಬರೆಯಲಾಗಿತ್ತು. ಆದರೆ ರಕ್ಷಣೆ ನೀಡಿರಲಿಲ್ಲ. ಹೀಗಾಗಿ ಕೊಲೆ ಆಗಿದೆ. ರಾಜಕೀಯ ದ್ವೇಷ ಹಾಗೂ ಒಂದೇ ಸಮಾಜದ ಮತ್ತೊಬ್ಬ ವ್ಯಕ್ತಿ ಬೆಳೆಯಬಾರದು ಎಂದು ಈ ರೀತಿ ಕೊಲೆ ಮಾಡಲಾಗಿದೆ. ಇದರ ಹಿಂದೆ ಮುಸ್ಲಿಂ ಸಮುದಾಯದ ಹಿರಿಯ ಮುಖಂಡರೊಬ್ಬರ ಕೈವಾಡ ಇದೆ ಎಂದು ಆರೋಪಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ ಶಾ ಎಂಬ ವ್ಯಕ್ತಿ ಗುಂಪು ಕಟ್ಟಿಕೊಂಡು ರಾಕ್ಷಸ ರೀತಿಯಲ್ಲಿ ಕೊಲೆ ಮಾಡಿದ್ದಾರೆ. ನಾವು 6 ತಿಂಗಳ ಹಿಂದೆ ಯಾರಿಂದ ಜೀವ ಬೆದರಿಕೆ ಇದೆ ಎಂದು ಕೆಲವರ ಹೆಸರು ಉಲ್ಲೇಖಿಸಿ ದೂರು ನೀಡಿದ್ದೇವು. ಇದರ ಹಿಂದೆ ಅವರ ಕೈವಾಡ ಇದೆ. ಫೈರೋಜ್ ಪಠಾಣ ಅವರ ತಾಯಿ, ಸಹೋದರಿಯರ ಮೇಲೆ ಹಲ್ಲೆ ನಡೆಸಿ ಮನೆಯಲ್ಲಿದ್ದ ₹ 4 ಲಕ್ಷ ಹಾಗೂ ಎರಡು ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿದರು.ಭರವಸೆ ಕೊಟ್ಟ ಆಯುಕ್ತ:
ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ರಕ್ಷಣೆ ಕೋರಿ ಆರು ತಿಂಗಳ ಹಿಂದೆಯೇ ದೂರು ಬಂದಿರುವ ಬಗ್ಗೆ ನಾನು ಪರಿಶೀಲಿಸುತ್ತೇನೆ. ಹತ್ಯೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವುದಾಗಿ ಹೇಳಿದರು. ಮುಂಜಾಗ್ರತೆ ಕ್ರಮವಾಗಿ ಹಾಶ್ಮಿನಗರ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.