ನಮ್ಮ ಮಕ್ಕಳಿಗೆ ಧರ್ಮ ಭೋಧನೆಯ ತತ್ವವನ್ನು ಉಳಿಸಲು ಸದಾಕಾಲ ಆಚರಣೆಯಲ್ಲಿ ಉಳಿಯಬೇಕಾದರೆ ಜಾತ್ರೆ, ಉತ್ಸವ, ಪುರಾಣ ಪ್ರವಚನ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಾ ಸಾಗಬೇಕು ಎಂದು ನಿಪ್ಪಾಣಿ ಶಾಸಕಿ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಕನ್ನಡಪ್ರಭ ವಾರ್ತೆ ಕೊಲ್ಹಾರ
ನಮ್ಮ ಹಿರಿಯರು ಹಾಕಿಕೊಟ್ಟ ಸನಾತನ ಧರ್ಮ ಪರಂಪರೆ, ಸಂಸ್ಕೃತಿ, ಸಂಸ್ಕಾರವನ್ನು ನಿತ್ಯ ಪಾಲಿಸುವ ಪರಿಪಾಠವನ್ನು ಮಹಿಳೆಯರು ಹಿಂದಿನಿಂದಲೂ ಆಚರಿಸುತ್ತಾ ಬಂದಿದ್ದು ಮುಂದೆಯೂ ಕೂಡಾ ನಮ್ಮ ಮಕ್ಕಳಿಗೆ ಧರ್ಮ ಭೋಧನೆಯ ತತ್ವವನ್ನು ಉಳಿಸಲು ಸದಾಕಾಲ ಆಚರಣೆಯಲ್ಲಿ ಉಳಿಯಬೇಕಾದರೆ ಜಾತ್ರೆ, ಉತ್ಸವ, ಪುರಾಣ ಪ್ರವಚನ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಾ ಸಾಗಬೇಕು ಎಂದು ನಿಪ್ಪಾಣಿ ಶಾಸಕಿ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.ಪಟ್ಟಣದಲ್ಲಿ ನಡೆಯುತ್ತಿರುವ ತೆರಪಿ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವದ 2ನೇ ದಿನದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿ ಅವರು ಮಾತನಾಡಿದರು.
ಹೆಣ್ಣುಮಕ್ಕಳಿಗೆ ಉಡಿ ತುಂಬಿಸಿಕೊಳ್ಳುವ ಕಾರ್ಯಕ್ರಮವೆಂದರೆ ಹಬ್ಬವಿದ್ದಂತೆ. ಇಂಥಹ ಕಾರ್ಯಕ್ರಮಗಳು ಊರುಗಳಲ್ಲಿ ನಡೆಯುತ್ತಿರುವುದರಿಂದ ನಮ್ಮ ಭಾರತೀಯ ಪರಂಪರೆ ವಿಶ್ವದಲ್ಲಿಯೇ ಮಾದರಿಯಾಗಿದೆ. ಆದ್ದರಿಂದ ಮುಂದಿನ ಪೀಳಿಗೆಗೂ ಸಮಾಜದ ಮೂಢನಂಬಿಕೆ ಹೋಗಲಾಡಿಸಿ ವೈಜ್ಞಾನಿಕ ನೆಲೆಗಟ್ಟಿನ ಅಡಿಯಲ್ಲಿ ದೈವತ್ವದ ಕಡೆ ವಾಲುವಂತೆ ಮಹಿಳೆಯರು ಜಾಗೃತಿಯಿಂದ ನಡೆದುಕೊಂಡು ಕುಟುಂಬ ವ್ಯವಸ್ಥೆಯು ಅಲುಗಾಡದಂತೆ ನೋಡಿಕೊಳ್ಳುವ ಮಹತ್ವದ ಜವಾಬ್ದಾರಿ ನಿಭಾಯಿಸಬೇಕು ಎಂದು ಹೇಳಿದರು.ಪ್ರತಿಯೊಬ್ಬ ಸ್ತ್ರೀಯು ತನ್ನ ಜೀವಿತಾವಧಿಯು ಮುತ್ತೈದೆಯಾಗಿರಬೇಕು ಎಂದು ಬಯಸುತ್ತಾಳೆ ಅದರ ಸಂಕೇತವಾಗಿಯೇ ಮಹಿಳೆಯರು ಕುಂಕುಮ ಬಳೆ ಕಾಲುಂಗುರ ತಾಳಿ ಮೂಗುತಿ ಎಂಬ ಐದು ಮುತ್ತುಗಳನ್ನು ಧರಿಸಿಕೊಂಡು ಸಂಸಾರದ ನೊಗವನ್ನು ಸದಾವಕಾಲ ಹೊತ್ತುಕೊಂಡು ನಡೆಯುತ್ತಿರುತ್ತಾಳೆ. ಇಂಥಹ ಸಂಧರ್ಬದಲ್ಲಿ ಏನಾದರೂ ತೊಂದರೆ ಬಂದರೆ ಸಹಿಸಿಕೊಂಡು ಬಾಳಿನ ಬಂಡಿಯನ್ನು ಜೀವನದುದ್ದಕ್ಕೂ ಎಳೆಯಬೇಕೆಂಬ ಕಟ್ಟಪ್ಪಣೆಯನ್ನು ಚಾಚು ತಪ್ಪದೇ ಬದಲಾದ ಜಗತ್ತಿನಲ್ಲಿಯೂ ಹೆಣ್ಣುಮಕ್ಕಳು ಪಾಲಿಸಲು ಮುಂದಾಗಬೇಕೆಂದು ಕರೆಕೊಟ್ಟರು.
ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬರುವ ಮುಂದಿನ ದಿನಮಾನಗಳಲ್ಲಿ ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನವನ್ನು ಮಹಿಳೆಯರಿಗೆ ಪ್ರಾಶಸ್ತ್ಯ ಕೊಟ್ಟರೆ ಅಂಥಹ ಸದಾವಕಾಶ ಸಹೋದರಿ ಶಶಿಕಲಾ ಜೊಲ್ಲೆಯವರಿಗೆ ದೊರಕುವಂತಾಗಲಿ ಎಂದು ಆ ಜಗನ್ಮಾತೆ ರೇಣುಕಾದೇವಿಯಲ್ಲಿ ನಾನು ಪ್ರಾರ್ಥಿಸುತ್ತೇನೆ. ಜೊಲ್ಲೆಯವರು ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವಂತಾಗಲಿ ಎಂದು ಹಾರೈಸುತ್ತೇನೆ ಎಂದರು.ದೇವಸ್ಥಾನದ ಅರ್ಚಕ ಸಂಗಪ್ಪ ಬಾಟಿ ಸಾನ್ನಿಧ್ಯ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಅಧ್ಯಕ್ಷರು ಮಾಜಿ ಸಂಸದ ಅಣ್ಣಾಸಾಹೇಬ ಶಂಕರ ಜೊಲ್ಲೆ, ಅತಿಥಿಗಳಾಗಿ ಚಂದ್ರಶೇಖರಯ್ಯ ಗಣಕುಮಾರ, ಕಸ್ತೂರಿ ಬೆಳ್ಳುಬ್ಬಿ, ದೇವಸ್ಥಾನದ ಆಡಳಿತ ಮಂಡಳಿಯವರು ಇದ್ದರು.