ಈ ಭರತ ಭೂಮಿ ಪವಿತ್ರ ಶರಣರ, ಸೂಫಿ ಸಂತರ ನಾಡು. ಇಲ್ಲಿ ಅನಾದಿ ಕಾಲದಿಂದ ಮಹಾತ್ಮರು ತಮ್ಮ ಅಚಲ ತಪ್ಪಸ್ಸಿನಿಂದ ಲೋಕ ಕಲ್ಯಾಣಕ್ಕೆ ಮಾನವೀಯ ಮೌಲ್ಯಗಳ ಸಂದೇಶಗಳನ್ನು ನೀಡಿ ಎಲ್ಲರಿಗೂ ಸೂಕ್ತ ಮಾರ್ಗದರ್ಶನ ಮಾಡಿಕೊಂಡು ಬಂದಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಈ ಭರತ ಭೂಮಿ ಪವಿತ್ರ ಶರಣರ, ಸೂಫಿ ಸಂತರ ನಾಡು. ಇಲ್ಲಿ ಅನಾದಿ ಕಾಲದಿಂದ ಮಹಾತ್ಮರು ತಮ್ಮ ಅಚಲ ತಪ್ಪಸ್ಸಿನಿಂದ ಲೋಕ ಕಲ್ಯಾಣಕ್ಕೆ ಮಾನವೀಯ ಮೌಲ್ಯಗಳ ಸಂದೇಶಗಳನ್ನು ನೀಡಿ ಎಲ್ಲರಿಗೂ ಸೂಕ್ತ ಮಾರ್ಗದರ್ಶನ ಮಾಡಿಕೊಂಡು ಬಂದಿದ್ದಾರೆ. ಪರಿಣಾಮ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಗ್ರಾಮೀಣ ಭಾಗದಲ್ಲಿ ನಡೆಯುವ ಧಾರ್ಮಿಕ ಜಾತ್ರೆಗಳಿಂದ ಸಮಾಜದಲ್ಲಿ ಸಾಮರಸ್ಯ ಮೂಡಿ, ಬದಲಾವಣೆಗೆ ಪ್ರೇರಣೆ ಸಿಗುತ್ತದೆ ಎಂದು ಉದ್ಯಮಿ ಎಸ್. ಪಿ. ದಯಾನಂದ ಪಟ್ಟಣಶೆಟ್ಟಿ ಹೇಳಿದರು.

ಇಲ್ಲಿಗೆ ಸಮೀಪದ ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ದಂಡಗುಂಡದ ಬಸವಣ್ಣ ದೇವಸ್ಥಾನಕ್ಕೆ ಜಾತ್ರೆ ನಿಮಿತ್ತ ಕುಟುಂಬ ಸಮೇತ ಭೇಟಿ ನೀಡಿ ದರ್ಶನ ಪಡೆದು ದೇವಸ್ಥಾನ ಟ್ರಸ್ಟ್‌ನವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪ್ರಸಕ್ತ ದಿನಗಳಲ್ಲಿ ನಾವೆಲ್ಲರೂ ಸದಾ ಒಂದಿಲ್ಲೊಂದು ವಿಷಯದಲ್ಲಿ ಒತ್ತಡದಲ್ಲಿ ಜೀವನ ಕಳೆಯುತ್ತಿದ್ದೇವೆ. ಆದರೂ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಸ್ವಲ್ಪ ಸಮಯ ಮೀಸಲಿಟ್ಟು ದೇವರ ದರ್ಶನ ಪಡೆದರೆ ಬದುಕು ಪಾವನವಾಗಿ ಸದಾ ಕ್ರಿಯಾಶೀಲರಾಗಿ ಅವರವರ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಸಾಧನೆ ಮಾಡಲು ಶಕ್ತಿ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.

ಬಸವಣ್ಣ ದೇವಸ್ಥಾನ ಸಾವಿರಾರು ವರ್ಷಗಳ ಪುರಾತನ ಭವ್ಯ ಇತಿಹಾಸ ಹೊಂದಿದೆ, ಹಚ್ಚ ಹಸಿರಿನ ಬೆಟ್ಟದ ಕೆಳಗೆ ಇರುವುದರಿಂದ ಇಡೀ ವಾತಾವರಣ ಶಾಂತಮಯವಾಗಿದೆ, ಭಕ್ತರೆಲ್ಲರೂ ಕೂಡ ಭವ್ಯ ದೇವಸ್ಥಾನ ನಿರ್ಮಾಣ ಮಾಡಿ, ನಿರಂತರ ಧಾರ್ಮಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ, ಅದಕ್ಕೆ ಭಕ್ತರ ಸಂಪೂರ್ಣ ಸಹಾಯ ಸಹಕಾರವಿದೆ, ಆ ಭಗವಂತನ ಕೃಪೆಯಿಂದ ನಾಡಿನಲ್ಲಿ ಉತ್ತಮವಾಗಿ ಮಳೆಯಾಗಿ ರೈತಾಪಿ ವರ್ಗದ ಸಂಕಷ್ಟಗಳು ದೂರವಾಗಲೀ ಎಂದು ಬಸವಣ್ಣನಲ್ಲಿ ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅವರು ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳಿಗೆ ವೈಯಕ್ತಿಕವಾಗಿ 10 ಲಕ್ಷ ರು. ಟ್ರಸ್ಟ್‌ವರಿಗೆ ದೇಣಿಗೆ ನೀಡಿದರು. ಟ್ರಸ್ಟ್‌ನ ಅಧ್ಯಕ್ಷರಾದ ಭಾಗಣ್ಣಗೌಡ ಸಂಕನೂರ ಮಾತನಾಡಿ, ಆ ಬಸವಣ್ಣನ ಕೃಪೆ ಎಲ್ಲಾ ಭಕ್ತರ ಮೇಲಿದೆ, ಪರಿಣಾಮ ದೈವದತ್ತವಾಗಿ ತಮಗೆ ಒಲಿದಿರುವ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿ ದುಡಿದ ಸಂಪತ್ತಿನಲ್ಲಿ ಸ್ವಲ್ಪ ಹಣ ದೇವಸ್ಥಾನ ನಿರ್ಮಾಣಕ್ಕೆ ಹಾಗೂ ಇತರ ಚಟುವಟಿಕೆಗಳಿಗೆ ನೀಡಿದ್ದಾರೆ, ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಅಭಿಪ್ರಾಯಪಟ್ಟರು.

ಮಮತಾ ದಯಾನಂದ, ಶಂಭುರಡ್ಡಿ ಮದ್ನಿ ಕೋಡ್ಲಾ, ಬಸವರಾಜಪ್ಪಗೌಡ ಬಾಸರಡ್ಡಿ ನಾಲವಾರ, ಭೀಮಣ್ಣ ಸಾಲಿ, ಬಸರಾಜಪ್ಪಗೌಡ ಸಂಕನೂರ, ಗುರು ದಂಡಗುಂಡ, ಚಂದ್ರಶೇಖರ ಪಟ್ಟಣಶೆಟ್ಟಿ, ಅಂಬರೀಶ ಮುಧೋಳ, ಡಿವೈಎಸ್‌ಪಿ ಶಂಕರಗೌಡ ಪಾಟೀಲ್, ಪಿಎಸ್‌ಐ ಮಂಜುನಾಥರಡ್ಡಿ, ಸುದರ್ಶನ ನಾಯಕ, ಅಂಬರೀಶ ವಜ್ಜಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.