ಕನ್ನಡಪ್ರಭವಾರ್ತೆ ತಿಪಟೂರು
ನಮ್ಮ ಪೂರ್ವಿಕರು ಪ್ರತಿ ಹಳ್ಳಿಗಳಲ್ಲೂ ವರ್ಷಕೊಮ್ಮೆ ದೇವರ ಜಾತ್ರೆಯನ್ನು ನಡೆಸುಕೊಂಡು ಬಬಂರುವ ಸಂಪ್ರದಾಯ ಹೊಂದಿದ್ದು, ಇದೇ ಸಂಸ್ಕೃತಿ ಇಂದಿಗೂ ಜೀವಂತವಾಗಿದ್ದು ಹೆಚ್ಚಿನ ಶ್ರದ್ಧಾ ಭಕ್ತಿ ಭಾವಗಳಿಂದ, ವಿಜೃಂಭಣೆಯಿಂದ ಜಾತ್ರೆಗಳು ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದು ಕೆರೆಗೋಡಿ ರಂಗಾಪುರದ ಶ್ರೀಮಠದ ಶ್ರೀ ಗುರುಪರದೇಶಿಕೇಂದ್ರ ಸ್ವಾಮಿಗಳು ತಿಳಿಸಿದರು.ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಪರುವಗೊಂಡನಹಳ್ಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ ಅವರು ಸ್ವಾಮಿಯವರಿಗೆ ನೂತನವಾಗಿ ನಿರ್ಮಿಸಿದ ಉಯ್ಯಾಲೆ ಮಂಟಪದ ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ನಮ್ಮ ಧಾರ್ಮಿಕ ಹಬ್ಬ ಹರಿದಿನ ಜಾತ್ರೆಗಳು ಹಳ್ಳಿ ಜನರಲ್ಲಿ ಪರಸ್ಪರ ಅನ್ಯೊನ್ಯತೆ, ಉತ್ತಮ ಭಾಂಧವ್ಯವನ್ನು ತಂದು ನೆಲೆಗೊಳಿಸುವ ಸಂಕೇತಗಳಾಗಿವೆ. ಇಂದು ಜನರಲ್ಲಿ ನೈತಿಕತೆ ಕುಸಿಯುತ್ತಿದೆ. ತಂದೆ-ತಾಯಿ, ಗುರು-ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಮಾತ್ರ ಎಲ್ಲರ ಬದುಕು ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಪರುವಗೊಂಡನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಬಸವೇಶ್ವರ ಜಾತ್ರಾ ಮಹೋತ್ಸವ ಯಶಸ್ವಿಯಾಗಲಿ, ಸರ್ವ ಭಕ್ತರಿಗೂ ಸುಖ ಶಾಂತಿಯುಳ್ಳ ಜೀವನ ದೊರಕುವಂತಾಗಲಿ ಎಂದು ಆಶೀರ್ವಚನ ನೀಡಿದರು. ಸಾಹಿತಿ ಸಾರ್ಥವಳ್ಳಿ ಶಿವಕುಮಾರ್ ತಮ್ಮ ತನುಮನಗಳಲ್ಲಿ ಶರಣ ಸಂಪ್ರದಾಯವನ್ನು ಅಳವಡಿಸಿಕೊಂಡು ಬಂದಿರುವ ಪರುವಗೊಂಡನಹಳ್ಳಿ ಜನರು ಶರಣ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕ್ಷೇತ್ರದ ಶ್ರೀ ಬಸವೇಶ್ವರ ಸ್ವಾಮಿ ಅನುಗ್ರಹ ಹಾಗೂ ಪರಮ ಪೂಜ್ಯರ ಆಶೀರ್ವಾದದಿಂದ ನಡೆಯುತ್ತಿರುವ ಪರುವಗೊಂಡನಹಳ್ಳಿ ಪರಮಪಾವಿತ್ರವೆನಿಸಿದೆ ಎಂದರು.ದೇವರಿಗೆ ನೂತನ ಉಯ್ಯಾಲೆ ಮಂಟಪವನ್ನು ತಮ್ಮ ಸ್ವಂತ ಖರ್ಚಿನಿಂದ ನಿರ್ಮಿಸಿಕೊಟ್ಟು ಗ್ರಾಮದ ನಿವೃತ್ತಿ ಶಿಕ್ಷಕ ದೇವರಾಜುರವರನ್ನು ಗ್ರಾಮಸ್ಥರು ಅಭಿನಂದಿಸಿದರು. ಗ್ರಾಮದ ಎಲ್ಲ ಶರಣ ಶರಣೆಯರು, ಯುವಕರು, ಗ್ರಾಮಸ್ಥರು ಹಾಗೂ ಅಪಾರ ಸಂಖ್ಯೆಯ ಭಕ್ತ ಸಮಾಜ ಉಪಸ್ಥಿತರಿದ್ದರು. ಮಧ್ಯಾಹ್ನ ಸ್ವಾಮಿಯವರ ಅಗ್ನಿಕುಂಡೋತ್ಸವ ನಡೆದು ನಂತರ ಬಸವೇಶ್ವರಸ್ವಾಮಿ, ಶಂಕರೇಶ್ವರ ಸ್ವಾಮಿ ಹಾಗೂ ಶ್ರೀ ಮುನಿಯಪ್ಪಸ್ವಾಮಿ ದೇವರುಗಳ ಉಯ್ಯಾಲೋತ್ಸವ ನಡೆಯಿತು. ಸಮಸ್ತ ಭಕ್ತಾದಿಗಳಿಗೆ ದಾಸೋಹ ಏರ್ಪಡಿಸಲಾಗಿತ್ತು.