ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಸತ್ತ ವ್ಯಕ್ತಿಯ ಹೆಸರಿನಲ್ಲಿ ಆಧಾರ್ ಕಾರ್ಡ್ ಸೃಷ್ಟಿಸಿಕೊಂಡು ಸರ್ಕಾರಿ ಜಮೀನನ್ನು ಪರಭಾರೆ ಮಾಡಿರುವ ಹಾಗೂ ಅಕ್ರಮ ಖಾತೆ ಮಾಡಿರುವ ೧೦ ಮಂದಿ ವಿರುದ್ಧ ನಗರದ ಪಶ್ಚಿಮ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.ಯಡವನಹಳ್ಳಿ ಪಿ.ಸಿ.ಕೃಷ್ಣೇಗೌಡ, ಹೆಚ್.ಎಂ.ಮನೋಹರ್, ಪಶುಪತಿ, ಮಹದೇವ, ಅಂದು ತಹಸೀಲ್ದಾರ್ ಆಗಿದ್ದ ಕುಂಞ ಅಹಮದ್, ಉಪನೋಂದಣಾಧಿಕಾರಿಯಾಗಿದ್ದ ಶಿವಲಿಂಗೇಗೌಡ, ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ಹೋಟೆಲ್ ಶಿವಪ್ಪ, ಕೆ.ಮಧುಸೂಧನ್ ಮತ್ತಿತರರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ.ಸಾಮಾಜಿಕ ಕಾರ್ಯಕರ್ತ ಕೆ.ಆರ್.ರವೀಂದ್ರ ಅವರು ಭೂ ಸ್ವಾಧೀನವಾಗಿರುವ ಜಮೀನನ್ನು ಸತ್ತ ವ್ಯಕ್ತಿಯ ಹೆಸರಿನಲ್ಲಿ ಆಧಾರ್ ಸೃಷ್ಟಿಸಿ ಅಕ್ರಮವಾಗಿ ಪರಭಾರೆ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದರು. ಈ ದೂರನ್ನು ಆಧರಿಸಿ ಉಪವಿಭಾಗಾಧಿಕಾರಿ, ಭೂ ದಾಖಲೆಗಳ ಉಪನಿರ್ದೇಶಕರು ಸಲ್ಲಿಸಿರುವ ವರದಿಯಲ್ಲಿ ಅಕ್ರಮವಾಗಿ ಖಾತೆ ಮಾಡಿರುವುದು ಸಾಬೀತಾಗಿರುವುದರಿಂದ ತಪ್ಪಿತಸ್ಥ ಅಧಿಕಾರಿಗಳು, ನೌಕರರ ವಿರುದ್ಧ ಸಿಸಿಎ ನಿಯಮಗಳನುಸಾರ ಶಿಸ್ತು ಕ್ರಮ ಕೈಗೊಳ್ಳಲು ದೋಷಾರೋಪಣಾ ಪಟ್ಟಿ ಸಿದ್ಧಪಡಿಸಿ ಕಳುಹಿಸುವಂತೆ ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗೆ ಸೂಚಿಸಿದ್ದರು. ಅದರಂತೆ ಇದೀಗ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಪ್ರಕರಣವೇನು?:ಮಂಡ್ಯ ಗ್ರಾಮದ ಸರ್ವೆ ನಂ.೧೭೪/೮ರಲ್ಲಿ ೩ ಗುಂಟೆ ಜಮೀನಿದ್ದು, ೧೯೬೨-೬೩ನೇ ಸಾಲಿನ ಫಸಲು ಪಹಣಿಯಂತೆ ಪಿ.ಶ್ರೀನಿವಾಸಯ್ಯ ಎಂಬುವರ ಹೆಸರಿನಲ್ಲಿದ್ದು, ಅವರ ಹೆಸಸರಿನಲ್ಲೇ ಸರ್ಕಾರಕ್ಕೆ ಭೂಸ್ವಾಧೀನವಾಗಿದೆ. ಅಲ್ಲದೆ, ಸರ್ವೆ ನಂ.೧೭೪/೩ರಲ್ಲಿ ಮಂಚ ಬಿನ್ ಅಜ್ಜಹಳ್ಳಿ ಹೆಸರಿನಲ್ಲಿ ೧೪ ಗುಂಟೆ ಜಮೀನಿದ್ದು, ಅದನ್ನೂ ಸರ್ಕಾರ ಬೆಂಗಳೂರು-ಮೈಸೂರು ರಾಜ್ಯಹೆದ್ದಾರಿ, ತೋಟಗಾರಿಕೆ ಇಲಾಖೆ ಹಾಗೂ ಪ್ರವಾಸಿಮಂದಿರಕ್ಕೆ ಸೇರಿದ ಜಾಗವಾಗಿದೆ. ವಾಸ್ತವದಲ್ಲಿ ಸರ್ವೆ ನಂ.೧೭೪ರ ಸಂಪೂರ್ಣ ಜಮೀನೆಲ್ಲವೂ ಸರ್ಕಾರಕ್ಕೆ ಸ್ವಾಧೀನವಾಗಿದೆ. ಈ ಭೂ ಸ್ವಾಧೀನವಾಗಿರುವ ೧೭೪/೯ರ ೩ ಗುಂಟೆ ಜಮೀನು ಪಿ.ಶ್ರೀನಿವಾಸಯ್ಯನವರ ಹೆಸರಿನಲ್ಲಿದ್ದರೂ ಕೂಡ ಮಂಚ ಬಿನ್ ಅಜ್ಜಹಳ್ಳಿ ಹೆಸರಿಗೆ ಆರ್‌ಟಿಸಿ ತಿದ್ದಿರುವುದು ದಾಖಲೆಗಳಿಂದ ದೃಢಪಟ್ಟಿದೆ.ಆರ್‌ಟಿಸಿ ದುರ್ಬಳಕೆ:ಈ ಹಿಂದೆಯೇ ಮೃತಪಟ್ಟಿರುವ ಮಂಚ ಬಿನ್ ಅಜ್ಜಹಳ್ಳಿ ಹೆಸರಿನಲ್ಲಿದ್ದ ಕಂಪ್ಯೂಟರ್ ಆರ್‌ಟಿಸಿಯನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಿ ಜಮೀನನ್ನು ಕಬಳಿಕೆ ಮಾಡುವ ಸಲುವಾಗಿ ಮದ್ದೂರು ತಾಲೂಕು ಯಡವನಹಳ್ಳಿ ಗ್ರಾಮದ ಪಿ.ಸಿ.ಕೃಷ್ಣೇಗೌಡ ಎಂಬುವರು ಸಂಚು ರೂಪಿಸಿ ಮಂಚ ಎಂಬ ಹೆಸರಿನಲ್ಲಿ ಆಧಾರ್ ಕಾರ್ಡ್ ಸೃಷ್ಟಿಸಿ ಯಾವುದೋ ವ್ಯಕ್ತಿಯನ್ನು ಮಂಚ ಎಂದು ಬಿಂಬಿಸಿ ೩ ಗುಂಟೆ ಜಮೀನನ್ನು ೨೮ ಫೆಬ್ರವರಿ ೨೦೨೨ರಂದು ೨೩,೧೪,೨೭೬ ರು.ಗಳಿಗೆ ಕ್ರಯ ಮಾಡಿಕೊಂಡಿರುವುದಾಗಿ ದಾಖಲೆಗಳಲ್ಲಿ ನಮೂದಿಸಿದ್ದರು.ಖಾತೆಗೆ ರಾಜಸ್ವ ನಿರೀಕ್ಷಕರ ತಿರಸ್ಕಾರ:ಈ ಸರ್ಕಾರಿ ಜಮೀನಿನ ಕುರಿತು ಕಸಬಾ-ಒಂದನೇ ವೃತ್ತದ ರಾಜಸ್ವ ನಿರೀಕ್ಷಕರು ನೀಡಿರುವ ವರದಿಯಲ್ಲಿ ಮಂಚ ಎಂಬುವರು ನೀಡಿರುವ ವಿಳಾಸದಲ್ಲಿ ವಾಸವಿರುವುದಿಲ್ಲ. ಸರ್ವೆ ನಂ.೧೭೪/೮ರ ಆರ್‌ಟಿಸಿಯಲ್ಲಿ ಎಂ.ಆರ್.ಸಂಖ್ಯೆ ನಮೂದಾಗಿರುವುದಿಲ್ಲ. ಖಾತೆದಾರರು ವಿಸ್ತೀರ್ಣದಲ್ಲಿ ಅನುಭವದಲ್ಲಿರುವುದಿಲ್ಲ. ಹಕ್ಕು ದಾಖಲೆ ಮತ್ತು ಖಾತೆದಾರರ ಬಗ್ಗೆ ಸಂಶಯವಿರುವುದರಿಂದ ಕ್ರಯದಂತೆ ಖಾತೆ ಮಾಡಲು ಸಾಧ್ಯವಿಲ್ಲವೆಂದು ತಿರಸ್ಕರಿಸಿದ್ದಾರೆ. ತಹಸೀಲ್ದಾರ್ ಅಧಿಕಾರ ದುರುಪಯೋಗ:ಆದರೂ ತಾಲೂಕು ತಹಸೀಲ್ದಾರ್ ಅವರು ಕಾನೂನುಬಾಹೀರವಾಗಿ ೨೫ ಜುಲೈ ೨೦೨೨ರಂದು ಅಧಿಕಾರ ದುರುಪಯೋಗಪಡಿಸಿಕೊಂಡು ಹಣದ ಆಮಿಷಕ್ಕೆ ಒಳಗಾಗಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಪಿ.ಸಿ.ಕೃಷ್ಣೇಗೌಡ ಹೆಸರಿಗೆ ಖಾತೆ ಮಾಡಿಕೊಟ್ಟಿರುವುದು ಕಂಡುಬಂದಿದೆ. ಇದಲ್ಲದೆ ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನಾಧಿಕಾರಿಗಳು ೧೮ ಆಗಸ್ಟ್ ೨೦೨೨ರಂದು ಕೃಷ್ಣೇಗೌಡರಿಗೆ ನೀಡಿರುವ ಹಿಂಬರಹದಲ್ಲಿ ಮಂಡ್ಯ ಗ್ರಾಮದ ಸರ್ವೆ ನಂ.೧೭೪/೮ ರ ಜಮೀನು ಹಳೆಯ ಬೆಂಗಳೂರು-ಮೈಸೂರು ರಸ್ತೆ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಭೂ ಉಪಯೋಗ ಕೋರಿ ಪಿ.ಸಿ.ಕೃಷ್ಣೇಗೌಡರು ಸಲ್ಲಿಸಿರುವ ಅರ್ಜಿಯಲ್ಲಿ ತೋರಿಸಿರುವ ಕಚ್ಚಾನಕ್ಷೆಯನ್ನು ಸ್ವತಃ ಅವರೇ ಸೃಷ್ಟಿಸಿಕೊಂಡಿದ್ದಾರೆಂದು ಹೇಳಲಾಗಿದೆ.
ಉಪವಿಭಾಗಾಧಿಕಾರಿ ವರದಿಯಲ್ಲಿ ದೃಢ:ಮಂಡ್ಯದ ಸರ್ವೆ ನಂ. ೧೭೪/೮ರ ೩ ಗುಂಟೆ ಜಮೀನು ಮಂಡ್ಯ ನಗರದ ವಿಸ್ತರಣೆಗಾಗಿ ಭೂಸ್ವಾಧಿನಗೊಂಡಿರುವ ಜಮೀನಾಗಿರುತ್ತದೆ. ನಗರಸಭೆ ವ್ಯಾಪ್ತಿಗೊಳಪಡುವ ಈ ಜಮೀನು ಸ್ವಾಧೀನಗೊಂಡ ನಂತರ ಕಾಲಮಿತಿಯೊಳಗೆ ಬದಲಾವಣೆಯಾಗದ ಪಹಣಿಯ ನಮೂದನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಪಹಣಿಯಲ್ಲಿ ದಾಖಲಾಗಿರುವ ವ್ಯಕ್ತಿಯ ಹೆಸರಿನ ಬೇರೊಬ್ಬ ವ್ಯಕ್ತಿಯಿಂದ ಕ್ರಯ ಮಾಡಿರುವುದು ಕಂಡುಬಂದಿದೆ. ಹಿಂದೆ ಮಂಡ್ಯ ತಹಸೀಲ್ದಾರ್ ಆಗಿದ್ದ ಕುಂಞ ಅಹಮದ್ ಅವರು ನಗರದ ಹೃದಯ ಭಾಗದಲ್ಲಿರುವ ಬಂದೀಗೌಡ ಬಡಾವಣೆಯ ಕೋಟ್ಯಂತರ ರು. ಬೆಲೆಬಾಳುವ ಜಮೀನಿಗೆ ಸಂಬಂಧಿಸಿದಂತೆ ರಾಜಸ್ವ ನಿರೀಕ್ಷಕರ ವರದಿಯನ್ನು ನಿರ್ಲಕ್ಷಿಸಿ ಸ್ಥಳ ಹಾಗೂ ದಾಖಲೆಗಳನ್ನು ಪರಿಶೀಲಿಸದೆ ಮಾಡಿರುವ ಆದೇಶ ಕಾನೂನುಬಾಹೀರವಾಗಿರುತ್ತದೆ ಎಂದು ಉಪವಿಭಾಗಾಧಿಕಾರಿ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ.ಅಕ್ರಮ ಖಾತೆ ರದ್ದು:ಮಂಡ್ಯ ಗ್ರಾಮದ ಸರ್ವೆ ನಂ.೧೭೪/೮ರಲ್ಲಿರುವ ಕೋಟ್ಯಂತರ ರು. ಮೌಲ್ಯದ ೩ ಗುಂಟೆ ಜಮೀನನ್ನು ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶದಂತೆ ನಗರಸಭೆ, ಮಂಡ್ಯ ಹೆಸರಿಗೆ ಮಂಡ್ಯ ತಹಸೀಲ್ದಾರ್ ಅವರು ಪಹಣಿಯಲ್ಲಿ ದಾಖಲಿಸಿದ್ದಾರೆ. ಇದರ ನಡುವೆಯೂ ಆರೋಪಿ ಯಡವನಹಳ್ಳಿ ಕೃಷ್ಣೇಗೌಡರವರು ಸರ್ಕಾರಿ ಜಮೀನಿಗೆ ತಂತಿಬೇಲಿ ಹಾಕಿ ಸ್ವತ್ತನ್ನು ಅತಿಕ್ರಮಣ ಮಾಡಲು ಯತ್ನಿಸಿದ್ದರು. ನಂತರದಲ್ಲಿ ಅದನ್ನು ನಗರಸಭೆಯವರು ತೆರವುಗೊಳಿಸಿದ್ದಾರೆ.ಸರ್ಕಾರಿ ಜಮೀನು ಅಕ್ರಮ ಪರಭಾರೆ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮಗಳನ್ನು ಜರುಗಿಸಿ ಸರ್ಕಾರಿ ಆಸ್ತಿಗಳನ್ನು ಉಳಿಸಿಕೊಳ್ಳುವುದು ಅಗತ್ಯವಿದೆ. ಈ ವ್ಯಕ್ತಿಗಳು ಮತ್ತು ಅಧಿಕಾರಿ-ಸಿಬ್ಬಂದಿ ಬೇರೆ ಕಡೆಗಳಳಲ್ಲೂ ಸರ್ಕಾರಿ ಆಸ್ತಿಯನ್ನು ಭೂಕಬಳಿಕೆ ಮಾಡಿರುವ ಬಗ್ಗೆಯೂ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕಿದೆ.- ಕೆ.ಆರ್.ರವೀಂದ್ರ, ಸಾಮಾಜಿಕ ಹೋರಾಟಗಾರ