ಸಾರಾಂಶ
ಸಾರ್ವಜನಿಕ ಸ್ಥಳದಲ್ಲಿ ನಕಲಿ ಎಕೆ 47 ಗನ್ ಹಿಡಿದು ಸಾರ್ವಜನಿಕರಲ್ಲಿ ಭಯ ಸೃಷ್ಟಿಸಿದ ಆರೋಪದಡಿ ರೀಲ್ಸ್ ಶೋಕಿಲಾಲನನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾರ್ವಜನಿಕ ಸ್ಥಳದಲ್ಲಿ ನಕಲಿ ಎಕೆ 47 ಗನ್ ಹಿಡಿದು ಸಾರ್ವಜನಿಕರಲ್ಲಿ ಭಯ ಸೃಷ್ಟಿಸಿದ ಆರೋಪದಡಿ ರೀಲ್ಸ್ ಶೋಕಿಲಾಲನನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.ಜೆ.ಪಿ.ನಗರ ನಿವಾಸಿ ಅರುಣ್ ಕಠಾರೆ(26) ಬಂಧಿತ. ಆರೋಪಿಯು ಜೂ.9ರಂದು ಮಧ್ಯಾಹ್ನ ಎಕೆ 47 ಗನ್ ಹಿಡಿದ ಬಾಡಿ ಗಾರ್ಡ್‌ಗಳ ಜತೆಗೆ ಚೊಕ್ಕನಹಳ್ಳಿಯ ಭಾರತೀಯ ಸಿಟಿಯ ಲೀಲಾ ಹೋಟೆಲ್ ಬಳಿ ಬಂದಿದ್ದು, ಕೆಲವರಿಗೆ ಗನ್ ತೋರಿಸಿ ಹೆದರಿಸಿ ಕಾರಿನಲ್ಲಿ ಕೂರಿಸಿಕೊಂಡು ತೆರಳಿದ್ದ. ಈ ಘಟನೆಯಿಂದ ಸಾರ್ವಜನಿಕರು ಆತಂಕಗೊಂಡು ಗಸ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅಂತೆಯೇ ಆರೋಪಿಯು ಗನ್ ಹಿಡಿದ ಬಾಡಿ ಗಾರ್ಡ್‌ಗಳ ಜತೆಗೆ ಕಾರಿನಲ್ಲಿ ತೆರಳುವ ಇನ್ಸ್‌ಸ್ಟಾಗ್ರಾಮ್ ರೀಲ್ಸ್ ವಿಡಿಯೋ ತೋರಿಸಿದ್ದರು. ಈ ಮಾಹಿತಿ ಮೇರೆಗೆ ಕೊತ್ತನೂರು ಠಾಣೆ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಉಪದ್ರವ ಉಂಟು ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿ ಆರೋಪಿ ಅರುಣ್ ಕಠಾರೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಯಾರು ಈ ರೀಲ್ಸ್ ಶೋಕಿಲಾಲ?
ಚಿತ್ರದುರ್ಗ ಮೂಲದ ಅರುಣ್ ಕಠಾರೆ ರೀಲ್ಸ್ ಶೋಕಿಲಾಲ. ಈತ ಮೈ ತುಂಬಾ ನಕಲಿ ಚಿನ್ನಾಭರಣ ತೊಟ್ಟು, ನಕಲಿ ಗನ್ ಹಿಡಿದ ಬಾಡಿ ಗಾರ್ಡ್‌ಗಳು, ಸುಂದರ ಯುವತಿಯರು, ಐಷಾರಾಮಿ ಕಾರುಗಳು, ಬೈಕ್‌ಗಳ ಜತೆಗೆ ಐಷಾರಾಮಿ ಜೀವನ ಪ್ರದರ್ಶಿಸುವ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕುತ್ತಿದ್ದ. ಈತನಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಿಂಬಾಲಕರು ಇದ್ದಾರೆ. ಸದ್ಯ ಬೆಂಗಳೂರಿನ ಜೆ.ಪಿ.ನಗರದಲ್ಲಿ ನೆಲೆಸಿದ್ದ ಈತ ಇದೀಗ ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಹುಚ್ಚಾಟವಾಡಿ ಜೈಲು ಸೇರಿದ್ದಾನೆ.