ಬಿಡದಿ ರೈಲು ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ

| Published : Mar 26 2025, 01:34 AM IST

ಸಾರಾಂಶ

ರಾಮನಗರ: ಬಿಡದಿ ರೈಲು ನಿಲ್ದಾಣದಲ್ಲಿರುವ ರೈಲ್ವೆ ನಿಯಂತ್ರಣ ಕೊಠಡಿಗೆ ಅಪರಿಚಿತರು ಹುಸಿ ಬಾಂಬ್ ಕರೆ ಮಾಡಿದ್ದು, ಇದರಿಂದಾಗಿ ನಿಲ್ದಾಣದಲ್ಲಿ ಮಂಗಳವಾರ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.

ರಾಮನಗರ: ಬಿಡದಿ ರೈಲು ನಿಲ್ದಾಣದಲ್ಲಿರುವ ರೈಲ್ವೆ ನಿಯಂತ್ರಣ ಕೊಠಡಿಗೆ ಅಪರಿಚಿತರು ಹುಸಿ ಬಾಂಬ್ ಕರೆ ಮಾಡಿದ್ದು, ಇದರಿಂದಾಗಿ ನಿಲ್ದಾಣದಲ್ಲಿ ಮಂಗಳವಾರ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಹುಸಿ ಬಾಂಬ್ ಕರೆ ಬಂದ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳ, ರೈಲ್ವೆ ಪೊಲೀಸರು ನಿಲ್ದಾಣದಲ್ಲಿ ಬೆಳಗ್ಗೆ ಬಾಂಬ್‌ಗಾಗಿ ಶೋಧ ಕಾರ್ಯಾಚರಣೆ ನಡೆಸಿದರು. ಅಪರಿಚಿತ ವ್ಯಕ್ತಿ ಸೋಮವಾರ ರಾತ್ರಿ 12ರ ಸುಮಾರಿಗೆ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ನಿಲ್ದಾಣದಲ್ಲಿ ಬಾಂಬ್ ಇರುವುದಾಗಿ ಹೇಳಿ ಕರೆ ಸ್ಥಗಿತಗೊಳಿಸಿದ್ದಾನೆ. ರಾತ್ರಿಯೇ ನಿಲ್ದಾಣಕ್ಕೆ ತೆರಳಿ ಶೋಧ ನಡೆಸಿದ್ದೆವು. ಆಗ ಏನೂ ಸಿಕ್ಕಿರಲಿಲ್ಲ. ಬಳಿಕ, ಬೆಳಗ್ಗೆ ಮತ್ತೊಮ್ಮೆ ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳ ಹಾಗೂ ರೈಲ್ವೆ ಪೊಲೀಸರು ಇಡೀ ನಿಲ್ದಾಣದಲ್ಲಿ ಶೋಧ ನಡೆಸಿದ್ದೇವೆ. ಆದರೆ, ಬಾಂಬ್ ಪತ್ತೆಯಾಗಿಲ್ಲ. ನಿಲ್ದಾಣದಲ್ಲಿ ಬಾಂಬ್ ಇರುವುದಾಗಿ ಕಿಡಿಗೇಡಿಯೊಬ್ಬ ಹುಸಿ ಕರೆ ಮಾಡಿದ್ದಾನೆ. ಎಲ್ಲಿಂದ ಕರೆ ಬಂದಿದೆ? ಕರೆ ಮಾಡಿದವರು ಯಾರು? ಎಂಬುದರ ಮಾಹಿತಿಯನ್ನು ಸಹ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.