ಸಾರಾಂಶ
ದಾಂಡೇಲಿ: ನಗರದ ಲೆನಿನ್ ರಸ್ತೆಯಲ್ಲಿ ವೈದ್ಯ ವೃತ್ತಿ ಮಾಡಿಕೊಂಡಿರುವ ವ್ಯಕ್ತಿಯೊಬ್ಬರಿಗೆ ನೀನು ನಕಲಿ ವೈದ್ಯ ಎಂದು ಬೆದರಿಕೆಯನ್ನೊಡ್ಡಿ ₹೨.೫೦ ಲಕ್ಷ ಹಣಕ್ಕೆ ಬೇಡಿಕೆಯಿಟ್ಟು ಬ್ಲಾಕ್‌ಮೇಲ್ ಮಾಡಿದ ಹುಬ್ಬಳ್ಳಿ ಮೂಲದ ಮೂವರು ನಕಲಿ ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ ಮೂಲದ ವಿಜಯ ಶಂಕರ ಮೇತ್ರಾಣಿ, ಧರ್ಮರಾಜ ನಾರಾಯಣ ಕಠಾರೆ, ಸತೀಶ ಬಾಗವಾನ ಕೇದಾರಿ ಎಂಬ ಮೂವರು ಬಂಧಿತ ನಕಲಿ ಪತ್ರಕರ್ತರು.ಇವರು ನಾವು ಹುಬ್ಬಳ್ಳಿಯ ವಿಜಯ-೯ ನ್ಯೂಸ್ ನವರು ಅಂತಾ ಹೇಳಿ ದಾಂಡೇಲಿಯಲ್ಲಿ ಹಲವು ವರ್ಷಗಳಿಂದ ಪ್ರಕೃತಿ ಚಿಕಿತ್ಸಕರಾಗಿರುವ ಲೆನಿನ್ ರಸ್ತೆಯಲ್ಲಿರುವ ಅಶೋಕ ಶಂಭು ಪರಬ ಅವರ ಕ್ಲಿನಿಕ್‌ಗೆ ಬಂದು ನೀವು ನಕಲಿ ವೈದ್ಯನಿದ್ದು, ನಿಮ್ಮ ಬಗ್ಗೆ ನ್ಯೂಸ್ ಮಾಡಿ ನಮ್ಮ ಚಾನಲ್ ನಲ್ಲಿ ಸುದ್ದಿ ಪ್ರಸಾರ ಮಾಡುತ್ತೇವೆ ಅಂತಾ ಹೇಳಿ ಹೆದರಿಸಿ, ವಿಜಯ-೯ ನ್ಯೂಸ್ ಎಂದು ಯೂಟ್ಯೂಬ್ ಚಾನಲ್ ವರದಿ ಪ್ರಸಾರ ಮಾಡಿದ್ದಾರೆ.
ಬಳಿಕ ಪರಬ ಅವರಿಗೆ ಕರೆ ಮಾಡಿ ಈಗಾಗಲೇ ಸಣ್ಣ ಚಾನಲ್ ನಲ್ಲಿ ಸುದ್ದಿ ಪ್ರಸಾರ ಮಾಡಿದ್ದೇವೆ. ನೀವು ನಮಗೆ ₹೨.೫ ಲಕ್ಷ ಹಣ ಕೊಡದಿದ್ದರೆ. ಈ ಸುದ್ದಿಯನ್ನು ದೊಡ್ಡದೊಡ್ಡ ಚಾನಲ್‌ಗಳಲ್ಲಿ ಸುದ್ದಿ ಪ್ರಸಾರ ಮಾಡುತ್ತೇವೆ ಮತ್ತು ತಾಲೂಕು ವೈದ್ಯಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಗೃಹ ಸಚಿವರಿಗೆ ವಿಡಿಯೋ ಕಳುಹಿಸಿ ನಿಮ್ಮ ಜೀವನ ಹಾಳು ಮಾಡುತ್ತೇವೆ ಎಂದು ಪದೇಪದೇ ಕರೆ ಮಾಡಿ ಹಣ ಕೊಡುವಂತೆ ಪೀಡಿಸಿದ್ದರು ಎನ್ನಲಾಗಿದೆ.ಭಾನುವಾರ ಮಧ್ಯಾಹ್ನ ಕ್ಲಿನಿಕ್‌ಗೆ ಬಂದು ಹಣ ಕೊಡುವಂತೆ ಹೆದರಿಸಿ ಬೆದರಿಸಿದ್ದಾರೆ ಎಂದು ಅಶೋಕ ಶಂಭು ಪರಬ ನಗರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದರು. ದೂರು ಸ್ವೀಕರಿಸಿ ತನಿಖೆಗೆ ಇಳಿದ ನಗರ ಪೊಲೀಸ ಠಾಣೆಯ ತನಿಖಾ ವಿಭಾಗದ ಪಿಎಸ್‌ಐ ಕಿರಣ ಪಾಟೀಲ ಈ ಮೂವರು ನಕಲಿ ಪತ್ರಕರ್ತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.