ಸಾರಾಂಶ
ಎನ್.ನಾಗೇಂದ್ರಸ್ವಾಮಿ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಪಟ್ಟಣದ ಶ್ರೀನಿವಾಸ್ ಟಾಕೀಸ್ ರಸ್ತೆಯಲ್ಲಿ ಅನಧಿಕೃತ ಅಬ್ದುಲ್ ಕಲಾಂ ಸಂಸ್ಥೆಗೆ ಪರಿಶೀಲಿಸದೆ ಯೋಗ, ಗಣಕಯಂತ್ರ ತರಬೇತಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವಂತೆ ಆದೇಶ ನೀಡಿ ಭ್ರಷ್ಟಾಚಾರಕ್ಕೆ ಆಸ್ಪದ ಮಾಡಿಕೊಟ್ಟು ವಿವಾದಕ್ಕೀಡಾಗಿದ್ದ ಡಿಡಿಪಿಐ ರಾಮಚಂದ್ರರಾಜೇ ಅರಸ್ ವಿರುದ್ಧ ಸಾರ್ವಜನಿಕ ಶಿಕ್ಷಣ ಇಲಾಖೆ ಫೆ.19ರಂದು ಸುದೀರ್ಘ ವಿಚಾರಣೆಗೆ ಹಾಜರಾಗುವಂತೆ ಜಂಟಿ ನಿರ್ದೇಶಕರು ಆದೇಶಿಸಿದ್ದಾರೆ.
ಅಬ್ದುಲ್ ಕಲಾಂ ಸಂಸ್ಥೆ ಡಿಡಿಪಿಐಗೆ 6 ತಿಂಗಳ ಹಿಂದೆ ನಮ್ಮ ಸಂಸ್ಥೆ ವತಿಯಿಂದ ಶಾಲೆಗಳಿಗೆ ಉಚಿತ ಕಂಪ್ಯೂಟರ್, ಯೋಗ ಶಿಕ್ಷಕರನ್ನು ನೇಮಕ ಮಾಡಿ ಶಾಲೆಗೆ ಕಳುಹಿಸಿಕೊಡಲಾಗುತ್ತಿದ್ದು ಅನುಮತಿಗಾಗಿ ಮನವಿ ನೀಡಿದ ಹಿನ್ನೆಲೆ ಡಿಡಿಪಿಐ ಪರಿಶೀಲಿಸದೆ 2024ರ ಆ.26ರಂದು ಚಾ.ನಗರ ಜಿಲ್ಲೆಯ ಕೊಳ್ಳೇಗಾಲ, ಹನೂರು, ಯಳಂದೂರು, ಗುಂಡ್ಲುಪೇಟೆ ಸೇರಿದಂತೆ ಹಲವೆಡೆ ಶಾಲೆಗಳಲ್ಲಿ ಗಣಕಯಂತ್ರ, ಯೋಗ ತರಬೇತಿ ಶಿಕ್ಷಕರನ್ನು ನೇಮಕಕ್ಕೆ ಷರತ್ತು ವಿಧಿಸಿ ನಿಯಯ ಮೀರಿ ಆದೇಶ ನೀಡಿದ್ದರು. ಡಿಡಿಪಿಐ ಆದೇಶದ ಹಿನ್ನೆಲೆ ತರಬೇತಿ ಶಿಕ್ಷಕರ ನೇಮಕಾತಿ ಸಾಕಷ್ಟು ವಿವಾದ, ಹಲವು ಅನುಮಾನಗಳಿಗೂ ಕಾರಣವಾಗಿತ್ತು. ಕನ್ನಡಪ್ರಭ ಫಲಪ್ರಭ, ದೂರಿನ ಹಿನ್ನೆಲೆ ಎಚ್ಚೆತ್ತ ಇಲಾಖೆ ಅಬ್ದುಲ್ ಕಲಾಂ ಸಂಸ್ಥೆ ಅಧಿಕೃತವಲ್ಲ, ಹಾಗಿದ್ದರೂ ನಿಯಮ ಮೀರಿ ಕಂಪ್ಯೂಟರ್ ಮತ್ತು ಯೋಗ ಶಿಕ್ಷಕರ ನೇಮಕಾತಿಗೆ ಆದೇಶ ನೀಡಿದ ಡಿಡಿಪಿಐ ಆದೇಶದ ವಿರುದ್ಧ ಕನ್ನಡಪ್ರಭ ಪತ್ರಿಕೆ ಸುದೀರ್ಘ ವರದಿ ಪ್ರಕಟಿಸಿ ಗಣಕಯಂತ್ರ ಹಾಗೂ ಯೋಗ ಶಿಕ್ಷಕರಿಂದ 60 ಸಾವಿರದಿಂದ 1 ಲಕ್ಷದ 70 ಸಾವಿರದ ತನಕ ವಸೂಲಿ ಮಾಡಲಾಗುತ್ತಿರುವ ಕುರಿತು ನೈಜ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಈ ಸಂಬಂಧ ನಿಯಮ ಮೀರಿ ಕಲಾಂ ಸಂಸ್ಥೆ ಅಟೆಂಡರ್ ನೇಮಕ ಮಾಡಿಕೊಂಡು ಇನ್ನಷ್ಟು ವಿವಾದಕ್ಕೂ ಕಾರಣವಾಗಿತ್ತು.ಈ ವಿಚಾರ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದರೂ ಜಿಲ್ಲಾಡಳಿತ ಈ ಸಂಬಂಧ ಮೌನ ವಹಿಸಿತ್ತು. ಈ ಹಿನ್ನೆಲೆ ನಿರಂಜನಮೂರ್ತಿ ಎಂಬುವರು ಜ.4 ರಂದು ಇಲ್ಲಿ ನಡೆದಿರುವ ಅಕ್ರಮ, ಸರ್ಕಾರಿ ನಿಮಯ ಉಲ್ಲಂಘನೆ ಹಾಗೂ ಅನಧಿಕೃತ ಸಂಸ್ಥೆಗೆ ನೇಮಕಾತಿ ಆದೇಶ ನೀಡಿದ ಡಿಡಿಪಿಐ ವಿರುದ್ಧ ಕ್ರಮಕೈಗೊಳ್ಳುವಂತೆ ಲಿಖಿತ ದೂರನ್ನು ಮುಖ್ಯಮಂತ್ರಿ, ಶಿಕ್ಷಣ ಸಚಿವರು, ಇಲಾಖಾ ಆಯುಕ್ತರು ಸೇರಿದಂತೆ ಹಲವರಿಗೆ ಸಲ್ಲಿಸಿದ್ದರು. ದೂರಿನ ಹಿನ್ನೆಲೆ ಫೆ.19ರಂದು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಇಲಾಖಾ ವಿಚಾರಣೆ ಕಾಯ್ದಿರಿಸಿ ಆದೇಶಿಸಿದ್ದಾರೆ. ನಿರಂಜನಮೂರ್ತಿ ದೂರಿನ ಹಿನ್ನೆಲೆ ಫೆ.7ರಂದೆ ನಡೆಯಬೇಕಿದ್ದೆ ವಿಚಾರಣೆ 19ರಂದು ನಡೆಸಲಾಗುತ್ತಿದ್ದು ವಿಚಾರಣೆ ವೇಳೆ ಖುದ್ದು ಹಾಜರಿದ್ದು ಕಡತಗಳ ದಾಖಲೆ ಸಮೇತ ಸಮಜಾಯಿಸಿ ನೀಡುವಂತೆ ಜಂಟಿ ನಿರ್ದೇಶಕರು ನಿರ್ದೇಶನ ನೀಡಿದ್ದಾರೆ.
ದೂರುದಾರರ ದೂರಿನಲ್ಲೇನಿದೆ?:ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಡಿ.25ರಂದು ಲಿಖಿತ ದೂರು ಸಲ್ಲಿಸಿದ್ದಾರೆ, ಸಿಎಂ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಇಲಾಖೆ ಆಯುಕ್ತರು ಸೇರಿದಂತೆ ಹಲವರಿಗೆ ಲಿಖಿತ ದೂರು ನೀಡಿದ್ದು ಕಲಾಂ ಸಂಸ್ಥೆಗೆ ಆದೇಶ ನೀಡುವ ಮುನ್ನ ಡಿಡಿಪಿಐ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ, ಹಿರಿಯ ಅಧಿಕಾರಿಗಳ ನಿರ್ದೇಶನ, ಆದೇಶವಿಲ್ಲದಿದ್ದರೂ ಏಕಪಕ್ಷೀಯ ಆದೇಶ ವಿತರಿಸಿ ಭ್ರಷ್ಟಾಚಾರಕ್ಕೆ ಆಸ್ಪದ ಮಾಡಿಕೊಟ್ಟಿದ್ದಾರೆ. ಕಲಾ ಸಂಸ್ಧೆ ಅಧಿಕೃತವೇ, ಅದು ಸಾಮಾಜಿಕ ಕಳಕಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆಯೇ? ಎಂಬಿತ್ಯಾದಿ ಮಾಹಿತಿ ಸಂಗ್ರಹಿಸದೆ, ಆದೇಶ ನೀಡಿ ಲೋಪ ಎಸಗಲಾಗಿದ್ದು ಇನ್ನು ಆದೇಶವನ್ನೆ ಪಡೆಯದ ಕಲಾಂ ಸಂಸ್ಥೆಯ ಪದಾಧಿಕಾರಿಗಳು ಆದೇಶವಿಲ್ಲದಿದ್ದರೂ ಅಟೆಂಡರ್‌ಗಳನ್ನು ಲಕ್ಷಾಂತರ ರು. ಪಡೆದು ನೇಮಕ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದ್ದರೂ ಡಿಡಿಪಿಐ ಯಾವುದೆ ಕ್ರಮ ಕ್ರಮಕೈಗೊಂಡಿಲ್ಲ. ನಿಯಮ ಮೀರಿ ತಮಗಿಲ್ಲದ ಅಧಿಕಾರ ಚಲಾಯಿಸಿ ಹಣ ಸಂಪಾದನೆಗೆ ಅನಧಿಕೃತ ಕಲಾಂ ಸಂಸ್ಥೆಗೆ ಆದೇಶ ವಿತರಿಸಿ ಈ ಸಂಬಂಧ ಕ್ರಮವಹಿಸಬೇಕು. ಕಲಾಂ ಸಂಸ್ಥೆಗೆ ಹನೂರು ಬಿಇಒ ಅಟೆಂಡರ್ ನೇಮಕ ಸರಿಯಲ್ಲ, ಕೂಡಲೆ ಶಾಲಾ ಮುಖ್ಯಶಿಕ್ಷಕರು ಕಲಾಂ ಸಂಸ್ಥೆ ನೇಮಿಸಿದ ಅಟೆಂಡರ್ ವಾಪಸ್ ಕಳುಹಿಸಿ ಎಂಬ ಆದೇಶ ಹೊರಡಿಸಿರುವುದು ಇಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬುದಕ್ಕೆ ಪುರಾವೆಯಾಗಿದ್ದು, ಇಲಾಖೆ ತನಿಖೆ ನಡೆಸಿ ಈ ಅವ್ಯವಹಾರದಲ್ಲಿ ಭಾಗಿಯಾದ ಡಿಡಿಪಿಐ ಹಾಗೂ ಇಲಾಖೆಯ ಮತ್ತಿತರ ವಿರುದ್ಧ ಕ್ರಮವಹಿಸುವಂತೆ ದೂರು ನೀಡಿದ್ದ ಹಿನ್ನೆಲೆ ಇಲಾಖೆ ವಿಚಾರಣೆ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
ಪೇಚಿಗೆ ಸಿಲುಕಿದ ಉಪನಿರ್ದೇಶಕ:ಅನಧಿಕೃತ ಸಂಸ್ಥೆಗೆ ಆದೇಶ ನೀಡಿ ಪೇಚಿಗೆ ಸಿಲುಕಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಮ್ಮ ಕಚೇರಿಯಲ್ಲೆ ತಾವೇ ನೀಡಿದ ಯಡವಟ್ಟು ಆದೇಶಕ್ಕಾಗಿ ಇಲಾಖೆ ವಿಚಾರಣೆ ಎದುರಿಸುವಂತಾಗಿದೆ. ಪರಿಶೀಲಿಸದೆ, ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಆದೇಶವಿಲ್ಲದೆ ಉಪನಿರ್ದೇಶಕರು ನೀಡಿದ ಈ ಆದೇಶ ಇಲಾಖಾ ನಿಯಮಗಳನ್ನೆ ಗಾಳಿಗೆ ತೂರಿದ ವಿವಾದಿತ ಆದೇಶವಾಗಿದ್ದು ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ. ಇತ್ತ ತನಿಖೆ, ಅತ್ತ ವಿಚಾರಣೆ:ಈ ಪ್ರಕರಣದಲ್ಲಿ ಸಾಕಷ್ಟು ಲೋಪ, ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿ ಬಂದ ಹಿನ್ನೆಲೆ ಈ ಕುರಿತು ಖುದ್ದು ಅನುಮತಿ ನೀಡಿದ ಡಿಡಿಪಿಐ ಅವರೇ ತನಿಖೆಗೆ ಡಿವೈಪಿಸಿ ನಾಗೇಂದ್ರ, ಜಿಲ್ಲಾ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ, ಹನೂರು ಬಿಇಒ ಗುರುಲಿಂಗಯ್ಯ ಅವರನ್ನು ತನಿಖೆಗೆ ನೇಮಿಸಿ ವರದಿ ನೀಡಲು ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ತನಿಖಾ ತಂಡದಲ್ಲಿ ಗುರುಲಿಂಗಯ್ಯ ಹೆಸರು ಸೇರ್ಪಡೆ ಬಗ್ಗೆ ನಾನಾ ಚರ್ಚೆ ನಡೆದಿದೆ ಎನ್ನಲಾಗಿದೆ. ಸದ್ಯ ಈ ಪ್ರಕರಣ ಈಗ ತನಿಖಾ ಅಂಗಳದಲ್ಲಿದ್ದು ಪ್ರಗತಿಯಲ್ಲಿದೆ. ಇನ್ನು ಈ ಪ್ರಕರಣದಲ್ಲಿ ಡಿಡಿಪಿಐ ಆದೇಶವನ್ನೆ ನಿಯಮ ಮೀರಿದ್ದು ಎಂಬ ಕಾರಣಕ್ಕಾಗಿ ದೂರಿನ ಹಿನ್ನೆಲೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರೇ ಸುದೀರ್ಘ ವಿಚಾರಣೆಗೆ ಆದೇಶಿಸಿರುವುದು ಸಾಕಷ್ಟು ಚರ್ಚೆಯ ಕೇಂದ್ರ ಬಿಂದುವಾಗಿದೆ. ತನಿಖೆ ಪಾರದರ್ಶಕವಾಗಿ ನಡೆಯಬೇಕು, ತಪ್ಪಿತಸ್ಥರಿಗೆ ಈ ಪ್ರಕರಣದಲ್ಲಿ ಶಿಕ್ಷೆಯಾಗಬೇಕು ಎನ್ನುತ್ತಾರೆ ದೂರುದಾರ ನಿರಂಜನಮೂರ್ತಿ.
;Resize=(128,128))
;Resize=(128,128))
;Resize=(128,128))
;Resize=(128,128))