ನಕಲಿ ಕಲಾಂ ಸಂಸ್ಥೆ: 12ರಂದು ಹಣ ವಾಪಸ್ ಪಾವತಿಸುವ ಭರವಸೆ

| Published : Jul 04 2025, 11:53 PM IST

ಸಾರಾಂಶ

ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಕಲಾಂ ಎಂಬ ಫೇಕ್ ಸಂಸ್ಥೆಯ ಶ್ರೀಕಂಠು, ಸುಂದರ ಮತ್ತು ಕೃಷ್ಣ ಎಂಬುವರನ್ನುಕರೆಸಿ ಹೋರಾಟಗಾರ ಬಸವರಾಜು ಅವರ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಯಿತು.

ಕನ್ನಡಪ್ರಭವಾರ್ತೆ ಕೊಳ್ಳೇಗಾಲ

ಕೊಳ್ಳೇಗಾಲದಲ್ಲಿ ಅಸ್ತಿತ್ವದಲ್ಲೇ ಇಲ್ಲದ ನಕಲಿ ಅಬ್ದುಲ್ ಕಲಾಂ ಸಂಸ್ಥೆ ಹಾಗೂ ಚಾಮರಾಜನಗರ ಡಿಡಿಪಿಐ ರಾಮಚಂದ್ರರಾಜೇ ಅರಸ್ ಅವರ ಆದೇಶವನ್ನು ನಂಬಿ ಲಕ್ಷಾಂತರ ರು. ಕಳೆದುಕೊಂವರ ಸಂಖ್ಯೆ ಬರೋಬ್ಬರಿ 170ಕ್ಕೂ ಅಧಿಕವಾಗಿದ್ದು, ಪಟ್ಟಣ ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯಲ್ಲಿ ಹಣ ವಾಪಸ್‌ ನೀಡುವುದಾಗಿ ಭರವಸೆ ನೀಡಿದ್ದರಿಂದ ಸಂತ್ರಸ್ತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಅಬ್ದುಲ್ ಕಲಾಂ ಸಂಸ್ಥೆ ಪದಾಧಿಕಾರಿಗಳೆಂದು ಹೇಳಿಕೊಂಡವರು ನಮ್ಮನ್ನು ಗುಮಾಸ್ತ, ಯೋಗ, ಕಂಪ್ಯೂಟರ್ ತರಬೇತಿಗೆ ನೇಮಿಸಿಕೊಂಡು ಸಂಬಳ ನೀಡುತ್ತೆವೆ ಎಂದು ನಂಬಿಸಿ 170ಮಂದಿಯಿಂದ ಒಂದೂವರೆ ಲಕ್ಷದಿಂದ 2ಲಕ್ಷದ ತನಕ ಹಣ ವಸೂಲಿ ಮಾಡಿದ್ದಾರೆ. ನಮ್ಮನ್ನು ನೇಮಸಿಕೊಂಡು ಆರೇಳು ತಿಂಗಳಿಂದ ಸಂಬಳವನ್ನೂ ನೀಡಿಲ್ಲ. ನಮ್ಮಿಂದ ವಸೂಲಿ ಮಾಡಿದ ಹಣವನ್ನೂ ಹಿಂತಿರುಗಿಸದೆ ವಂಚಿಸಲಾಗಿದೆ ಎಂದು ನೊಂದ ಯುವಕ, ಯುವತಿಯರು ಪಟ್ಟಣ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ರೈತ ಹೋರಾಟಗಾರ ಅಣಗಳ್ಳಿ ಬಸವರಾಜು ನೇತೃತ್ವದಲ್ಲಿ ವಂಚನೆಗಳಗೊದ ಪ್ರಭುಸ್ವಾಮಿ, ಸೀಮಾ, ಐಶ್ವರ್ಯ, ಜ್ಯೋತಿ, ಪ್ರೇಮಾವತಿ, ಎಸ್.ರಾಧ, ಲಕ್ಷ್ಮಿ, ಸುಧಾ, ಶಾರದ, ರಾಧಿಕಾ, ಹೇಮಂತ್, ಶ್ರೀಧರ್, ದೊರೆರಾಜು, ಪವಿತ್ರ, ಪುಟ್ಟತಾಯಿ, ಪವಿತ್ರಾ, ಬಿ. ಪವಿತ್ರಾ, ಸುನೀಲ್, ಸುಧಾ, ದೀಪಿಕಾ ಸೇರಿ ಹಲವರು ಡಿವೈಎಸ್ಪಿ ಜೊತೆ ಚರ್ಚಿಸಿದ ಬಳಿಕ ಎಎಸೈ ಅವರಿಗೆ ಲಿಖಿತ ದೂರು ಸಲ್ಲಿಸಿದ್ದರು.

ದೂರಿನ ಹಿನ್ನೆಲೆಯಲ್ಲಿ ಕಲಾಂ ಸಂಸ್ಥೆಯ ಪದಾಧಿಕಾರಿಗಳೆಂದು ಹೇಳಿಕೊಂಡು ನಿರುದ್ಯೋಗಿಗಳಿಂದ ಹಣ ವಸೂಲಿ ಮಾಡಿದ್ದ ಬಸ್ತಿಪುರದ ಶ್ರೀಕಂಠು, ಕೃಷ್ಣ, ಸುಂದರ್ ಎಂಬುವರನ್ನು ಕರೆಸಿ ವಿಚಾರಣೆ ನಡೆಸಲಾಯಿತು. ಸತೀಶ್ ಎಂಬ ಸಂಸ್ಥೆಯ ಸಂಯೋಜಕರಿಗೆ ನಾವು ಇಲ್ಲಿಂದ ವಸೂಲಿ ಮಾಡಿದ ಹಣದಲ್ಲಿ ಸ್ವಲ್ಪ ನೀಡಿದ್ದು, ನಾವು ನಿರುದ್ಯೋಗಿಗಳಿಂದ ವಸೂಲಿ ಮಾಡಿದ ಹಣದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಲಕ್ಷ ರು. ಜು.12ರಂದು ನೀಡುವುದಾಗಿ ಪೊಲೀಸರ ಸಮ್ಮುಖದಲ್ಲಿ ಮೂವರೂ ಒಪ್ಪಿಕೊಂಡರು. ಈ ಹಿನ್ನೆಲೆ ಅವರನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

ಹೋರಾಟಗಾರ ಅಣಗಳ್ಳಿ ಬಸವರಾಜು ಮಾತನಾಡಿ ಕಲಾಂ ಸಂಸ್ಥೆ ನಂಬಿ 170ಕ್ಕೂ ಅಧಿಕ ಮಂದಿ ಲಕ್ಷಾಂತರ ರು. ನೀಡಿ ಹಣ ಕಳೆದುಕೊಂಡಿದ್ದಾರೆ, ಜು. 12ರಂದು ಹಣ ನೀಡುವುದಾಗಿ ಶ್ರೀಕಂಠ, ಸುಂದರ್, ಕೃಷ್ಣ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಅಂದು ಹಣ ನೀಡದಿದ್ದರೆ ಮುಂದಿನ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.